ಬೆಂಗಳೂರು, (www.thenewzmirror.com) ;
ಬೆಂಗಳೂರು ನಿರ್ಮಾತೃ, ನಾಡಫ್ರಭು ಕೆಂಪೇಗೌಡರ ಜಯಂತಿಯನ್ನ ರಾಜ್ಯ ಸರ್ಕಾರ ಇತ್ತೀಚೆಗೆ ಅದ್ಧೂರಿಯಾಗಿ ಆಚರಣೆ ಮಾಡ್ತು. ಸರ್ಕಾರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಯಶಸ್ವಿನೂ ಆಗಿತ್ತು. ನಾಡಫ್ರಭುವಿನ ಜಯಂತಿಗಾಗಿ ಸರ್ಕಾರದ ವತಿಯಿಂದ ಬೆಂಗಳೂರಿನ ಅನೇಕ ಭಾಗಗಳಲ್ಲಿ ದೊಡ್ಡ ದೊಡ್ಡ ಕಟೌಟ್ ಗಳನ್ನೂ ಹಾಕಲಾಗಿತ್ತು.
ಇದೇ ತಿಂಗಳ 7 ರಂದು ಕೆಎಸ್ ಆರ್ ಟಿಸಿ ನೌಕರರ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಯ ಆಡಳಿತ ಮಂಡಳಿಯ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ರಾಜ್ಯದ ನಾಲ್ಕೂ ಸಾರಿಗೆ ನಿಗಮದಲ್ಲಿ ಹಾಲಿ ಹಾಗೂ ಮಾಜಿ ಸಿಬ್ಬಂದಿ ಸ್ಪರ್ಧೆ ಮಾಡಿದ್ದಾರೆ. ಚುನಾವಣೆಗೆ ನಿಂತವರ ಪರ ಪ್ರಚಾರ ಮಾಡೋದಿಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಕೆಂಪೇಗೌಡರ ಭಾವಚಿತ್ರವನ್ನ ಬಳಕೆ ಮಾಡಿಕೊಂಡಿದೆ. ಆದ್ರೀದು ಸಾಕಷ್ಟು ಆಕ್ರೋಶ ಹಾಗೂ ಅಸಮಧಾನಕ್ಕೆ ಕಾರಣವಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಚುನಾವಣಾ ಪ್ರಚಾರದ ಪಾಂಪ್ಲೆಟ್ ಅನ್ನ ನಾಡಫ್ರಭು ಕೆಂಪೇಗೌಡ ಭಾವಚಿತ್ರಕ್ಕೆ ಅಂಟಿಸಿ ಪ್ರಚಾರ ಮಾಡುವ ಕೆಲಸವನ್ನ ಮಾಡುತ್ತಿದೆ. ಸಹಜವಾಗಿಯೇ ಇದು ಒಕ್ಕಲಿಗ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಚುನಾವಣೆಗೆ ನಮ್ಮ ತಕರಾರು ಇಲ್ಲ ಆದರೆ ಚುನಾವಣಾ ಪಾಂಪ್ಲೆಟ್ ಅನ್ನ ಭಾವಚಿತ್ರದ ಮೇಲೆ ಹಾಕುವ ಮೂಲಕ ನಾಡಫ್ರಭುವಿಗೆ ಅಪಮಾನ ಮಾಡುವ ಕೆಲಸವನ್ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಮಾಡಿದೆ ಅಂತ ಆಕ್ರೋಶ ಹೊರಹಾಕುತ್ತಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ನಾಡಫ್ರಭುವಿನ ಭಾವಚಿತ್ರದ ಮೇಲೆ ಹಾಕಿರುವ ಚುನಾವಣಾ ಪ್ರಚಾರದ ಪಾಂಪ್ಲೆಟ್ ಅನ್ನ ತೆಗೆಯುವ ಜತೆಗೆ ಕ್ಷಮೆ ಕೇಳಬೇಕು ಎಂದೂ ಸಮುದಾಯದ ಕೆಲ ಮುಖಂಡರು ಒತ್ತಾಯ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಯಾವುದೇ ಚುನಾವಣಾ ಅಂತ ಬಂದಾಗಲೂ ಆಯಾ ಸಮುದಾಯವರು ತಮ್ಮ ತಮ್ಮ ಸಮುದಾಯದ ಪರಮೋಚ್ಛ ನಾಯಕರ ಸಾಧನೆ, ಅವರ ಭಾವಚಿತ್ರವನ್ನ ಚುನಾವಣಾ ಪ್ರಚಾರದಲ್ಲಿ ಬಳಸಿ ಮತ ಕೇಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ. ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಈ ರೀತಿ ಭಾವಚಿತ್ರಕ್ಕೆ ಪ್ರಚಾರದ ಪಾಂಪ್ಲೆಟ್ ಅಂಟಿಸಿರೋದು ಎಷ್ಟು ಸರಿ ಎನ್ನುವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.