ಬೆಂಗಳೂರು, (www.thenewzmirror.com) ;
ಭಾರತ ದೇಶ ಕಂಡ ಅಪ್ರತಿಮ ಪ್ರತಿಭೆ, ಬ್ಯುಸಿನೆಸ್ ಮೆನ್, ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರಾದ ರತನ್ ಟಾಟಾ ಕೊನೆಯುಸಿರೆಳೆದಿದ್ದಾರೆ. 86 ವಯಸ್ಸಿನ ರತನ್ ಟಾಟಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಆರೋಗ್ಯ ಗಂಭೀರವಾಗಿದೆ ಎಂದು ಬುಧವಾರ ಸಂಜೆಯಷ್ಟೇ ಸುದ್ದಿಯಾಗಿತ್ತು. ರಾತ್ರಿ ವೇಳೆಗೆ ಅವರು ನಮ್ಮನ್ನೆಲ್ಲ ಅಗಲಿದ್ದಾರೆ.
ದೇಶದ ಪ್ರಮುಖ ಉದ್ಯಮಗಳಲ್ಲಿ ಒಂದಾಗಿರುವ ಹಾಗೂ ಭಾರತೀಯರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ಟಾಟಾ ಸನ್ಸ್‌ನ ಅಧ್ಯಕ್ಷರಾದ ರತನ್ ಟಾಟಾ ಇನ್ಮುಂದೆ ನೆನಪು ಮಾತ್ರ. ರತನ್‌ಟಾಟಾ ಅವರನ್ನು ಸೋಮವಾರ ಮಹಾರಾಷ್ಟ್ರದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾರಂಭದಲ್ಲಿ ಅವರು ಸಾಮಾನ್ಯ ಆರೋಗ್ಯ ಪರೀಕ್ಷೆ ಒಳಪಟ್ಟಿದ್ದಾರೆ ಎಂದೇ ಹೇಳಲಾಗಿತ್ತು. ಅಲ್ಲದೇ ಅವರು ಸಹ ನಾನು ಆರೋಗ್ಯವಾಗಿಯೇ ಇದ್ದೇನೆ. ಚಿಂತಿಸಬೇಡಿ ಎಂದೇ ಹೇಳಿದ್ದರು. ಆದರೆ, ಅವರ ಆರೋಗ್ಯದ ಬಗ್ಗೆ ಅನುಮಾನಗಳು ಮೂಡಿದ್ದವು. ಅದರಂತೆ ಬುಧವಾರ ಸಂಜೆಯ ವೇಳೆಗೆ ಅವರ ಆರೋಗ್ಯ ಕ್ಷೀಣಿಸುತ್ತಿದೆ ಎನ್ನುವ ವರದಿಗಳು ಬರಲು ಪ್ರಾರಂಭಿಸಿತ್ತು. ಬುಧವಾರ ತಡರಾತ್ರಿ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಖಚಿತಪಡಿಸಿವೆ.
ಟಾಟಾ ಸಮೂಹದ ಮುಖ್ಯಸ್ಥ ರತನ್ ಟಾಟಾ ಅವರಿಗೆ 86 ವರ್ಷವಾಗಿತ್ತು. ಅವರು ವಯೋಸಹಜ ಸಮಸ್ಯೆಯಿಂದ ಬಳಲುತ್ತಿದ್ದರು.
ರತನ್ ಟಾಟಾ ಇನ್ನಿಲ್ಲದ ಸುದ್ದಿ ಕೇಳಿದ ಪ್ರತಿಯೊಬ್ಬ ಭಾರತೀಯರ ಎದೆಯಲ್ಲಿ ಈಗ ನೋವು ಶುರುವಾಗಿದೆ. ರತನ್ ಟಾಟಾ ಅವರ ಸಾವಿನ ಸುದ್ದಿ ಇದೀಗ ಜಗತ್ತಿನಾದ್ಯಂತ ಕಿಚ್ಚು ಹೊತ್ತಿಸಿದೆ. ದೇಶದ ಉದ್ಯಮ ವಲಯಕ್ಕೆ ದೊಡ್ಡ ಸೇವೆ ಸಲ್ಲಿಸಿ, ತಮ್ಮ ಇಡೀ ಜೀವನವನ್ನೇ ಮುಡಿಪಾಗಿ ಇಟ್ಟಿದ್ದ ವ್ಯಕ್ತಿ ಇಂದು ಶತಕೋಟಿ ಭಾರತೀಯರನ್ನು ಬಿಟ್ಟು ಹೋಗಿದ್ದಾರೆ. ಈ ಮೂಲಕ ಭಾರತೀಯ ಉದ್ಯಮ ವಲಯವು ಇದೀಗ, ರತನ್ ಟಾಟಾ ಅವರ ನಿಧನದ ಸುದ್ದಿ ಕೇಳಿ ನಲುಗಿ ಹೋಗಿದೆ.
1937ರ ಡಿಸೆಂಬರ್ 28ರಂದು ಜನಿಸಿದ್ದ ಟಾಟಾ!
1937ರ ಡಿಸೆಂಬರ್ 28ರಂದು ಹುಟ್ಟಿದ ರತನ್ ಟಾಟಾ ಈ ದೇಶದ ಅತ್ಯಂತ ಯಶಸ್ವಿ ಉದ್ಯಮಿಯಾಗಿ ಬೆಳೆದರು. ವ್ಯಾಪಾರ ನೀತಿಯಲ್ಲಿ ಹೆಸರು ಮಾಡಿದಂತೆ, ತಮ್ಮ ಪರೋಪಕಾರ ನಡೆಯಿಂದಲೂ ಸಿಕ್ಕಾಪಟೆ ಖ್ಯಾತಿ ಗಳಿಸಿದ್ದಾರೆ. ಮುಂಬೈನಲ್ಲಿ ಜನಿಸಿದ ಇವರ ತಂದೆ ಹೆಸರು ನೇವಲ್ ಟಾಟಾ, ತಾಯಿ ಸೂನಿ ಟಾಟಾ. ಇವರ ಕುಟುಂಬ ಮೂಲತಃ ಗುಜರಾತ್ನ ಸೂರತ್ನಲ್ಲಿದೆ.
1948ರಲ್ಲಿ ಅವರ ತಂದೆ ನೇವಲ್ ಟಾಟಾ ಮತ್ತು ತಾಯಿ ಸೂನಿ ಟಾಟಾ ಬೇರೆಯಾಗುತ್ತಾರೆ. ಆಗಿನಿಂದಲೂ ರತನ್ ಟಾಟಾ ಅವರು ಅಜ್ಜಿಯ ಆಶ್ರಯ ಪಡೆದುಕೊಂಡರು. 1961ರಲ್ಲಿ ಟಾಟಾ ಸ್ಟೀಲ್ನಲ್ಲಿ ಮೊದಲು ಕೆಲಸಕ್ಕೆ ಸೇರಿಕೊಂಡರು. ಅದಾದ ಬಳಿಕ 1991ರಲ್ಲಿ ಟಾಟಾ ಗ್ರೂಪ್‌ನ ಅಧ್ಯಕ್ಷರಾದರು. ಬರೋಬ್ಬರಿ 21 ವರ್ಷ ಅಂದರೆ 2012ರವರೆಗೆ ಟಾಟಾ ಗ್ರೂಪ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.