ಬೆಂಗಳೂರು, (www.thenewzmirror.com) ;
ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ತರುವ ಇಲಾಖೆಗಳಲ್ಲಿ ಸಾರಿಗೆ(RTO) ಇಲಾಖೆಯೂ ಒಂದು. ಸರ್ಕಾರ ನಿಗದಿ ಪಡಿಸಿದ್ದಕ್ಕಿಂತಲೂ ಹೆಚ್ಚಿನ ಆದಾಯ ಸಂಗ್ರಹ ಮಾಡುವ ಇಲಾಖೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಿಬ್ಬಂದಿ ಕೊರತೆ ಇತ್ತು. ಅದರಲ್ಲೂ ಸಾರಿಗೆ ನಿಯಮ ಉಲ್ಲಂಘನೆ ಮಾಡುವ ವಾಹನಗಳಿಗೆ ದಂಡ ಹಾಕುವ ಕೆಲಸ ಮಾಡುವ ಮೋಟಾರ್ ವಾಹನ ನಿರೀಕ್ಷರ ಹುದ್ದೆ ಸಾಕಷ್ಟು ಕೊರತೆ ಇತ್ತು.
ಸಾಕಷ್ಟು ಗೊಂದಲ ಹಾಗೂ ಅಡೆತಡೆಗಳನ್ನ ಮೀರಿ ಇದೀಗ ಸಾರಿಗೆ ಇಲಾಖೆಗೆ ಹೊಸದಾಗಿ 83 ಮೋಟಾರು ವಾಹನ ನಿರೀಕ್ಷರು ( RTO Inspector) ಇಲಾಖೆಗೆ ಸೇರ್ಪಡೆಗೊಂಡಿದ್ದಾರೆ. ಫೀಲ್ಡ್ ಗೂ ಹೋಗೋಕೂ ಮೊದಲು ಅವರಿಗೆ ತರಬೇತಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಇದೇ ಶನಿವಾರ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಸಾರಿಗೆ ಇಲಾಖೆ ಆಯುಕ್ತರ ಕೇಂದ್ರ ಕಚೇರಿಯಲ್ಲಿ ತರಬೇತಿ ನೀಡಿದ ಬಳಿಕ ಕಾರ್ಯಾಚರಣೆಗೆ ಕಳುಹಿಸಲು ಇಲಾಖೆ ಮುಂದಾಗಿದೆ.

ಹಲವು ವರ್ಷದ ಸಮಸ್ಯೆ ಬಗೆಹರಿಸಿದ ಸಾರಿಗೆ ಸಚಿವರು..!
ಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ ನಿರೀಕ್ಷಕರ ಕೊರತೆ ಸಾಕಷ್ಟಿತ್ತು. ಬಿಜೆಪಿ ಸರ್ಕಾರದಲ್ಲೂ ಈ ಕೊರತೆ ಇತ್ತಾದರೂ ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರಿರಲಿಲ್ಲ. ಇದೀಗ ಸಾರಿಗೆ ಸಚಿವರಾಗಿರುವ ರಾಮಲಿಂಗಾರೆಡ್ಡಿ ಹಾಗೂ ಸಾರಿಗೆ ಇಲಾಖೆ ಆಯುಕ್ತ ಯೊಗೀಶ್ ಎ.ಎಂ. ಹಾಗೂ ಆಡಳಿತ ವಿಭಾಗದ ಅಪರ ಸಾರಿಗೆ ಆಯುಕ್ತ ಬಿ.ಪಿ. ಉಮಾಶಂಕರ್ ಅವರ ನಿರಂತರ ಪರಿಶ್ರಮದಿಂದಾಗಿ ಮೊದಲ ಹಂತದಲ್ಲಿ 83 ಮೋಟಾರು ವಾಹನ ನಿರೀಕ್ಷರು ಇಲಾಖೆಗೆ ನಿಯುಕ್ತಿಗೊಂಡಿದ್ದಾರೆ.