ಬೆಂಗಳೂರು, (www.thenewzmirror.com );
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಮಾರ್ಗಮಧ್ಯದಲ್ಲಿಯೇ ಬಸ್ಸಿನ ನಿರ್ವಾಹಕಿ ಮಹಿಳೆಗೆ ಹೆರಿಗೆ ಮಾಡಿಸಿದ ಘಟನೆ ನಡೆದಿದೆ. ಹೆರಿಗೆ ಬಳಿಕ ಮಗು ಮತ್ತು ಮಹಿಳೆ ಆರೋಗ್ಯವಾಗಿದ್ದಾರೆ ಎಂದು KSRTC ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್‌ನಲ್ಲಿ ಬೆಂಗಳೂರಿನಿಂದ ಬೇಲೂರಿಗೆ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ಬಸ್ ನಿಲ್ಲಿದ್ದಾರೆ. ಬಳಿಕ ಬಸ್‌ನ ನಿರ್ವಾಹಕಿ ವಸಂತ ಅವರು ಗರ್ಭಿಣಿಗೆ ಹೆರಿಗೆ ಮಾಡಿಸಲು ಸಹಾಯ ಮಾಡಿದ್ದಾರೆ. ಮಾರ್ಗಮಧ್ಯೆಯೇ ಮಹಿಳೆ ಬಸ್‌ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಹಿಳೆಯು ಆರ್ಥಿಕವಾಗಿ ದುರ್ಬಲಳಾಗಿದ್ದ ಕಾರಣ ನಿಗಮದ ಚಾಲನಾ ಸಿಬ್ಬಂದಿ ಮಹಿಳೆಯ ತುರ್ತು ಖರ್ಚಿಗಾಗಿ ಎಲ್ಲಾ ಪ್ರಯಾಣಿಕರಿಂದ ಒಟ್ಟು ರೂ.1500 ಗಳನ್ನು ಸಂಗ್ರಹಿಸಿ ಮಹಿಳೆಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಶಾಂತಿಗ್ರಾಮ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.
ಸಕಾಲದಲ್ಲಿ ಸದರಿ ಮಹಿಳಾ ಪ್ರಯಾಣಿಕರಿಗೆ ಸ್ಪಂದಿಸಿ ಮಗು ಮತ್ತು ತಾಯಿಯನ್ನು ಉಳಿಸಿ ಮಾನವೀಯ ನೆರವನ್ನು ನೀಡಿದ ನಿರ್ವಾಹಕಿಯವರ ಕಾರ್ಯವು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ತಿಳಿಸಿದ್ದಾರೆ. ಹಾಗೆನೇ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.