ಬೆಂಗಳೂರು, (www.thenewzmirror.com) ;
ರೆಡ್ಡಿ ಸಮುದಾಯದ ಹಿರಿಯ ನಾಯಕರು ಹಾಗೂ ಬಿಟಿಎಂ ಲೇಔಟ್ ಕ್ಷೇತ್ರದ ಶಾಸಕರಾದ ರಾಮಲಿಂಗಾರೆಡ್ಡಿ ಅವರನ್ನು ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕೆಂದು ಕರ್ನಾಟಕ ರೆಡ್ಡಿ ಜನ ಸಂಘದ ಅಧ್ಯಕ್ಷ ಜಯರಾಮ್ ರೆಡ್ಡಿ ಆಗ್ರಹಿಸಿದ್ದಾರೆ.
ಸಮುದಾಯದ ಕಛೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, 8ನೇ ಬಾರಿ ಶಾಸಕರಾಗಿ ಆಯ್ಕೆಯಾಗಿ, ವಿವಿಧ ಇಲಾಖೆಗಳಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ರಾಮಲಿಂಗಾರೆಡ್ಡಿ ಅವರು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ ಅವರಿಗಿಂತ ಹೆಚ್ಚುಬಾರಿ ಶಾಸಕರಾಗಿದ್ದಾರೆ. ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದ್ದರೂ ಸಹ ಪಕ್ಷದ ಶಿಸ್ತಿನ ಸಿಪಾಯಿ ಆಗಿರುವುದರಿಂದ ಮುಖ್ಯಮಂತ್ರಿ ಸ್ಥಾನ ಕೇಳಿಲ್ಲ. ಇಂತಹ ನಾಯಕನ್ನು ಕಾಂಗ್ರೆಸ್ ಹೈಕಮಾಂಡ್ ಉಪಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕಂದು ಒತ್ತಾಯಿಸಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿ ನಮ್ಮ ಸಮುದಾಯದ ಕನಿಷ್ಠ ಮೂವರು ನಾಯಕರನ್ನು ಸಚಿವರನ್ನಾಗಿ ಮಾಡಿದ್ದರು. ಕಳೆದ ಬಾರಿಯ ಸರ್ಕಾರದಲ್ಲಿ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿದ ಬಿಜೆಪಿ ಅದರ ಪರಿಣಾಮವನ್ನು ಅನುಭವಿಸಿದೆ. ಪ್ರಸ್ತುತ ಸರ್ಕಾರದಲ್ಲಿ ರೆಡ್ಡಿ ಸಮುದಾಯದ ಕನಿಷ್ಠ ಮೂವರು ನಾಯಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡಿದರು.
ಉಪಾಧ್ಯಕ್ಷ ವೆಂಕಟಶಿವಾ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಎಚ್.ಕೆ. ಪಾಟೀಲ್ ಸೇರಿದಂತೆ 12 ಮಂದಿ ಶಾಸಕರು ಆಯ್ಕೆಯಾಗಿದ್ದು, ರಾಮಲಿಂಗಾರೆಡ್ಡಿ ಅವರಿಗೆ ಡಿಸಿಎಂ ಸ್ಥಾನ ಸೇರಿದಂತೆ ಮೂವರಿಗೆ ಸಚಿವ ಸ್ಥಾನ ನೀಡಬೇಕು. ಇಗಾಗಲೇ ಎಐಸಿಸಿಗೆ ಪತ್ರ ಬರೆದಿದ್ದು, ನಮ್ಮ ಮನವಿ ಪುರಸ್ಕರಿಸದಿದ್ದರೆ ಕಾಂಗ್ರೆಸ್‌ಗೆ ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತವಾಗತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ ಜಂಟಿ ಕಾರ್ಯದರ್ಶಿಗಳಾದ ಸದಾಶಿವಯ್ಯ ರೆಡ್ಡಿ, ಕೃಷ್ಣಾ ರೆಡ್ಡಿ ಹಾಗೂ ಖಜಾಂಚಿಯಾದ ಚಂದ್ರಾರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.