ಬೆಂಗಳೂರು, (www.thenewzmirror.com) ;
ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೆಸರು ಬದಲಾಯಿಸಿದ ಕಾರಣಕ್ಕೆ ಯುವ ಪೀಳಿಗೆಗೆ ಉದ್ಯೋಗ ಹಾಗು ಜೀವನ ಕಟ್ಟಿಕೊಳ್ಳಲು ಹೆಚ್ಚು ಅವಕಾಶಗಳು ಸೃಷ್ಟಿಯಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಪಟ್ಟರು.
ಚನ್ನಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ ಮಾತನಾಡಿದ ಅವರು “ಬೆಂಗಳೂರಿನ ಹೆಸರು ಈ ಜಿಲ್ಲೆಗೆ ಏಕೆ ಬೇಕು ಎಂದು ಒಂದಷ್ಟು ಜನ ಪ್ರಶ್ನೆ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಆಗುವುದು ಬೇಕಿಲ್ಲವೆ. ಉದ್ಯೋಗ ಸೃಷ್ಟಿ ಮಾಡುವುದೇ ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ. ನಾವು ಉದ್ಯೋಗ ಮೇಳಕ್ಕೆ ಬಂದಿರುವ ಎಲ್ಲರಿಗೂ ಕೆಲಸ ಕೊಡಿಸುತ್ತೇವೆ ಎಂದು ಹೇಳುವುದಿಲ್ಲ. ಆದರೆ ಯಾವ ಮಾರ್ಗದಲ್ಲಿ ನಡೆದರೆ ಯಶಸ್ಸು ಸಿಗುತ್ತದೆ ಎಂದು ದಾರಿ ಮಾಡಿಕೊಡುತ್ತೇವೆ” ಎಂದು ಹೇಳಿದರು.
“ನಾನು ಅನೇಕ ಹೆಣ್ಣು ಮಕ್ಕಳನ್ನು ಮಾತನಾಡಿಸಿಕೊಂಡು ಬಂದೆ. ಅನೇಕರಲ್ಲಿ ದುಡಿಯಬೇಕು ಎನ್ನುವ ಹಸಿವು ಹೆಚ್ಚಿದೆ. ನನಗೆ ಅನೇಕರ ಪರಿಸ್ಥಿತಿ ನೋಡಿ ಸಂಕಟ ಉಂಟಾಯಿತು. ನಮ್ಮ ಊರಿನ ಪಕ್ಕದ ಲಂಬಾಣಿ ತಾಂಡದ ಹೆಣ್ಣು ಮಗಳು ಬಂದಿದ್ದು ನೋಡಿ ಸಂತೋಷವಾಯಿತು. ಬಯಾಲಜಿ ಓದಿರುವ ವಿದ್ಯಾರ್ಥಿನಿಯನ್ನು ಒಂದು ಕಂಪೆನಿಯವರು ಸಂದರ್ಶನ ಮಾಡುತ್ತಿದ್ದರು. ಕೊನೆಗೆ 20 ಸಾವಿರ ಸಂಬಳ ಕೊಡುತ್ತೇವೆ ಎಂದು ಹೇಳಿದರು. ಆಗ ಆ ಹೆಣ್ಣು ಮಗಳು ನನಗೆ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲ ಅದನ್ನು ಮಾಡಿ ಎಂದಾಗ ನನಗೆ ಹೊಟ್ಟೆಯಲ್ಲಿ ಸಂಕಟವಾಯಿತು. ಈ ಸಮಸ್ಯೆಗಳ ನಿವಾರಣೆಗೆ ಸರ್ಕಾರ ಮುಂದಾಗಲಿದೆ” ಎಂದು ಭರವಸೆ ನೀಡಿದರು.
ಆಯಾಯ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ
“ಬೆಂಗಳೂರಿನ ಮೇಲೆ ಒತ್ತಡ ಹೆಚ್ಚಾಗುತ್ತಿರುವ ಕಾರಣಕ್ಕೆ ಆಯಾಯ ಜಿಲ್ಲೆಗಳಲ್ಲೇ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಲಾಗುತ್ತಿದೆ. ಅನೇಕ ಮಂತ್ರಿಗಳು ಅವರ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜಿಸಿ ಯುವಕರಿಗೆ ನೆರವಾಗಿದ್ದಾರೆ” ಎಂದು ಹೇಳಿದರು.