ಬೆಂಗಳೂರು/ನವದೆಹಲಿ, (www.thenewzmirror.com);
ಕಳೆದ ಎರಡು ದಿನಗಳ ಹಿಂದೆ ಸಂಸತ್ ಕಲಾಪ ನಡೆಯುತ್ತಿದ್ದ ವೇಳೆ ಏಕಾಏಕಿ ನುಗ್ಗಿದ್ದ ಯುವಕರ ಪ್ರಕರಣ ಮಹತ್ವದ ತಿರುವು ಪಡೆದುಕೊಳ್ಳುತ್ತಿದೆ. ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ಪಾಸ್ ಪಡೆದಿದ್ದ ಯುವಕರು ಭದ್ರತಾ ಪಡೆಯ ವೈಫಲ್ಯದಿಂದ ಸಂಸತ್ ಭವನದ ಒಳಗೆ ನುಗ್ಗಿದ್ದರು. ಈ ವೇಳೆ ಯುವಕರನ್ನ ಬಂಧಿಸಿದ್ದ ಪೊಲೀಸರು ನಡೆಸಿದ ತನಿಖೆ ವೇಳೆ ಸಂಸತ್ತಿನೊಳಗೆ ನುಗ್ಗಲು ಎ ಮತ್ತು ಬಿ ಪ್ಲಾನ್ ಮಾಡಲಾಗಿತ್ತು, ಒಂದು ವಿಫಲವಾದರೆ, ಇನ್ನೊಂದನ್ನು ಕಾರ್ಯಗತಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಂತೆ.
ಇಬ್ಬರು ಯುವಕರು ಸಂಸತ್ತಿನೊಳಗೆ ನುಸುಳಿರುವ ರೀತಿ ಮತ್ತು ಭದ್ರತೆ ಕುರಿತಂತೆ ತನಿಖೆ ನಡೆಸುವಾಗ ಹೊಸ ಮಾಹಿತಿಯನ್ನ ಯುವಕರು ಹೊರಹಾಕಿದ್ದಾರಂತೆ. ಸಂಸತ್ತಿನ ಭದ್ರತಾ ಲೋಪ ಪ್ರಕರಣದ ಪ್ರಮುಖ ಆರೋಪಿ ಲಲಿತ್ ಝಾ ಅವರನ್ನು ಈಗಾಗಲೇ ದೆಹಲಿ ಪೊಲೀಸರ ವಿಶೇಷ ಸೆಲ್ ಬಂಧಿಸಿದೆ. ವಿಶೇಷ ಕೋಶದ ವಿಚಾರಣೆಯ ಸಮಯದಲ್ಲಿ, ಲಲಿತ್ ಅವರೂ ಸಹ ಇದೇ ಮಾಹಿತಿಯನ್ನ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರಂತೆ.
ಸಂಸತ್ತಿನ ಒಳನುಸುಳುವಿಕೆ ಪ್ರಕರಣದಲ್ಲಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಮನೋರಂಜನ್ ಡಿ, ಸಾಗರ್ ಶರ್ಮಾ, ಅಮೋಲ್ ಶಿಂಧೆ, ನೀಲಂ ಆಜಾದ್ ಮತ್ತು ಲಲಿತ್ ಝಾ ಸೇರಿದ್ದಾರೆ. ಗುರುಗ್ರಾಮದಲ್ಲಿ ವಿಕ್ಕಿ ಎಂಬ ವ್ಯಕ್ತಿಯನ್ನೂ ಬಂಧಿಸಲಾಗಿದೆ. ಇದಲ್ಲದೆ ಮಹೇಶ್ ಮತ್ತು ಕೈಲಾಶ್ ಎಂಬುವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಪ್ಲಾನ್ ಎ ಮತ್ತು ಪ್ಲಾನ್ ಬಿ ಎಂದರೇನು?
ಪ್ಲಾನ್ ಎ ಅಡಿಯಲ್ಲಿ, ಮನೋರಂಜ್ ಡಿ ಮತ್ತು ಸಾಗರ್ ಶರ್ಮಾ ಅವರು ಸಂಸತ್ತಿನ ಒಳಗೆ ಹೋಗಬೇಕಿತ್ತು, ಸಂದರ್ಶಕರ ಹತ್ತಿರದಲ್ಲಿ ಇದ್ದಿದ್ದರಿಂದ ಸಾಧ್ಯವಾದಷ್ಟು ಬೇಗ ಒಳಪ್ರವೇಶ ಮಾಡಲು ಸಹಾಯವಾಗುತ್ತಿತ್ತು. ಈ ಪ್ಲಾನ್ ಪ್ರಕಾರ ಅಮೋಲ್ ಮತ್ತು ನೀಲಂ ಸಂಸತ್ತಿನ ಹೊರಗಿನ ಸಾರಿಗೆ ಭವನದ ಬಳಿ ಕಾಯಬೇಕಿತ್ತು.
ಪ್ಲಾನ್ ಬಿ ಪ್ರಕಾರ ಕೆಲವು ಕಾರಣಗಳಿಂದ ನೀಲಂ ಮತ್ತು ಅಮೋಲ್ ಅವರು ಸಂಸತ್ತಿನ ಬಳಿಗೆ ಬರಲು ಸಾಧ್ಯವಾಗದಿದ್ದರೆ, ಅವರ ಸ್ಥಾನದಲ್ಲಿ ಮಹೇಶ್ ಮತ್ತು ಕೈಲಾಶ್ ಇನ್ನೊಂದು ಬದಿಯಿಂದ ಸಂಸತ್ತಿಗೆ ಪ್ರವೇಶ ಮಾಡಬೇಕೆಂದು ತೀರ್ಮಾನಿಸಲಾಗಿತ್ತು.