ಬೆಂಗಳೂರು, (www.thenewzmirror.com);
ರಾಜ್ಯದಲ್ಲಿ ಯಾವುದೇ ಇಲಾಖೆ ಆದ್ರೂ ಅದರದ್ದೇ ಆದ ನಿಯಮ, ಕಟ್ಟುಪಾಡುಗಳು ಹಾಗೆನೇ ವಸ್ತ್ರ ಸಂಹಿತೆ ಇದ್ದೇ ಇರುತ್ತೆ. ಆ ಇಲಾಖೆಯಲ್ಲಿ ಕೆಲ್ಸ ಮಾಡ್ತೀವಿ ಅಂದ್ರೆ ಅಲ್ಲಿನ ರೀತಿ ರಿವಾಜುಗಳನ್ನ ಪಾಲನೆ ಮಾಡಲೇಬೇಕು. ಆದ್ರೆ ಈ ನಿಯಮ ಸಾರಿಗೆ ಇಲಾಖೆ(RTO)ಗೆ ಅನ್ವಯವಾಗೋದಿಲ್ವಾ ಎನ್ನುವ ಪ್ರಶ್ನೆ ಕಾಡುತ್ತಿದೆ.
ಇಲಾಖೆಯಲ್ಲಿ ಎಆರ್ ಟಿಓಗಿಂತ ಕೆಳಹಂತದ ಅಧಿಕಾರಿಗಳು ಕಡ್ಡಾಯವಾಗಿ ಇಲಾಖೆಯಿಂದ ನೀಡಿರೋ ಯೂನಿಫಾರಂ ಧರಿಸಲೇಬೇಕು. ಅದರಲ್ಲೂ ಮೋಟಾರು ವಾಹನ ಇನ್ಸ್ ಪೆಕ್ಟರ್ ಗಳು ಕಡ್ಡಾಯವಾಗಿ ಯೂನಿಫಾರಂ ಧರಿಸಿಯೇ ಕರ್ತವ್ಯಕ್ಕರ ಹಾಜರಾಗಬೇಕೆಂಬ ನಿಯಮವನ್ನ ಮಾಡಲಾಗಿದೆ. ಈ ಕುರಿತಂತೆ 2024 ರ ಮೇ ತಿಂಗಳಲ್ಲಿ ಆಯುಕ್ತರು ಕರ್ನಾಟಕ ಮೋಟಾರು ವಾಹನಗಳ ನಿಯಮಗಳು1989ರ ನಿಯಮ -260 ರನ್ವಯ ಆದೇಶವನ್ನೂ ಹೊರಡಿಸಿದ್ದಾರೆ. ಯಾರಾದ್ರೂ ಈ ನಿಯಮ ಮೀರಿದ್ರೆ ಅವ್ರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬಹುದು ಅಂತಾನೂ ಆದೇಶದಲ್ಲಿ ಉಲ್ಲಂಘಿಸಿದ್ದಾರೆ. ಹೀಗಿದ್ರೂ ಒಂದಿಷ್ಟು ಮಂದಿ ನಿಯಮ ತಮಗೆ ಅನ್ವಯವಾಗೋದಿಲ್ಲ ಎನ್ನುವ ರೀತಿ ಕಚೇರಿಗೆ ಹಾಜರಾಗುತ್ತಿದ್ದಾರೆ.

ಮತ್ತೊಂದು ಕಡೆ ಪ್ರೋಬೇಷನರಿ ಬ್ರೇಕ್ ಇನ್ಸ್ ಪೆಕ್ಟರ್ ಗಳು ಇಲಾಖೆಯಲ್ಲಿ ನಿಯಮಗಳನ್ನ ಪಾಲನೆ ಮಾಡೋದನ್ನೇ ಮರೆತಿದ್ದಾರೆ. ಮನಸ್ಸಿಗೆ ಬಂದಂತೆ ಯೂನಿಫಾರಂಗಳನ್ನ ಧರಿಸಿಕೊಂಡು ಕಚೇರಿಗೆ ಹಾಜರಾಗ್ತಿದ್ದಾರೆ. ಕರ್ನಾಟಕ ಮೋಟಾರು ವಾಹನಗಳ ನಿಯಮಗಳು1989ರ ನಿಯಮದ ಪ್ರಕಾರ ಯೂನಿಫಾರಂ ಇಲ್ಲದಿದ್ರೂ ಆಯಾ ಕಚೇರಿಗಳ ಆರ್ ಟಿಓಗಳ ಕೃಪಾ ಕಟಾಕ್ಷದಿಂದ ನಿಯಮ ಮೀರಿದ್ರೂ ಯಾವುದೇ ಶಿಕ್ಷೆ ಆಗುತ್ತಿಲ್ಲ.
ʼಲೀಡರ್ ಹೇಳಿದ್ದಂತೆ ಇತರರು ಕೇಳುತ್ತಿದ್ದಾರೆʼ.
ಇನ್ನು ಪ್ರೊಬೇಷನರಿ ಮೋಟಾರು ಇನ್ಸ್ ಪೆಕ್ಟರ್ ಗಳು ನೇಮಕವಾಗಿ ಇನ್ನೂ ಆರು ತಿಂಗಳು ಕಳೆದಿಲ್ಲ. ಅಷ್ಟರೊಳಗೆ ಒಂದು ತಂಡವನ್ನ ಕಟ್ಟಿಕೊಂಡಿದ್ದಾರೆ. ಆ ತಂಡಕ್ಕೆ ಒಬ್ಬ ನಾಯಕನ್ನ ಗುರ್ತಿಸಿದ್ದು, ಆ ಲೀಡರ್ ಹೇಳಿದಂತೆ ಇತರರು ಕೇಳುತ್ತಿದ್ದಾರೆ. ಅಷ್ಟೇ ಅಲ್ದೇ ನಾನು ಸಾರಿಗೆ ಸಚಿವರ ಸಂಬಂಧಿಕರು ಯಾರಾದ್ರೂ ಪ್ರಶ್ನೆ ಮಾಡಿ ತ್ರಿ ಸ್ಟಾರ್ ಬದಲು 2 ಸ್ಟಾರ್ ಧರಿಸಿ ಅಂತ ಹೇಳಿದ್ರೆ ನನಗೆ ಹೇಳಿ ನಾನು ಸಚಿವರಿಂದ ಹೇಳಿಸುತ್ತೇನೆ ಅಂತ ಹೇಳುತ್ತಾರಂತೆ ಪ್ರೊಬೆಷನರಿ ಮೋಟಾರು ಇನ್ಸ್ ಪೆಕ್ಟರ್ ತಂಡದ ಲೀಡರ್.
ಕೇಂದ್ರ ಕಚೇರಿಯೇ ಇದಕ್ಕೆ ಮಾದರಿ.!
ಇನ್ನು ಮೂಲಗಳ ಪ್ರಕಾರ ಪ್ರೊಬೇಷನರಿ ಇನ್ಸ್ ಪೆಕ್ಟರ್ ಗಳು ತ್ರಿ ಸ್ಟಾರ್ ಧರಿಸಿ ಕರ್ತವ್ಯಕ್ಕೆ ಹಾಜರಾಗಬಾರದು ಅಂತ ನಿಯಮವಿದ್ರೂ ಅದನ್ನ ಮೊದಲು ಉಲ್ಲಂಘನೆ ಮಾಡಿದ್ದು ಬೆಂಗಳೂರು ಕೇಂದ್ರ (KA 01)ಸಾರಿಗೆ ಕಚೇರಿಯಲ್ಲಿಯಂತೆ. ಇಲ್ಲಿರೋ ಪ್ರೊಬೇಷನರಿ ಮೋಟಾರು ಇನ್ಸ್ ಪೆಕ್ಟರ್ ಲೀಡರ್ ಮೊದಲು ತ್ರಿ ಸ್ಟಾರ್ ಧರಿಸಿ ಕರ್ತವ್ಯಕ್ಕೆ ಹಾಜರಾಗ್ತಿದ್ರಂತೆ ಈ ವಿಚಾರ ಅಲ್ಲಿನ ಆರ್ ಟಿಓಗೆ ಗೊತ್ತಿದ್ರೂ ಪ್ರಶ್ನೆ ಮಾಡ್ಲಿಲ್ಲವಂತೆ. ಅಪರ ಸಾರಿಗೆ ಆಯುಕ್ತರ ಆದೇಶವಿದ್ರೂ ತಲೆ ಕಡೆಸಿಕೊಳ್ಳದೆ ಸುಮ್ಮನಿದ್ದಾರಂತೆ ಬೆಂಗಳೂರು ಕೇಂದ್ರ ಸಾರಿಗೆ ಕಚೇರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ.





ನಿಯಮ ಏನು ಹೇಳುತ್ತೆ.?
ಕರ್ನಾಟಕ ಮೋಟಾರು ವಾಹನಗಳ ನಿಯಮಗಳು1989ರ ನಿಯಮದ ಪ್ರಕಾರ ಪ್ರೊಬೇಷನರಿ ಅವಧಿ ಪೂರ್ಣಗೊಳ್ಳುವ ವರೆಗೂ ಸಮವಸ್ತ್ರದ ಜತೆಗೆ ತ್ರಿ ಸ್ಟಾರ್ ಧರಿಸುವಂತಿಲ್ಲ. ನಿಯಮ (5) ರಾನ್ವಯ ಬ್ರೇಕ್ ಇನ್ಸ್ ಪೆಕ್ಟರ್ ಪ್ರೊಬೇಷನರಿ ಅವಧಿಯಲ್ಲಿ ಕಡ್ಡಾಯವಾಗಿ 2 ಸ್ಟಾರ್ ಗಳನ್ನು ಮಾತ್ರ ಧರಿಸಬೇಕೆಂಬ ನಿಯಮವಿದೆ. ಇದೇ ನಿಯಮದಡಿ ಸಮವಸ್ತ್ರ ಇರುವಂತೆ ನೋಡಿಕೊಳ್ಳುವುದು ಆಯಾ ಆರ್ ಟಿಓಗಳ ಜವಾಬ್ದಾರಿ ಅಂತಾನೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಈ ನಿಯಮ ಪಾಲನೆ ಮಾಡದಿದ್ರೆ ಅಂಥವ್ರ ವಿರುದ್ಧ ವರದಿ ಸಲ್ಲಿಸುವಂತೆಯೂ ಸೂಚನೆ ನೀಡಲಾಗಿದೆ.
ಪ್ರೊಬೇಷನರಿ ಬ್ರೇಕ್ ಇನ್ಸ್ ಪೆಕ್ಟರ್ ಗಳು ಇಲಾಖೆ ನಿಯಮದ ಪ್ರಕಾರವೇ ಯೂನಿಫಾರಂ ಧರಿಸಬೇಕೆಂದು ಅಪರ ಸಾರಿಗೆ ಆಯುಕ್ತರು ಆದೇಶವನ್ನೂ ಹೊರಡಿಸಿದ್ದಾರೆ. ಆ ಆದೇಶದಲ್ಲಿ ಹೊಸದಾಗಿ ನೇಮಕಗೊಂಡಿರುವ ಮೋಟಾರು ವಾಹನ ನಿರೀಕ್ಷಕರು(ಬ್ರೇಕ್ ಇನ್ಸ್ ಪೆಕ್ಟರ್) ಪ್ರೊಬೇಷನರಿ ಅವಧಿಯಲ್ಲಿ 3 ಸ್ಟಾರ್ ಧರಿಸಿ ಕರ್ತವ್ಯಕ್ಕೆ ಹಾಜರಾಗಬಾರದು ಎಂದು ಉಲ್ಲೇಖಿಸಿದ್ದಾರೆ. ಹೀಗಿದ್ದರೂ ಹೊಸದಾಗಿ ರಾಜ್ಯಾದ್ಯಂತ ನೇಮಕವಾಗಿರುವ 80 ಕ್ಕೂ ಹೆಚ್ಚು ಪ್ರೊಬೇಷನರಿ ಮೋಟಾರು ವಾಹನ ನಿರೀಕ್ಷಕರು ತ್ರಿ ಸ್ಟಾರ್ ಧರಿಸಿಯೇ ಕಚೇರಿಗೆ ಹಾಜರಾಗುತ್ತಿದ್ದಾರೆ.
ಒಂದು ತಿಂಗಳ ಹಿಂದೆಯೇ ಗಮನಕ್ಕೆ ತಂದಿದ್ದ ನ್ಯೂಝ್ ಮಿರರ್
ಇನ್ನು ಪ್ರೊಬೇಷನರಿ ಮೋಟಾರು ಇನ್ಸ್ ಪೆಕ್ಟರ್ ಗಳು 2 ಸ್ಟಾರ್ ಬದಲು ತ್ರಿ ಸ್ಟಾರ್ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ ಒಂದು ತಿಂಗಳ ಹಿಂದೆಯೇ ಇಲಾಖೆಯ ಗಮನಕ್ಕೆ ತರಲಾಗಿತ್ತು. ಅಷ್ಟೇ ಅಲ್ದೇ ಬೆಂಗಳೂರು ಕೇಂದ್ರ ಸಾರಿಗೆ ಕಚೇರಿಯಲ್ಲಿ ಕರ್ತವ್ಯನಿರತ ಪ್ರೊಬೇಷನರಿ ಮೋಟಾರ್ ಇನ್ಸ್ ಪೆಕ್ಟರ್ ನ ಫೋಟೋ ಸಮೇತ ಅಲ್ಲಿನ ಆರ್ ಟಿಓ ಗಮನಕ್ಕೆ ತರಲಾಗಿತ್ತು. ಅವರಿಂದ ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಅಪರ ಸಾರಿಗೆ ಆಯುಕ್ತರ ಗಮನಕ್ಕೂ ತರಲಾಗಿತ್ತು. ತಕ್ಷಣವೇ ಮತ್ತೊಂದು ಸುತ್ತೋಲೆ ಹೊರಡಿಸಿ ಕಡ್ಡಾಯವಾಗಿ 2 ಸ್ಟಾರ್ ಧರಿಸಬೇಕು. ಒಂದು ವೇಳೆ 2 ಸ್ಟಾರ್ ಧರಿಸದೆ ತ್ರಿ ಸ್ಟಾರ್ ಧರಿಸಿ ಕರ್ತವ್ಯಕ್ಕೆ ಬಂದ್ರೆ ಕೂಡಲೇ ಶೋಕಾಸ್ ನೊಟೀಸ್ ನೀಡುವಂತೆಯೂ ಸೂಚಿಸಿದ್ರು. ಯಾವಾಗ ಎರಡನೇ ಬಾರಿ ಸೂಚನೆ ಬಂತೋ ತಕ್ಷಣವೇ ಎಚ್ಚೆತ್ತ ರಾಜ್ಯದ ಎಲ್ಲಾ ಆರ್ ಟಿಓಗಳು ತ್ರಿ ಸ್ಟಾರ್ ಧರಿಸಿದ್ದ ಪ್ರೊಬೇಷನರಿ ಇನ್ಸ್ ಪೆಕ್ಟರ್ ಗಳಿಗೆ 2 ಸ್ಟಾರ್ ಧರಿಸುವಂತೆ ಸೂಚಿಸಿದ್ರು. ಆದ್ರೆ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಮಾತ್ರ ಅಪರ ಸಾರಿಗೆ ಆಯುಕ್ತರ ಮೂರು ಮೂರು ಆದೇಶದ ಹೊರತಾಗಿಯೂ ಪ್ರೊಬೇಷನರಿ ಮೋಟಾರು ಇನ್ಸ್ ಪೆಕ್ಟರ್ ಗಳು ತ್ರಿ ಸ್ಟಾರ್ ಧರಿಸಿಯೇ ಕರ್ತವ್ಯಕ್ಕೆ ಹಾಜರಾಗುತ್ತಿದ್ರು.
ಸಚಿವರ ಸಂಬಂಧಿಕರೆನ್ನುತ್ತಾರಂತೆ ಪ್ರೊಬೇಷನರಿ ಇನ್ಸ್ ಪೆಕ್ಟರ್.!
ಪ್ರೊಬೇಷನರಿ ಮೋಟಾರು ಇನ್ಸ್ ಪೆಕ್ಟರ್ ಗಳು 2 ಸ್ಟಾರ್ ಬದಲು ತ್ರಿ ಸ್ಟಾರ್ ಧರಿಸಿ ಬಂದ್ರೆ ಕೂಡಲೇ ನೊಟೀಸ್ ನೀಡಿ, ಹೀಗಿದ್ರೂ ನಿಯಮದ ಪ್ರಕಾರ ಸ್ಟಾರ್ ಧರಿಸಲಿಲ್ಲ ಅಂದ್ರೆ ನನ್ನ ಗಮನಕ್ಕೆ ತನ್ನಿ ಅಂತ ಅಪರ ಸಾರಿಗೆ ಆಯುಕ್ತರು ಹೊರಡಿಸಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹೀಗಿದ್ರೂ ಆರ್ ಟಿಓಗಳು ಅಪರ ಸಾರಿಗೆ ಆಯುಕ್ತರ ಗಮನಕ್ಕೆ ತರೋಕೆ ಮುಂದಾಗ್ತಿಲ್ಲ. ಆರ್ ಟಿಓ ಗಳು ಮಾತ್ರ ಎಲ್ಲರೂ ನಿಯಮ ಬದ್ದವಾಗಿಯೇ ಸ್ಟಾರ್ ಧರಿಸುತ್ತಿದ್ದಾರೆ ಎಂಬ ಉತ್ತರ ಕೊಡ್ತಿದ್ದಾರಂತೆ. ದಿ ನ್ಯೂಝ್ ಮಿರರ್ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಆದೇಶದ ನಂತರವೂ 2 ಸ್ಟಾರ್ ಬದಲಿಗೆ 3 ಸ್ಟಾರ್ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿರೋದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ದೇ ತ್ರಿ ಸ್ಟಾರ್ ಧರಿಸಿಕೊಂಡು ಪ್ರೊಬೇಷನರಿ ಮೋಟಾರು ಇನ್ಸ್ ಪೆಕ್ಟರ್ ಗಳು ಸಭೆ, ಸಮಾರಂಭಗಳಿಗೆ ಹಾಜರಾಗುತ್ತಿದ್ದಾರೆ. ಕಚೇರಿಯಲ್ಲಿ ಕೆಲ್ಸ ಮಾಡುವ ಕೆಲ ಸಿಬ್ಬಂದಿಗಳ ಪ್ರಕಾರ ನಾನು ಸಾರಿಗೆ ಸಚಿವರ ಸಂಬಂಧಿ, ನನ್ನನ್ನು ಯಾರು ಪ್ರಶ್ನೆ ಮಾಡ್ತಾರೆ. ಯಾರಾದ್ರೂ ಕೇಳಿದ್ರೆ ನಾನು ಮಾತನಾಡ್ತೀನಿ ಅಂತ ಹೇಳ್ತಾರಂತೆ.
ಸದ್ಯಕ್ಕೆ ಸಾರಿಗೆ ಕಚೇರಿಯಲ್ಲಿ ತ್ರಿ ಸ್ಟಾರ್ ವಾರ್ ಮುಗಿಯುವ ಲಕ್ಷಣ ಕಾಣ್ತಿಲ್ಲ. ಈ ಕುರಿತಂತೆ ಸಾರಿಗೆ ಇಲಾಖೆ ಆಯುಕ್ತರು ಹಾಗೂ ಸಾರಿಗೆ ಸಚಿವರು ಯಾವ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನ ಕಾದು ನೋಡ್ಬೇಕು.