ಬೆಂಗಳೂರು, (www.thenewzmirror.com) ;
ಬೆಂಗಳೂರು ವಿಶ್ವವಿದ್ಯಾಲಯದ ವಿಜ್ಞಾನ ವೇದಿಕೆ ವತಿಯಿಂದ ಜ್ಞಾನಭಾರತಿ ಆವರಣದಲ್ಲಿ ಬಾಹ್ಯಾಕಾಶ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಇಸ್ರೋದ ಹಿರಿಯ ವಿಜ್ಞಾನಿ ಡಾ.ಗಣೇಶ್ ರಾಜ್ ಭಾಗಿಯಾಗಿದ್ರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವ್ರು, ಹವಾಮಾನ ಮುನ್ಸೂಚನೆ, ಸಂಪರ್ಕ, ರಾಷ್ಟ್ರೀಯ ಭದ್ರತೆ, ವೈಜ್ಞಾನಿಕ ಸಂಶೋಧನೆ, ಪರಿಸರ ಮೌಲ್ಯಮಾಪನ ಸೇರಿದಂತೆ ಅನೇಕ ವಲಯಗಳು ಬಾಹ್ಯಾಕಾಶ ಕ್ಷೇತ್ರದ ಮೇಲೆ ಅವಲಂಬಿತವಾಗಿದೆ. ಪ್ರಸ್ತುತ ಭಾರತದ ಬಾಹ್ಯಾಕಾಶ ಕ್ಷೇತ್ರದ ಸಾಧನೆಗೆ ವಿಶ್ವವೇ ಬೆರುಗಾಗಿದೆ ಎಂದು ಅಭಿಪ್ರಾಯ ಪಟ್ರು.
ಭಾರತ ದೂಳಿನಿಂದ ಎದ್ದು ನಿಂತು ಬಾಹ್ಯಾಕಾಶವನ್ನು ತಲುಪಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆ ಅಗಾಧವಾಗಿದೆ. ಹೋಮಿ ಜಹಾಂಗೀರ್ ಬಾಬಾ, ಸತೀಶ್ ಧವನ್ ಅವರ ಕೊಡುಗೆಗಳು ಭಾರತದ ಬಾಹ್ಯಾಕಾಶ ಯಶಸ್ಸಿಗೆ ಅಡಿಪಾಯ ಹಾಕಿದೆ ಎಂದು ಮೆಲುಕು ಹಾಕಿದ್ರು. ಸಾಮಾನ್ಯ ಜನರಿಂದ ದೇಶದ ಭದ್ರತೆವರೆಗೂ ಬಾಹ್ಯಾಕಾಶ ಕ್ಷೇತ್ರದ ಪಾತ್ರ ವಿಸ್ತಾರವಾಗಿದೆ. ಭಾರತ ಇಂದು ಸ್ವಂತ ಬಲದಿಂದ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಶೋಧನೆ, ಆವಿಷ್ಕಾರಗಳನ್ನು ನಡೆಸುತ್ತಿದೆ. ಚಂದ್ರಯಾನದ ಯಶಸ್ಸು ಇಸ್ರೋದ ಸಾಧನೆಗೆ ಮತ್ತಷ್ಟು ಸ್ಪೂರ್ತಿ ನೀಡಿದೆ. BHUVAN ಪೋರ್ಟಲ್ ಮೂಲಕ ಮತ್ತಷ್ಟು ಅಭಿವೃದ್ಧಿ ಸಾಧಿಸಲಾಗುತ್ತಿದೆ ಎಂದರು.
INSAT, IRS, PSLV ಮತ್ತು GSLV ಅಭಿವೃದ್ಧಿ ಪಡಿಸಿದ ಯಶೋಗಾಥೆಯನ್ನು ವಿದ್ಯಾರ್ಥಿಗಳಿಗೆ ಇದೇ ವೇಳೆ ತಿಳಿಸಿದರು. ದೇಶದ ಭದ್ರತೆ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಉಪಗ್ರಹಗಳ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ್ರು.
ಕುಲಪತಿ ಡಾ.ಜಯಕರ ಎಸ್ ಎಂ ಮಾತನಾಡಿ, ಭಾರತ ಚಂದ್ರಯಾನದ ಮೂಲಕ ಇಡೀ ವಿಶ್ವದ ಗಮನ ಸೆಳೆದಿದೆ. ಚಂದ್ರಯಾನದ ಯಶಸ್ಸಿಗೆ ಇಡೀ ವಿಶ್ವ ಇಸ್ರೋಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಚಂದ್ರಯಾನದ ಯಶಸ್ಸಿಗೆ ಪ್ರಮುಖ ಕಾರಣಕಾರ್ತರಾದ ಇಸ್ರೋ ಮುಖ್ಯಸ್ಥ ಡಾ.ಎಸ್.ಸೋಮನಾಥ್‌ರವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ಆ ಮೂಲಕ ಇಡೀ ವಿಜ್ಞಾನಿಗಳಿಗೆ ಕೃತಜ್ಞತೆ ಸಲ್ಲಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ವಿಶ್ವವಿದ್ಯಾಲಯದ ಕೀರ್ತಿ ಹೆಚ್ಚಿಸಿದ್ದಾರೆ. ಆ ಹಿರಿಮೆಯನ್ನು ಮುಂದುವರೆಸಬೇಕಾಗಿದೆ. ಬಾಹ್ಯಾಕಾಶ ವಿಜ್ಞಾನಿಗಳು, ಸಂಸ್ಥೆಗಳು ನಮ್ಮ ವಿದ್ಯಾರ್ಥಿಗಳಿಗೆ ಮತ್ತಷ್ಟು ಮಾರ್ಗದರ್ಶನ ಮಾಡಬೇಕಾಗಿದೆ. ನಮ್ಮ ವಿದ್ಯಾರ್ಥಿಗಳು ಸಾಕಷ್ಟು ಪ್ರತಿಭಾವಂತರಿದ್ದು ಸೂಕ್ತ ಮಾರ್ಗದರ್ಶನ ಕೊರತೆಯನ್ನು ಎದುರಿಸುತ್ತಿದ್ದಾರೆ. ಪರಿಣಿತರು, ವಿಜ್ಞಾನಿಗಳಿಂದ ಸೂಕ್ತ ಮಾರ್ಗದರ್ಶನ ಸಿಕ್ಕರೆ ಮತ್ತಷ್ಟು ಪ್ರತಿಭಾವಂತ ವಿದ್ಯಾರ್ಥಿಗಳು ಬಾಹ್ಯಾಕಾಶ ಕ್ಷೇತ್ರ ಪ್ರವೇಶಿಸಲಿದ್ದಾರೆ. ಬೆಂವಿವಿ ಅನೇಕ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಮಾಡುವ ಮೂಲಕ ಆದ್ಯತೆ ನೀಡಿದೆ.ಬಾಹ್ಯಾಕಾಶ ಕ್ಷೇತ್ರಕ್ಕೆ ಸದಾ ಕೊಡುಗೆ ನೀಡುವ ಭಾಗವಾಗಿ ಬೆಂವಿವಿ ಶ್ರಮಿಸಲಿದೆ ಎಂದು ತಿಳಿಸಿದರು.
KSRSAC ನಿರ್ದೇಶಕ ಡಾ.ರಾಜೇಶ್ ಎನ್ ಎಲ್, ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಾಜ್ ಕುಮಾರ್ ಖಾತ್ರಿ, ವಿಜ್ಞಾನ ವಿಭಾಗ್ ಮುಖ್ಯಸ್ಥ ಡಾ.ಅಶೋಕ್ ಡಿ ಹಂಜಗಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎಂ.ಕೆ.ಕೋಕಿಲ ಉಪಸ್ಥಿತರಿದ್ದರು.