ಬೆಂಗಳೂರು, (www.thenewzmirror.com) ;
ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.
ಆರೋಪಿಗಳನ್ನು ಮುಸ್ಸಾವಿರ್ ಹುಸೇನ್ ಶಾಜಿಬ್, ಅಬ್ದುಲ್ ಮಥೀನ್ ಅಹ್ಮದ್ ತಾಹಾ, ಮಾಜ್ ಮುನೀರ್ ಅಹ್ಮದ್ ಮತ್ತು ಮುಝಮ್ಮಿಲ್ ಷರೀಫ್ ಎಂದು ಗುರುತಿಸಲಾಗಿದ್ದು, ಐಪಿಸಿ, ಯುಎ (ಪಿ) ಆಕ್ಟ್, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಪಿಡಿಎಲ್‌ಪಿ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್ ಮಾಡಲಾಗಿದೆ.
ಎಲ್ಲಾ ನಾಲ್ವರನ್ನು ಮೊದಲು ಬಂಧಿಸಲಾಗಿದ್ದು, ಪ್ರಸ್ತುತ RC-01/2024/NIA/BLR ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಐಟಿಪಿಎಲ್ ಬೆಂಗಳೂರಿನ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1 ರಂದು ಸಂಭವಿಸಿದ ಐಇಡಿ ಸ್ಫೋಟದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದು, ಹೋಟೆಲ್ ಸಂಪೂರ್ಣ ಹಾನಿಯಾಗಿತ್ತು.
ಮಾರ್ಚ್ 3 ರಂದು ಪ್ರಕರಣದ ತನಿಖೆಯನ್ನು ಆರಂಭಿಸಿದ ಎನ್ಐಎ, ವಿವಿಧ ರಾಜ್ಯ ಪೊಲೀಸ್ ಸಹಾಯದೊಂದಿಗೆ ನಡೆಸಿದ ಕಾರ್ಯಾಚರಣೆ ವೇಳೆ ಶಜೀಬ್ ಬಾಂಬ್ ಇಟ್ಟಿದ್ದ ವ್ಯಕ್ತಿ ಎಂಬುದು ತನಿಖೆಯಿಂದ ತಿಳಿದುಬಂದಿತ್ತು. ತಾಹಾ ಜೊತೆಗೆ, ಈ ಹಿಂದೆ ಅಲ್-ಹಿಂದ್ ಮಾಡ್ಯೂಲ್ ಅನ್ನು ಸ್ಫೋಟಿಸಿದ ನಂತರ 2020 ರಿಂದ ತಲೆಮರೆಸಿಕೊಂಡಿದ್ದರು.
ರಾಮೇಶ್ವರಂ ಕೆಫೆ ಸ್ಫೋಟದ 42 ದಿನಗಳ ನಂತರ ಪಶ್ಚಿಮ ಬಂಗಾಳದಲ್ಲಿ ಅಡಗಿದ್ದ ಉಗ್ರರನ್ನ ವಶಕ್ಕೆ ಪಡಿಸಿಕೊಂಡು ತನಿಖೆ ಮುಂದುವರೆಸಿದಾಗ ಶಿವಮೊಗ್ಗ ಜಿಲ್ಲೆಯವರಾದ ಇಬ್ಬರು ವ್ಯಕ್ತಿಗಳು ಐಸಿಸ್ ಮೂಲಭೂತವಾದಿಗಳಾಗಿದ್ದು, ಈ ಹಿಂದೆ ಸಿರಿಯಾದ ಐಸಿಸ್ ಪ್ರಾಂತ್ಯಗಳಿಗೆ ಹಿಜ್ರಾ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿತ್ತು.
ಯುವಕರನ್ನ ISIS ಗೆ ಸೇರಿಸುವಲ್ಲಿ ಪ್ರಮುಖ ಪಾತದರ ವಹಿಸಿದ್ದರೆಂದು ಇದೇ ವೇಳೆ ತಿಳಿದುಬಂದಿದೆ. ತಾಹಾ ಮತ್ತು ಶಾಜಿಬ್ ನಕಲಿ ಸಿಮ್ ಬಳಸಿದ್ದಲ್ಲದೆ ಬ್ಯಾಂಕ್ ಗಳಲ್ಲೂ ಖಾತೆ ಹೊಂದಿದ್ದರು ಹಾಗೆನೇ ಡಾರ್ಕ್ ವೆಬ್‌ನಿಂದ ಡೌನ್‌ಲೋಡ್ ಮಾಡಿದ ದಾಖಲೆಗಳನ್ನ ಬಳಸಿಕೊಂಡು ತಮ್ಮ ಗುರುತಿನ ಚೀಟಿ ಮಾಡಿಸಿಕೊಂಡಿದ್ದರಂತೆ.
2024 ರ ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭದ ದಿನದಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ವಿಫಲವಾದ IED ದಾಳಿಯು ಇದರಲ್ಲಿ ಸೇರಿದೆ, ನಂತರ ಇಬ್ಬರು ಪ್ರಮುಖ ಆರೋಪಿಗಳು ರಾಮೇಶ್ವರಂ ಕೆಫೆ ಸ್ಫೋಟವನ್ನು ಯೋಜಿಸಿದ್ದರು ಎಂದು ತಿಳಿದು ಬಂದಿದೆ.