ಬೆಂಗಳೂರು, (www.thenewzmirror.com) ;
ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಶೋ 2025 ಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಲಹಂಕದ ವೈಮಾನಿಕ ವಾಯು ನೆಲೆಯಲ್ಲಿ ಐದು ದಿನಗಳ ಕಾಲ ಏರೋ ಶೋ ನಡೆಯಲಿದ್ದು, ಕಳೆದ ಬಾರಿಗಿಂತ ಈ ಬಾರಿ ನೋಡುಗರ ಮೈನವಿರೇಳಿಸುವ ಪ್ರದರ್ಶನ ಇರಲಿದೆ. ಬೆಂಗಳೂರಿನ ಬಾನಂಗಳದಲ್ಲಿ ಈ ಬಾರಿ ವಿಸ್ಮಯಕಾರಿ, ಬೆರಗುಗೊಳಿಸುವ ದೃಶ್ಯವನ್ನು ವೀಕ್ಷಿಸಲು ಸಜ್ಜಾಗಿದೆ. ಫೆಬ್ರವರಿ 10-14 ರಿಂದ, ಪ್ರತಿಷ್ಠಿತ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ (SKAT) ಅದ್ಭುತ ವಾಯು ಪ್ರದರ್ಶನ ಪ್ರದರ್ಶಿಸುವ ಮೂಲಕ ಏರೋ ಶೋನ ಪ್ರತಿಷ್ಠೆಯನ್ನ ಮತ್ತಷ್ಟು ಹೆಚ್ಚಿಸಲು ಸಿದ್ದವಾಗಿದೆ.
ಭಾರತೀಯ ವಾಯುಪಡೆಯ ರಾಯಭಾರಿಗಳು ಎಂದು ಕರೆಯಲ್ಪಡುವ SKAT ತನ್ನ ಅದ್ಭುತ ಕೌಶಲಕ್ಕೆ ಹೆಸರಾಗಿದೆ. ಕೆಂಪು ಮತ್ತು ಬಿಳಿ ಹಾಕ್ Mk-132 ಜೆಟ್‌ಗಳನ್ನು ಹಾರಿಸುವ ಈ ಗಣ್ಯ ತಂಡವು ಉಸಿರು ಬಿಗಿಹಿಡಿದಿಡುವಂಥ ಅದ್ಭುತ ಕುಶಲತೆಯನ್ನು ಪ್ರದರ್ಶಿಸುವ ಮೂಲಕ ಜನರನ್ನು ಬೆರಗುಗೊಳಿಸಲಿದೆ. ಆಕರ್ಷಕವಾದ ಲೂಪ್ ಮತ್ತು ರೋಮಾಂಚಕ ಬ್ಯಾರೆಲ್ ರೋಲ್‌ಗಳಿಂದ ಹಿಡಿದು ಗುರುತ್ವಾಕರ್ಷಣೆಗೇ ಸವಾಲು ಎಸಗುವ ರೀತಿಯಲ್ಲಿ ತಲೆಕೆಳಗಾಗಿ ಹಾರಾಟ ನಡೆಸುವ ಮೂಲಕ, ಅಪ್ರತಿಮ ಪರಿಣತಿ ಹೊಂದಿರುವ ಪೈಲಟ್‌ಗಳ ಕೈಚಳಕವನ್ನು ಅಂದು ವೀಕ್ಷಿಸಬಹುದಾಗಿದೆ. ಪ್ರತಿಯೊಂದು ಪ್ರದರ್ಶನಗಳೂ ಪೈಲಟ್‌ಗಳ ಅಪ್ರತಿಮ ಪರಿಣತಿ ಮತ್ತು ಸಮನ್ವಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತಿವೆ.
ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ 1996 ರಲ್ಲಿ ಸ್ಥಾಪಿಸಲಾಯಿತು. ಈ ತಂಡವು ಒಂಬತ್ತು ವಿಮಾನಗಳನ್ನು ಹೊಂದಿರುವ ಏಷ್ಯಾದ ಏಕೈಕ ಏರೋಬ್ಯಾಟಿಕ್ ತಂಡ ಎಂಬ ಪ್ರತಿಷ್ಠಿತ ಬಿರುದನ್ನು ಹೊಂದಿದೆ. ವಿಶ್ವದ ಕೆಲವೇ ಕೆಲವು ಗಣ್ಯ ಏರೋಬ್ಯಾಟಿಕ್ ತಂಡಗಳಲ್ಲಿ ಒಂದೆನಿಸಿದೆ. ಈ ಅಸಾಧಾರಣ ತಂಡವು ಭಾರತದಾದ್ಯಂತ 700 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದು, ಚೀನಾ, ಶ್ರೀಲಂಕಾ, ಮ್ಯಾನ್ಮಾರ್, ಥಾಯ್ಲೆಂಡ್, ಸಿಂಗಪುರ ಮತ್ತು ಯುಎಇಯಂತಹ ದೇಶಗಳಲ್ಲಿ ಅಂತರರಾಷ್ಟ್ರೀಯ ವಾಯು ಪ್ರದರ್ಶನಗಳಲ್ಲಿ ಭಾರತೀಯ ವಾಯುಪಡೆಯ ವೃತ್ತಿಪರತೆಯನ್ನು ಪ್ರತಿನಿಧಿಸುತ್ತ ಬಂದಿದೆ.
ಸೂರ್ಯ ಕಿರಣ್ ತಂಡವು ಭಾರತದಲ್ಲಿ ತಯಾರಿಸಿದ 9 ಹಾಕ್ Mk 132 ವಿಮಾನಗಳನ್ನು ಪರವಾನಗಿ ಪಡೆದಿದ್ದು, 5 ಮೀಟರ್‌ಗಿಂತ ಕಡಿಮೆ ದೂರದಲ್ಲಿ ಅತ್ಯಂತ ಹತ್ತಿರದಲ್ಲಿ ಹಾರುತ್ತದೆ. ತಂಡದಲ್ಲಿ 14 ಪೈಲಟ್‌ಗಳಿದ್ದಾರೆ. ತಂಡದ ನಾಯಕ ಗ್ರೂಪ್ ಕ್ಯಾಪ್ಟನ್ ಅಜಯ್ ದಾಶರಥಿ, ಇವರು Su-30 MKI ಪೈಲಟ್. ಉಪ ನಾಯಕ ಗ್ರೂಪ್ ಕ್ಯಾಪ್ಟನ್ ಸಿದ್ಧೇಶ್ ಕಾರ್ತಿಕ್. ಇತರ ಪೈಲಟ್‌ಗಳು ಸ್ಕ್ವಾಡ್ರನ್ ಲೀಡರ್ ಜಸ್ದೀಪ್ ಸಿಂಗ್, ಸ್ಕ್ವಾಡ್ರನ್ ಲೀಡರ್ ಹಿಮಖುಷ್ ಚಾಂಡೆಲ್, ಸ್ಕ್ವಾಡ್ರನ್ ಲೀಡರ್ ಅಂಕಿತ್ ವಶಿಷ್ಠ, ಸ್ಕ್ವಾಡ್ರನ್ ಲೀಡರ್ ವಿಷ್ಣು, ಸ್ಕ್ವಾಡ್ರನ್ ಲೀಡರ್ ದಿವಾಕರ್ ಶರ್ಮಾ, ಸ್ಕ್ವಾಡ್ರನ್ ಲೀಡರ್ ಗೌರವ್ ಪಟೇಲ್, ಸ್ಕ್ವಾಡ್ರನ್ ಲೀಡರ್ ಎಡ್ವರ್ಡ್ ಪ್ರಿನ್ಸ್, ಸ್ಕ್ವಾಡ್ರನ್ ಲೀಡರ್ ಲಲಿತ್ ವರ್ಮಾ, ವಿಂಗ್ ಕಮಾಂಡರ್ ರಾಜೇಶ್ ಕಜ್ಲಾ, ಬೆಂಗಳೂರಿನ ಮೂಲದ ವಿಂಗ್ ಕಮಾಂಡರ್ ಅರ್ಜುನ್ ಪಟೇಲ್, ವಿಂಗ್ ಕಮಾಂಡರ್ ಕುಲದೀಪ್ ಹೂಡಾ ಮತ್ತು ವಿಂಗ್ ಕಮಾಂಡರ್ ಅಲೆನ್ ಜಾರ್ಜ್. ಅವರ ತಾಂತ್ರಿಕ ತಂಡವನ್ನು ವಿಂಗ್ ಕಮಾಂಡರ್ ಅಭಿಮನ್ಯು ತ್ಯಾಡಿ, ಸ್ಕ್ವಾಡ್ರನ್ ಲೀಡರ್ ಸಂದೀಪ್ ಧಯಾಲ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಮಣಿಲ್ ಶರ್ಮಾ ನೇತೃತ್ವ ವಹಿಸಿದ್ದಾರೆ. ತಂಡದ ವೀಕ್ಷಣೆಗಾರ ಮತ್ತು ಆಡಳಿತಾಧಿಕಾರಿ ಫ್ಲೈಟ್ ಲೆಫ್ಟಿನೆಂಟ್ ಕನ್ವಾಲ್ ಸಂಧು ಮತ್ತು ತಂಡದ ವೈದ್ಯರು ಸ್ಕ್ವಾಡ್ರನ್ ಲೀಡರ್ ಸುದರ್ಶನ್. ಎಲ್ಲಾ ಸದಸ್ಯರು ತಂಡದ ಧ್ಯೇಯವಾಕ್ಯ “ಸದೈವ ಸರ್ವೋತ್ತಮ್” ಅಂದರೆ ಯಾವಾಗಲೂ ಅತ್ಯುತ್ತಮ ಎನ್ನುವುದು! ಪೈಲಟ್‌ಗಳು ಸಂಕೀರ್ಣವಾದ ಏರೋಬ್ಯಾಟಿಕ್ ಕುಶಲತೆಯನ್ನು ಕರಗತ ಮಾಡಿಕೊಳ್ಳಲು ತೀವ್ರ ತರಬೇತಿಯನ್ನು ಪಡೆದಿರುತ್ತಾರೆ. ಅವರ ಪರಿಣತಿ ಮತ್ತು ಅದ್ಭುತ ಸಮನ್ವಯಕ್ಕೆ ಈ ಪ್ರದರ್ಶನ ಸಾಕ್ಷಿಯಾಗಲಿದೆ.
ಬಣ್ಣ ಬಣ್ಣದ ಹೊಗೆಯನ್ನು ಉತ್ಪಾದಿಸುವ ಸಾಮರ್ಥ್ಯವಿರುವ ಹಾಕ್ ಎಂಕೆ 132 ವಿಮಾನದೊಂದಿಗೆ ಹೊಗೆ ಪಾಡ್‌ಗಳನ್ನು ಇತ್ತೀಚೆಗೆ ಸಂಯೋಜಿಸಲಾಗಿದೆ. ಇದನ್ನು ಭಾರತದಲ್ಲಿ ಭಾರತೀಯ ವಾಯುಪಡೆಯ ನೆಲೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ತಂಡವು ತಮ್ಮ ವೈಮಾನಿಕ ಪ್ರದರ್ಶನಗಳ ಸಮಯದಲ್ಲಿ ಆಕಾಶದಾದ್ಯಂತ ರಾಷ್ಟ್ರಧ್ವಜದ ಮೂರು ಬಣ್ಣಗಳನ್ನು ಪ್ರದರ್ಶಿಸಲು ಈ ಪಾಡ್ ಅನುವು ಮಾಡಿಕೊಡುತ್ತದೆ. ಈ ಪ್ರದರ್ಶನಗಳಿಗೆ ದೃಶ್ಯ ಸಂಯೋಜನೆಯನ್ನೂ ಸೇರಿಸಲಾಗಿರುವ ಕಾರಣ, ರಾಷ್ಟ್ರೀಯ ಹೆಮ್ಮೆಯ ಪ್ರಬಲ ಸಂಕೇತವಾಗಿಯೂ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು ಬಾಹ್ಯಾಕಾಶ ಎಂಜಿನಿಯರಿಂಗ್ ಮತ್ತು ನಾವೀನ್ಯತೆಯಲ್ಲಿ ಭಾರತದ ಸಾಧನೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವುದಕ್ಕೆ ಸಾಕ್ಷಿಯಾಗಿದೆ.
ಬೆಂಗಳೂರಿನ ನಿವಾಸಿಗಳು ಈ ಅಪರೂಪದ ದೃಶ್ಯಗಳನ್ನು ಕಣ್ತುಂಬಿಸಿಕೊಳ್ಳಬಹುದು. ಆಕಾಶವು ಅದ್ಭುತ ರಚನೆಗಳ ಕ್ಯಾನ್ವಾಸ್ ಆಗಿ ರೂಪಾಂತರಗೊಳ್ಳುವುದಕ್ಕೆ ಸಾಕ್ಷಿಯಾಗಬಹುದು. ಭಾರತೀಯ ವಾಯುಪಡೆಯ ಶಿಸ್ತು ಮತ್ತು ಶ್ರೇಷ್ಠತೆಯನ್ನು ಅರಿಯಲು ಇದರಿಂದ ಸಾಧ್ಯವಾಗಿದೆ. ಆದ್ದರಿಂದ ಈ ರೋಮಾಂಚಕ ಕಾರ್ಯಕ್ರಮಕ್ಕಾಗಿ ಈಗಲೇ ದಿನಾಂಕವನ್ನು ನಮೂದು ಮಾಡಿಟ್ಟುಕೊಳ್ಳಿ ಮತ್ತು ಸೂರ್ಯಕಿರಣ್‌ನ ಅದ್ಭುತವನ್ನು ವೀಕ್ಷಿಸಲು ನಮ್ಮೊಂದಿಗೆ ಸೇರಿ – ಮುಂಬರುವ ವರ್ಷಗಳಲ್ಲಿಯೂ ಈ ದಿವ್ಯ, ಅದ್ಭುತ ಪ್ರದರ್ಶನವು ನಿಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಲಿದೆ.