ಬೆಂಗಳೂರು, (www.thenewzmirror.com) ;
ಲೋಕಸಭೆಯಲ್ಲಿ ತುಮಕೂರಿನಿಂದ ಮೊದಲ ಬಾರಿಗೆ ಗೆದ್ದು ಕೇಂದ್ರದಲ್ಲಿ ಸಚಿವರಾಗಿರುವ ವಿ ಸೋಮಣ್ಣ, ತನ್ನ ತವರು ಕ್ಷೇತ್ರದ ಮತದಾರರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಕೆಎಸ್ಆರ್ ಬೆಂಗಳೂರುನಿಂದ ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ್ ರೈಲು ಇಂದಿನಿಂದ ತಮಕೂರು ನಿಲ್ದಾಣದಲ್ಲಿ ನಿಲುಗಡೆಯಾಗುತ್ತದೆ. ಈ ಕುರಿತು ಟ್ವೀಟ್ ಮಾಡಿರುವ ನೈಋತ್ಯ ರೈಲ್ವೆ ವಲಯ, ವಂದೇ ಭಾರತ್ ತುಮಕೂರು ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದೆ.
ವಂದೇ ಭಾರತ್ ರೈಲು ತುಮಕೂರಿನಲ್ಲಿ ಇಂದು ಸಂಜೆ 6.18ಕ್ಕೆ ಮೊದಲ ಸ್ಟಾಪ್ ನೀಡಲಿದೆ. ಆ ಬಳಿಕ ಆಗಸ್ಟ್ 24 ರಿಂದ ಧಾರವಾಡಕ್ಕೆ ತೆರಳುವಾಗ ಹಾಗೂ ಧಾರವಾಡದಿಂದ ಹಿಂದಿರುಗುವಾಗ ಬೆಳಗ್ಗೆ ಹಾಗೂ ಸಂಜೆ ನಿಲುಗಡೆಯಾಗಲಿದೆ.
ರೈಲಿನ ವೇಳಾ ಪಟ್ಟಿ ಹೀಗಿರಲಿದೆ
- ರೈಲು ಸಂಖ್ಯೆ 20662 ಧಾರವಾಡ-ಕೆ.ಎಸ್.ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣಕ್ಕೆ ಸಂಜೆ 6.18/6.20 ಘಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
- ರೈಲು ಸಂಖ್ಯೆ 20661 ಕೆ.ಎಸ್.ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣಕ್ಕೆ ಬೆಳಿಗ್ಗೆ 6:32/6:34 ಘಂಟೆಗೆ ಆಗಮಿಸಿ/ ನಿರ್ಗಮಿಸಲಿದೆ.
ಈ ಮೊದಲು ವಂದೇ ಭಾರತ್ ರೈಲು ಕೆಎಸ್ಆರ್ ಬೆಂಗಳೂರಿನಿಂದ ಹೊರಟು ಯಶವಂತಪುರ, ದಾವಣಗೆರೆ, ಹುಬ್ಬಳ್ಳಿಯಲ್ಲಿ ಮಾತ್ರ ನಿಲುಗಡೆಯಾಗಿ ಧಾರವಾಡ ತಲುಪುತ್ತಿತ್ತು. ಅದೇ ರೀತಿ ಧಾರವಾಡದಿಂದ ಹೊರಟ ವಂದೇ ಭಾರತ್ ರೈಲು ಹುಬ್ಬಳ್ಳಿ, ದಾವಣಗೆರೆ, ಯಶವಂತಪುರದಲ್ಲಿ ನಿಲುಗಡೆಯಾಗಿ ಕೆಎಸ್ ಆರ್ ಬೆಂಗಳೂರು ತಲುಪುತ್ತಿತ್ತು.