ಬೆಂಗಳೂರು(www.thenewzmirror.com): ಆಪರೇಷನ್ ಸಿಂದೂರದ ಮೂಲಕ ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಅತ್ಯಂತ ಸಶಕ್ತವಾಗಿರುವುದಾಗಿ ಜಗತ್ತಿಗೇ ನಾವು ತಿಳಿಸಿದ್ದೇವೆ ಎಂದು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ಮತ್ತು ರಾಜ್ಯಸಭಾ ಸದಸ್ಯ ಡಾ. ರಾಧಾ ಮೋಹನ್ ದಾಸ್ ಅಗ್ರವಾಲ್ ವಿಶ್ಲೇಷಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿ, ಭಾರತದ ಮಾನ, ಸಮ್ಮಾನದ ರಕ್ಷಣೆ ಮತ್ತು ಭಾರತೀಯರ ಹತ್ಯೆಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಆಪರೇಷನ್ ಸಿಂದೂರ ಕೈಗೊಂಡಿದೆ. ಇದನ್ನು ಪ್ರಶಂಸಿಸಿ ಮತ್ತು ಭಾರತದ ಸೇನೆಗೆ ಧನ್ಯವಾದ ಸಮರ್ಪಣೆಗಾಗಿ ದೇಶಾದ್ಯಂತ ತಿರಂಗಾ ಯಾತ್ರೆ ನಡೆಸಲಾಗುತ್ತಿದೆ ಎಂದು ಪ್ರಕಟಿಸಿದರು.
ಮಾನ್ಯ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಸೇನೆಯು ಪೆಹಲ್ಗಾಂ ಭಯೋತ್ಪಾದನಾ ಕೃತ್ಯಕ್ಕೆ ಕಾರಣಕರ್ತರಾದ ಎರಡು ಸಂಘಟನೆಗಳ ಕಾರ್ಯಾಲಯ, ತರಬೇತಿ ಕೇಂದ್ರಗಳನ್ನು ಹಾಗೂ ಉಗ್ರರನ್ನು ಹತ್ಯೆ ಮಾಡಿದೆ. ಸಂಪೂರ್ಣ ಸಂಯಮದಿಂದ ಹಾಗೂ ಯುದ್ಧದ ಎಲ್ಲ ನಿಯಮಗಳನ್ನು ಪಾಲಿಸುತ್ತ, ಈ ಅಭಿನಂದನೀಯ ಕಾರ್ಯ ಮಾಡಿದ್ದು, ಇದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಸಿಂಧೂ ನದಿ ನೀರಿನ ಒಪ್ಪಂದವು ಭಾರತ ವಿರೋಧಿ
ಇದೊಂದು ಕದನವಿರಾಮ ಮಾತ್ರ; ಯುದ್ಧವನ್ನು ಸ್ಥಗಿತಗೊಳಿಸಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ. ಭಯೋತ್ಪಾದನಾ ಕೃತ್ಯ ಮುಂದುವರೆದಲ್ಲಿ ಯುದ್ಧ ಮುಂದುವರೆಯುತ್ತದೆ ಎಂದೂ ತಿಳಿಸಿದ್ದಾರೆ ಎಂದು ರಾಧಾ ಮೋಹನ್ ದಾಸ್ ಅಗ್ರವಾಲ್ ಅವರು ಗಮನ ಸೆಳೆದರು.
ಸಿಂಧೂ ನದಿ ನೀರಿನ ಕುರಿತ ಒಪ್ಪಂದವು ಭಾರತ ವಿರೋಧಿ ಎಂದು ಪ್ರಶ್ನೆಗೆ ಉತ್ತರ ನೀಡಿದ ಅವರು, ಒಪ್ಪಂದದಡಿ ಶೇ 90 ನೀರಿನ ಅಧಿಕಾರವನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. ನದಿ ನೀರಿನ ಬಳಕೆಗೆ ಕಾಲುವೆ ನಿರ್ಮಿಸಲು ಭಾರತವು ಹಣವನ್ನೂ ನೀಡಿತ್ತು ಎಂದು ಗಮನಕ್ಕೆ ತಂದರು. ಇದು ಭಾರತದ ದೀರ್ಘಕಾಲೀನ ಒಳಿತನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು.
ರಕ್ತ ಮತ್ತು ನೀರು ಒಂದೇ ನದಿಯಲ್ಲಿ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಪ್ರಧಾನಿಯವರು ಹೇಳಿದ್ದಾರೆ. ಪಾಕಿಸ್ತಾನ ತನ್ನ ನಡವಳಿಕೆ ಮೂಲಕ ಬದಲಾವಣೆಯ ಕುರಿತು ಪ್ರಸ್ತುತಪಡಿಸಿದಾಗ ನೀರಿನ ಕುರಿತು ನಾವು ಪರಿಶೀಲಿಸಬಹುದು ಎಂದು ನುಡಿದರು.
ವೈಮಾನಿಕ ದಾಳಿ ಮಾಡಲು ಪಾಕಿಸ್ತಾನವು ಬಳಸುತ್ತಿದ್ದ ವಾಯುನೆಲೆಗಳನ್ನೂ ಧ್ವಂಸ ಮಾಡಿದ್ದೇವೆ. ಈ ಸಂಪೂರ್ಣ ಯುದ್ಧದಲ್ಲಿ ಭಾರತದ ಒಬ್ಬರೇ ಒಬ್ಬ ಸೈನಿಕರೂ ಸತ್ತಿಲ್ಲ. ನಮ್ಮ ಸೇನಾ ಉಪಕರಣಕ್ಕೆ ಹಾನಿ ಆಗಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ನಾವು ನಮ್ಮ ದೇಶದ ವ್ಯಾಪ್ತಿಯಲ್ಲಿದ್ದು 11 ಸೇನಾ ವೈಮಾನಿಕ ಕೇಂದ್ರಗಳ ಮೇಲೆ ದಾಳಿ ಮಾಡಿದ್ದೇವೆ. ಈ ವಾಯುನೆಲೆಗಳನ್ನು ಭಾರತದ ಮೇಲೆ ಡ್ರೋಣ್ ದಾಳಿ ಮತ್ತು ನಾಗರಿಕರ ಹತ್ಯೆಗೆ ಬಳಸಲಾಗುತ್ತಿತ್ತು. ಇದಲ್ಲದೆ, ಉಗ್ರರ ತರಬೇತಿ ಕೇಂದ್ರಗಳನ್ನೂ ನಾಶಪಡಿಸಿದ್ದೇವೆ ಎಂದು ವಿವರಿಸಿದರು.
ಕೇವಲ ಭಯೋತ್ಪಾದಕರ ಹತ್ಯೆ ಮಾಡಲಾಗಿದೆ. ಪಾಕಿಸ್ತಾನದ ಒಬ್ಬನೇ ಒಬ್ಬ ನಾಗರಿಕರೂ ಸತ್ತಿಲ್ಲ. ಪಾಕಿಸ್ತಾನವು ತನ್ನ 11 ವಾಯುನೆಲೆಗಳಿಂದ ಹಾರಿಸಿದ್ದ ಪ್ರತಿಶತ 100ರಷ್ಟು ಡ್ರೋಣ್ ಮತ್ತು ಕ್ಷಿಪಣಿಗಳನ್ನು ಭಾರತಕ್ಕೆ ಬರದಂತೆ ವಿಫಲಗೊಳಿಸಲಾಗಿದೆ ಎಂದು ವಿವರಿಸಿದರು. ನಿರಪರಾಧಿ ವ್ಯಕ್ತಿ ಒಬ್ಬರೂ ಸತ್ತಿಲ್ಲ; ಮೋದಿ ಅವರು ಜಗತ್ತಿಗೇ ಯುದ್ಧದ ಹೊಸ ಕ್ರಮವನ್ನು ಪರಿಚಯಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಪಾಕಿಸ್ತಾನದ ಡಿಜಿಎಂಒ ನಮ್ಮ ಡಿಜಿಎಂಒಗೆ ಫೋನ್ ಮಾಡಿದ್ದರು. ಒಂದು ಬಾರಿ ಸ್ವೀಕರಿಸದೆ ಇದ್ದಾಗ ಮತ್ತೆ ಕರೆ ಮಾಡಿ ಯುದ್ಧ ನಿಲ್ಲಿಸಲು ವಿನಮ್ರವಾಗಿ ವಿನಂತಿಸಿದ್ದರು. ನಾವು ನಮ್ಮ ಕಾರ್ಯವೈಖರಿ ಮೂಲಕ ಸಾಫಲ್ಯತೆ ಪಡೆದಿದ್ದೇವೆ. ಭಯೋತ್ಪಾದನಾ ಕೇಂದ್ರಗಳ ಮೇಲೆ ದಾಳಿ ಮತ್ತು ಉಗ್ರರ ಹತ್ಯೆ ನಮ್ಮ ಕಾರ್ಯತಂತ್ರವಾಗಿತ್ತು. 9ರಂದು ಕೋರಿಕೆ ಸಲ್ಲಿಸಿದ್ದರೆ ಅದೇದಿನ ಯುದ್ಧ ನಿಲ್ಲುತ್ತಿತ್ತು ಎಂದ ಅದರು, ಕದನವಿರಾಮದಲ್ಲಿ ಅಮೆರಿಕದ ಪಾತ್ರವನ್ನು ಅಲ್ಲಗಳೆದರು.