Protest News | ಬೇಡಿಕೆಗಳನ್ನು ಈಡೇರಿಸದಿದ್ದರೆ ಅಕ್ಟೋಬರ್‌ 4 ರಿಂದ ಹೋರಾಟ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಸಂಘದಿಂದ ಎಚ್ಚರಿಕೆ

Rural Development and Panchayat Raj Department Officials Association Threatens Strike on October 4 if Demands Are Not Met

ಬೆಂಗಳೂರು, (www.thenewzmirror.com) ;

ರಾಜ್ಯದ ಶೇಕಡ 70 ಜನ ಸಮೂಹಕ್ಕೆ ಸೇವೆ ಒದಗಿಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಅಧಿಕಾರಿಗಳು ಮತ್ತು ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಗಾಂಧಿ ಜಯಂತಿ ದಿನವಾದ ಅಕ್ಟೋಬರ್‌ 4 ರಿಂದ ಗ್ರಾಮ ಪಂಚಾಯತ್‌ ಸೇವೆಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಹೋರಾಟ ಮಾಡುವುದಾಗಿ ಕರ್ನಾಟಕ ರಾಜ್ಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಹಾಗೂ ಸಂಬಂಧಪಟ್ಟ ಸಂಘಟನೆಗಳು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. 

RELATED POSTS

ಈ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ, ಗ್ರಾಮ ಪಂಚಾಯತ್‌ ಸದಸ್ಯರ ಒಕ್ಕೂಟದ ರಾಜ್ಯಾಧ್ಯಕ್ಷ ಕಾಡಶೆಟ್ಟಿ ಹಳ್ಳಿ ಸತೀಶ್‌, ಪತ್ರಾಂಕಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಡಿ.ಎ. ರಮೇಶ್ ಮತ್ತಿತರರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಮಾಡಿದ ಮನವಿಗಳಿಗೆ ಸೂಕ್ತ ಸ್ಪಂದನೆ ದೊರೆತಿಲ್ಲ. ಆದರೆ ಎಲ್ಲಾ ಸಮಸ್ಯೆಗಳಿಗೂ ಪಂಚಾಯತ್‌ ಅಭಿವೃದ್ಧಿ ಅಧಿಕಾರಗಳನ್ನೇ ಹೊಣೆ ಮಾಡಲಾಗುತ್ತಿದೆ. ಈ ಧೋರಣೆಯನ್ನು ಖಂಡಿಸಿ ಹೋರಾಟ ಮಾಡುತ್ತೇವೆ ಎಂದರು.

ಪಂಚಾಯತ್‌ ಗಳ ಜನಸಂಖ್ಯೆ ಎರಡರಿಂದ ಮೂರು ಪಟ್ಟು ಹೆಚ್ಚಾಗಿದ್ದರೂ 30 ವರ್ಷಗಳ ಹಿಂದಿನಂತೆ ಸಿಬ್ಬಂದಿ ಹೊಂದಿದ್ದು, ಇದರಿಂದ ಎಲ್ಲಾ ಹೊರೆ ನಮ್ಮ ಮೇಲೆ ಬೀಳುತ್ತಿದೆ. ದಿನದಿಂದ ದಿನಕ್ಕೆ ಕೆಲಸದ ಒತ್ತಡ ತೀವ್ರಗೊಳ್ಳುತ್ತಿದೆ. ಮೂರು ವರ್ಷಗಳಿಂದ ಖಾಲಿಯಾಗಿರುವ ಪಂಚಾಯತ್‌ ಸಿಬ್ಬಂದಿಯನ್ನು ಭರ್ತಿ ಮಾಡಿಕೊಂಡಿಲ್ಲ. ಕಾರ್ಯದರ್ಶಿ ಮತ್ತು ಲೆಕ್ಕ ಪರಿಶೋಧಕರ ಹುದ್ದೆಗಳು ಖಾಲಿ ಇವೆ. ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ರಚಿಸುವಾಗ ಪಿಡಿಒಗಳ ಸಲಹೆಗಳನ್ನು ಪರಿಗಣಿಸಿಲ್ಲ. ಅವೈಜ್ಞಾನಿಕ ನಿಯಮಗಳನ್ನು ಅಳವಡಿಸಲಾಗಿದೆ. ಕುಂದುಕೊರತೆ ಪ್ರಾಧಿಕಾರವನ್ನು ನೆಪಮಾತ್ರಕ್ಕೆ ರಚಿಸಿ ಕೈಬಿಡಲಾಗಿದೆ. ನಮ್ಮ ಅಹವಾಲುಗಳಿಗೆ ಮನ್ನಣೆ ದೊರೆಯುತ್ತಿಲ್ಲ ಎಂದರು.

ಎಲ್ಲಾ ಪಿಡಿಒ ಹುದ್ದೆಗಳನ್ನು ಗೆಜೆಟೆಡ್‌ ಬಿ ಗುಂಪಿಗೆ ಉನ್ನತೀಕರಣ ಮಾಡಬೇಕು. ಒಂದೇ ತಾಲ್ಲೂಕಿನಲ್ಲಿ 7 ವರ್ಷ ಸೇವೆ ಸಲ್ಲಿಸಿದವರನ್ನು ವರ್ಗಾವಣೆ ಮಾಡುವ ನಿಯಮವನ್ನು ಬಲವಂತವಾಗಿ ಹೇರಲಾಗಿದೆ. ಸರ್ಕಾರದ ಒತ್ತಡ ಕಾರ್ಯತಂತ್ರದ ಪರಿಣಾಮ 21 ಪಿಡಿಒಗಳು ಇತ್ತೀಚೆಗೆ ಜೀವ ಕಳೆದುಕೊಂಡಿದ್ದಾರೆ. ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಸಿಲುಕಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಹಾಗೂ ಜಿಲ್ಲೆಯಲ್ಲಿ ಪಿಡಿಓಗಳ ಇಚ್ಚೆ ಇಲ್ಲದೆ ಬಲವಂತವಾಗಿ ಸಾರ್ವಜನಿಕ ಹಿತಾಸಕ್ತಿ ಹೆಸರಿನಲ್ಲಿ ವರ್ಗಾವಣೆ ಮಾಡುವುದನ್ನ ನಿಲ್ಲಿಸಬೇಕು ಎಂದು ಆಗ್ರಹಿಸಿದರು. 

ವರ್ಗಾವಣೆ ನಿಯಮಗಳಲ್ಲಿ ಬದಲಾವಣೆಗೂ ಮುನ್ನ ಸಂಘದ ಸಲಹೆ ಪಡೆಯಬೇಕು. 7 ವರ್ಷ ಪೂರ್ಣಗೊಂಡಿರುವವರನ್ನು ವರ್ಗಾವಣೆ ಮಾಡುವುದನ್ನು ಕೈಬಿಡಬೇಕು. ಪಂಚಾಯತ್‌ ಗಳಿಗೆ ಅಗತ್ಯ ಪೂರಕ ಸಿಬ್ಬಂದಿಯನ್ನು ನೇಮಿಸಬೇಕು. ಪಿಡಿಒ ಜೇಷ್ಠತಾ ಪಟ್ಟಿ ಅಂತಿಮಗೊಳಿಸಿ ಆದೇಶ ಹೊರಡಿಸಬೇಕು. ಪೊಲೀಸ್‌ ಇಲಾಖೆ ಮಾದರಿಯಲ್ಲಿ ಕುಂದುಕೊರತೆ ಪ್ರಾಧಿಕಾರ ಸ್ವಾಪಿಸಬೇಕು. ಕಾರ್ಯದರ್ಶಿ ಗ್ರೇಡ್‌ 1 ರಿಂದ ಪಿಡಿಒ ಆಗಿ ಮುಂಬಡ್ತಿ ನೀಡಲು ವಿಳಂಬವಾಗಿದ್ದು, ಇದರಿಂದ ಒಂದು ಸಾವಿರಕ್ಕೂ ಅಧಿಕ ನೌಕರರು ಮುಂಬಡ್ತಿ ಅವಕಾಶದಿಂದ ವಂಚಿತರಾಗುತ್ತಿದ್ದಾರೆ. ಈ ವಲಯದ ಮುಂಬಡ್ತಿ ಅನುಪಾತವನ್ನು ಶೇ 35 ರಿಂದ ಶೇ 60ಕ್ಕೆ ಹೆಚ್ಚಿಸಬೇಕು. ಈ ಪ್ರಕ್ರಿಯೆ ಜಿಲ್ಲಾ ಮಟ್ಟದಲ್ಲೇ ಆಗಬೇಕು ಎಂದರು.

ದ್ವಿತಿಯ ದರ್ಜೆ ಲೆಕ್ಕ ಸಹಾಯಕರನ್ನು ಪ್ರಥಮ ದರ್ಜೆ ಲೆಕ್ಕ ಸಹಾಯಕರನ್ನಾಗಿ ಗ್ರೇಡ್‌ 1 ಗ್ರಾಮ ಪಂಚಾಯತ್‌ ಗಳಲ್ಲಿ ಮುಂಬಡ್ತಿ ನೀಡಬೇಕು. ದ್ವಿತಿಯ ದರ್ಜೆ ಲೆಕ್ಕ ಸಹಾಯಕರಿಗೆ ಮುಂಬಡ್ತಿ ನೀಡಬೇಕು. ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿರುವ ದ್ವಿತಿಯ ದರ್ಜೆ ಲೆಕ್ಕ ಸಹಾಯಕರನ್ನು ಒಂದು ಬಾರಿಗೆ ಅನ್ವಯವಾಗುವಂತೆ ಶೇ 100 ರಷ್ಟು ಗ್ರೇಡ್‌ 1 ಕಾರ್ಯದರ್ಶಿ ಹುದ್ದೆಗೆ ಮುಂಬಡ್ತಿ ನೀಡಬೇಕು. ಕರವಸೂಲಿಗಾರರು, ಡಾಟಾ ಎಂಟ್ರಿ ಆಪರೇಟರ್‌, ನೀರು ಗಂಟಿ, ಜವಾನರು, ಸ್ವಚ್ಛತಾ ಕೆಲಸಗಾರರಿಗೆ ನಿವೃತ್ತಿಗೆ 5 ವರ್ಷಗಳಿಗೂ ಮುನ್ನ ಗ್ರೇಡ್‌ 2 ಕಾರ್ಯದರ್ಶಿ ಸಮಾನಂತರ ವೇತನ ಶ್ರೇಣಿ ನಿಗದಿ ಮಾಡಬೇಕು. ಗ್ರೇಡ್‌ 1 ಕಾರ್ಯದರ್ಶಿ ಹುದ್ದೆಯ ಕೋಟ ಶೇ 70 ರಷ್ಟು ಹೆಚ್ಚಿಸಬೇಕು. ಎಲ್ಲಾ ಪಂಚಾಯತ್‌ ಗಳಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳ ಮಂಜೂರು ಮಾಡಬೇಕು ಎಂದರು.

ಪಂಚಾಯತ್‌ ಗಳಿಗೆ ಜವಾಬ್ದಾರಿ ನಕ್ಷೆ ಅಧಿಕಾರ, ಕಚೇರಿ ನಿರ್ವಹಣಾ ಕೈಪಿಡಿ, ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುವಂತೆ ನಿಯಮ ರೂಪಿಸಬೇಕು. ಕೆಡಿಪಿ ಸಭೆಗಳನ್ನು ಶಾಸನಬದ್ಧಗೊಳಿಸಬೇಕು. ಗ್ರಾಮ ಪಂಚಾಯತ್‌ ಪ್ರತಿನಿಧಿಗಳನ್ನು ಶಿಷ್ಟಾಚಾರದ ವ್ಯಾಪ್ತಿಗೆ ತರಬೇಕು. ಇವರಿಗೆ ಪಿಂಚಣಿ, ಉಚಿತ ಬಸ್‌ ಸೌಲಭ್ಯ ಕಲ್ಪಿಸಬೇಕು. ಪಂಚಾಯತ್‌ ಗಳಿಗೆ ಪ್ರತ್ಯೇಕ ಲಾಂಛನ ಸೃಜಿಸಿ ಬಳಕೆಗೆ ಅನುಮತಿ ಕೊಡಬೇಕು. ಜಿಲ್ಲಾ ಪಂಚಾಯತ್‌ ನ ಸಿಇಒ ಹುದ್ದೆಗಳಲ್ಲಿ ಶೇ 33 ರಷ್ಟು ಇಲಾಖಾ ಅಧಿಕಾರಿಗಳಿಗೆ ಮೀಸಲಿಡಬೇಕು. ಉಪ ಕಾರ್ಯದರ್ಶಿ ಹುದ್ದೆಯನ್ನು ಜಂಟಿ ಕಾರ್ಯದರ್ಶಿ ಎಂದು ಪದನಾಮ ಮಾಡಬೇಕು. ಕಾರ್ಯ ಒತ್ತಡ ತಗ್ಗಿಸಲು ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗ್ರೇಡ್‌ 2 ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಜಗದೀಶ್‌ ಮಣ್ಣನವರ್‌, ಲೆಕ್ಕ ಸಹಾಯಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹಾಂತೇಶ್‌ ಖೋತಾ, ಡಾಟಾ ಎಂಟ್ರಿ ಆಪರೇಟರ್‌ ಸಂಘದ ಅಧ್ಯಕ್ಷ ಭೀಮರೆಡ್ಡಿ ಪಾಟೀಲ್‌, ಕರವಸೂಲಿಗಾರರ ಸಂಘದ ಅಧ್ಯಕ್ಷ ಎಚ್.‌ ಲಿಂಗೇಶ್‌, ನೀರಗಂಟಿ ವೃಂದ ಸಂಘದ ಅಧ್ಯಕ್ಷ ರಾಮಕೃಷ್ಣಪ್ಪ, ಜವಾನರ ಸಂಘದ ಅಧ್ಯಕ್ಷ ರಾಜೇಶಖರ್‌, ಸ್ವಚ್ಛತಾಗಾರರ ವೃಂದ ಸಂಘದ ಅಧ್ಯಕ್ಷ ಬಿ.ಎ. ನಿತೀನ್‌ ಮತ್ತಿತರರು ಉಪಸ್ಥಿತರಿದ್ದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist