ಬೆಂಗಳೂರು, (www.thenewzmirror.com) :
ಅದ್ಯಾಕೋ ಏನೋ ಸಾರಿಗೆ ಇಲಾಖೆ (RTO) ಕಚೇರಿಗಳು ಪ್ರತಿ ದಿನ ಒಂದಲ್ಲಾ ಒಂದು ರೀತಿಯಲ್ಲಿ ಸುದ್ದಿಯಲ್ಲಿ ಇದ್ದೇ ಇರುತ್ತವೆ. ಇಲಾಖೆಯಲ್ಲಿ ಉತ್ತಮ ಆಡಳಿತ ನೀಡುವ ಸಲುವಾಗಿ ಒಂದಿಲ್ಲೊಂದು ಕಠಿಣ ಕ್ರಮ ಕೈಗೊಳ್ಳುತ್ತಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನೂ ಯಾಮಾರಿಸೋ ಅಧಿಕಾರಿಗಳು ಸಾರಿಗೆ ಇಲಾಖೆಯಲ್ಲಿ ಇದ್ದಾರೆ. ಭ್ರಷ್ಟಚಾರ ಮುಕ್ತ ಆಡಳಿತ ನೀಡುತ್ತೀವಿ ಎನ್ನುತ್ತಿರುವ ಸಾರಿಗೆ ಸಚಿವರಿಗೆ ಸಾರಿಗೆ ಇಲಾಖೆ ಕಚೇರಿಗಳ ಅಸಲಿಯತ್ತನ್ನ ತೋರಿಸುವ ನಿಟ್ಟಿನಲ್ಲಿ ನಿಮ್ಮ ನ್ಯೂಝ್ ಮಿರರ್ ( thenewzmirror) ನಡೆಸಿದ ತನಿಖಾ ವರದಿ ಇಲ್ಲಿದೆ.
ಬೆಂಗಳೂರು ವಲಯ ಜಂಟಿ ಸಾರಿಗೆ ಆಯುಕ್ತರ ವ್ಯಾಪ್ತಿಯಲ್ಲಿ ಅತ್ಯಂತ ಶ್ರೀಮಂತ ಕಚೇರಿ ಅಂದರೆ ಅದು ಎಲೆಕ್ಟ್ರಾನಿಕ್ ಸಿಟಿ ( KA – 51) ಆರ್ ಟಿಓ ಕಚೇರಿ. ತೆರಿಗೆ ಕಟ್ಟಿಸಿಕೊಳ್ಳದೆ ವಾಹನ ನೋಂದಣಿ ವಿಚಾರದಲ್ಲಿ ಸುದ್ದಿಯಲ್ಲಿದ್ದ ಕಚೇರಿ ಇದೀಗ ಮತ್ತೊಮ್ಮೆ ಸುದಿಯಲ್ಲಿದೆ. ನ್ಯೂಝ್ ಮಿರರ್ ನಡೆಸಿದ ತನಿಖೆಯಲ್ಲಿ ಕಚೇರಿಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ ಎನ್ನೋದು ಗೊತ್ತಾಗಿದೆ. ಲಂಚದ ಜತೆಗೆ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದ್ದು ಸಾರ್ವಜನಿಕ್ರು ಈ ಆರ್ ಟಿಓ ಕಚೇರಿ ಎಂದರೆ ಮಾರುದ್ದ ಓಡಾಡುವಂತಾಗಿದೆ.
ಆರ್ ಟಿಓ ಇಲಾಖೆಯಲ್ಲಿಯೇ ಅತಿ ಶ್ರೀಮಂತ ಕಚೇರಿ ಎನ್ನುವ ಖ್ಯಾತಿಗೆ ಒಳಗಾಗಿರುವ ಎಲೆಕ್ಟ್ರಾನಿಕ್ ಸಿಟಿ ( KA – 51) ಆರ್ ಟಿಓ ಕಚೇರಿಗೆ ಸಂಬಂಧಪಟ್ಟಂತೆ ಹಲವು ಸಾರ್ವಜನಿಕ್ರು ನ್ಯೂಝ್ ಮಿರರ್ ಸಾಕಷ್ಟು ದೂರುಗಳನ್ನ ಕೊಟ್ಟಿದ್ದರು. ಇದನ್ನ ಅರಿಯುವ ನಿಟ್ಟಿನಲ್ಲಿ ಖುದ್ದು ನ್ಯೂಝ್ ಮಿರರ್ ತಂಡ ಸತತ ಒಂದು ವಾರಗಳ ಕಾಲ ಕಚೇರಿಗೆ ತೆರಳಿ ಅಲ್ಲಿನ ಅವ್ಯವಸ್ಥೆಯನ್ನ ಬಯಲಿಗೆ ಎಳೆಯುವ ಕೆಲಸ ಮಾಡಿದ್ದಲ್ಲದೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಸಾರಿಗೆ ಸಚಿವರಿಗೆ ಮನವಿ ಮಾಡುತ್ತಿದೆ.
ಎಲೆಕ್ಟ್ರಾನಿಕ್ ಸಿಟಿ ಆರ್ ಟಿಓ ಕಚೇರಿಗೆ ಯಾವುದೇ ಸಾರ್ವಜನಿಕರು ಕೆಲಸ ಇದೆ ಎಂದು ತೆರಳಿದರೆ ಅವ್ರನ್ನ ಮೊದಲು ಸ್ವಾಗತ ಮಾಡುವುದು ಮಧ್ಯವರ್ತಿಗಳು (ಈ ಮಧ್ಯವರ್ತಿಗಳಿಗೆ ಕಚೇರಿಯ ಕೆಲ ಮೋಟಾರ್ ಇನ್ಸ್ ಪೆಕ್ಟರ್ ಗಳು, ಹಿರಿಯ ಅಧಿಕಾರಿಗಳ ಬೆಂಬಲವಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ). ಮೊದಲು ಸಾರ್ವಜನಿಕರಿಗೆ ಆಗಬೇಕಾಗಿರುವ ಕೆಲಸದ ಕುರಿತಂತೆ ಮಾಹಿತಿ ಪಡೆಯುವ ಮಧ್ಯವರ್ತಿಗಳು ಸಾವಿರಾರು ರೂಪಾಯಿ ಹಣ ಕೊಟ್ಟರೆ ತಕ್ಷಣದಲ್ಲೇ ಕೆಲ್ಸ ಮಾಡಿ ಕೊಡುವ ಭರವಸೆ ನೀಡುತ್ತಾರೆ. ದಾಖಲೆಗಳು ಇಲ್ಲದಿದ್ದರೂ ತಾವೇ ಸಿದ್ದಪಡಿಸುವ ಕಚೇರಿಯ ಅನಧಿಕೃತ ಸಿಬ್ಬಂದಿ( ಮಧ್ಯವರ್ತಿಗಳು) ಹೇಳಿದಂತೆ ನಡೆದುಕೊಳ್ಳುತ್ತಾರೆ.
ನ್ಯೂಝ್ ಮಿರರ್ ತನಿಖಾ ತಂಡ ಎಲೆಕ್ಟ್ರಾನಿಕ್ ಆರ್ ಟಿಓ ಕಚೇರಿಗೆ ತೆರಳಿದಾಗ ಅಲ್ಲಿ ಕಂಡು ಬಂದ ದೃಶ್ಯ ಹಾಗೂ ಕೆಲ ಸಾರ್ವಜನಿಕರು ಅಲ್ಲಿ ಪಟ್ಟ ಕಷ್ಟಗಳ ಕುರಿತ ವರದಿಯನ್ನ ದಾಖಲೆ ಸಮೇತ ಮಾಹಿತಿ ಪ್ರಕಟ ಮಾಡುತ್ತಿದೆ. ಕಚೇರಿಯಲ್ಲಿ ಇರುವ ಸಾರಿಗೆ ಅಧಿಕಾರಿಯಿಂದ ಹಿಡಿದು ಪ್ರತಿಯೊಬ್ಬರೂ ಇಲ್ಲಿ ಸಾರ್ವಜನಿಕರಿಗೆ ಹಾಗೂ ಅವರ ಸಮಯಕ್ಕೆ ಬೆಲೆ ಕೊಡುವುದಿಲ್ಲ ಎನ್ನುವುದು ಸಾಬೀತಾಗಿದೆ. ಹಾಗೆನೇ ಮಧ್ಯವರ್ತಿಗಳ ಹಾವಳಿ, ಲಂಚತನ ಮಾತ್ರ ಇಲ್ಲ ಹೆಚ್ಚು ಕೆಲ್ಸ ಮಾಡುತ್ತೆ ಎನ್ನುವುದೂ ತಿಳಿದು ಬಂದಿದೆ.
ಘಟನೆ 1
ನ್ಯೂಝ್ ಮಿರರ್ ತನಿಖಾ ತಂಡ ಮೊದಲು ದ್ವಿಚಕ್ರ ವಾಹನದ ಲೈಸನ್ಸ್ ಮಾಡಿಸಬೇಕೆಂದು ಕಚೇರಿಗೆ ತೆರಳಿತ್ತು. ಈ ವೇಳೆ ಅಲ್ಲಿ ಮೊದಲು ಎದುರಾದ ಮಧ್ಯವರ್ತಿ, ಲೈಸನ್ಸ್ ಬೇಕಂದ್ರೆ ಆರರಿಂದ ಏಳು ಸಾವಿರ ಹಣ ಆಗುತ್ತೆ ಎಂದು ಕಡ್ಡಿ ತುಂಡು ಮಾಡಿದಂತೆ ತಿಳಿಸಿದ. ದ್ವಿಚಕ್ರ ವಾಹನದ ಲೈಸನ್ಸ್ ಗೆ ಇಷ್ಟೊಂದು ಹಣ ಏಕೆ ಕೊಡಬೇಕು ಎಂದು ಕೇಳಿದ ನಮ್ಮ ತನಿಖಾ ತಂಡಕ್ಕೆ ನಿಮ್ಮ ಕೆಲಸ ಒಂದು ಗಂಟೆಯಲ್ಲೇ ಆಗುತ್ತೆ. ಫಾಸ್ಟ್ ಆಗಿ ಕೆಲಸ ಆಗಬೇಕು ಅಂದರೆ ಕಚೇರಿಯ ಆರ್ ಟಿಓ ಯಿಂದ ಹಿಡಿದು ಎಲ್ಲರ ಕೈ ಬಿಸಿ ಮಾಡಬೇಕು ಎಂಬ ಉತ್ತರ ಕೊಟ್ಟ. ಲೈಸನ್ಸ್ ಮಾಡಿಸುವ ಮೊದಲು ಆನ್ ಲೈನ್ ನಲ್ಲಿ ನೋಂದಣಿ ಮಾಡಿಸದಿದ್ದರೂ ಮಧ್ಯವರ್ತಿಗಳು ಒಂದೇ ಗಂಟೆಯಲ್ಲಿ ನಾರ್ಮಲ್ ಫೀಸ್ ಗಿಂತ ಹತ್ತು ಪಟ್ಟು ಹೆಚ್ಚು ಲಂಚ ಕೊಟ್ಟು ಮಾಡಿಸುವ ಸ್ಥಿತಿ ಕಚೇರಿಯಲ್ಲಿದೆ.
ಘಟನೆ 2
ನ್ಯೂಝ್ ಮಿರರ್ ತಂಡ ಆನ್ ಲೈನ್ ಟೆಸ್ಟ್ ಗೆ ತೆರಳಿತ್ತು. ಈ ವೇಳೆ ಮತ್ತೆ ಎದುರಾಗಿದ್ದು ಮತ್ತೊಬ್ಬ ಮಧ್ಯವರ್ತಿ, ಇಡೀ ಕಚೇರಿಯನ್ನ ಆವರಿಸಿರುವ ಮಧ್ಯವರ್ತಿಗಳು ಕಚೇರಿಯ ಒಳಗೇ ತಿರುಗಾಡುತ್ತಾ ಇರುತ್ತಾರೆ. ಆನ್ ಲೈನ್ ಟೆಸ್ಟ್ ಗೆ ರೂಂ ಗೆ ತೆರಳಿ ಪರೀಕ್ಷೆ ಬರೆಯುತ್ತಿದ್ದಾಗ ರೂಂ ಗೆ ಎಂಟ್ರಿಯಾದ ಮಧ್ಯವರ್ತಿ, ತಮ್ಮ ಕಡೆಯಿಂದ ಪರೀಕ್ಷೆಗೆ ಬಂದ ಅಭ್ಯರ್ಥಿಗೆ ತಾನೇ ಉತ್ತರ ಹೇಳಿಕೊಟ್ಟ. ಅಷ್ಟೇ ಅಲ್ದೇ ಟೆಸ್ಟ್ ರೂಂ ನ ಉಸ್ತುವಾರಿ ವಹಿಸಿದ್ದ ಸಿಬ್ಬಂದಿ ನೋಡಿಯೂ ನೋಡದೇ ಇದ್ದಿದ್ದು ಮಾತ್ರ ದುರಂತ.
ಘಟನೆ 3
ಇಡೀ ಕಚೇರಿಯಲ್ಲಿ ಹೆಚ್ಚು ಲಂಚ ಕೇಳುವ ಪದ್ದತಿ ಹಾಗೂ ಮದ್ಯವರ್ತಿಗಳ ಹಾವಳಿ ಇರುವುದು ಕಚೇರಿಯಲ್ಲಿರುವ ರೂಂ ನಂ 5 ರಲ್ಲಿ. ಇಲ್ಲಿನ ಸಿಬ್ಬಂದಿ ಸರಿಯಾದ ಸಮಯಕ್ಕೆ ಕಚೇರಿಗೆ ಬರುವುದಿಲ್ಲ. ಆನ್ ಲೈನ್ ನಲ್ಲಿ ಎಲ್ಲ ದಾಖಲೆ ಸಲ್ಲಿಸಿ ಬಂದಿದ್ದರೂ ಆಫ್ ಲೈನ್ ನಲ್ಲಿ ಮತ್ತೊಮ್ಮೆ ಸಲ್ಲಿಸಿ ಎಂದು ಹೇಳುವ ಸಿಬ್ಬಂದಿ ಇದಕ್ಕೆ ಮಧ್ಯವರ್ತಿಗಳ ಸಹಕಾರಿ ಪಡೆಯಿರಿ ಎಂದೂ ಸಲಹೆ ನೀಡುತ್ತಾರೆ. ಅಷ್ಟೇ ಅಲ್ಲದೆ ಬ್ರೋಕರ್ ಗಳ ಸಹಕಾರ ಪಡೆಯಿರಿ ಎಂದು ಹೇಳಿದ್ದಲ್ಲದೆ ಬ್ರೋಕರ್ ಹೇಳುವಷ್ಟು ಹಣ ಕೊಟ್ಟರೆ ಡೌನ್ ಇದ್ದ ಸರ್ವರ್ ತಕ್ಷಣದಲ್ಲಿ ಸರಿಯಾಗುತ್ತದೆ. 742 ರೂಪಾಯಿಯಲ್ಲಿ ಆಗುವ ಕೆಲ್ಸಕ್ಕೆ ಬ್ರೋಕರ್ 4 ಸಾವಿರ ಕೇಳುತ್ತಾರೆ. ಬ್ರೋಕರ್ ಕೇಳಿದಷ್ಟು ಹಣ ಕೊಟ್ಟರೆ ಕೆಲಸ ಅಂದುಕೊಂಡ ಸಮಯಕ್ಕೆ ಆಗುತ್ತದೆ ಇಲ್ಲದಿದ್ದರೆ ಇಲ್ಲ. ಇನ್ನೊಂದು ವಿಚಾರ ಏನೆಂದರೆ ಇದನ್ನೆಲ್ಲ ಆಲಿಸಬೇಕಾದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೌಂದರ್ಯ ಕಚೇರಿಯಲ್ಲಿಯೇ ಇರೋದಿಲ್ಲವಂತೆ.
ಘಟನೆ 4
ಸಾರ್ವಜನಿಕರೊಬ್ಬರು ನ್ಯೂಝ್ ಮಿರರ್ ಗೆ ವಾಟ್ಸ್ ಅಫ್ ಮಾಡಿದ್ದು, ಡಿಎಲ್ ಗಾಗಿ 2023 ರ ಮೇ ತಿಂಗಳಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ಸಲ್ಲಿಸಿ 9 ತಿಂಗಳು ಕಳೆದಿದ್ದರೂ ಇದೂವರೆಗೂ ಡಿಲ್ ಸಂಬಂಧಪಟ್ಟವರಿಗೆ ತಲುಪಿಸಿಲ್ಲವಂತೆ. ಮೊದಲು ಅರ್ಜಿ ಸಲ್ಲಿಸಿ ಕಚೇರಿಗೆ ಅಲೆದಾಡಿದ ನಂತರ ಅಂದರೆ 2023 ರ ನವೆಂಬರ್ ಕೊನೆಯ ವಾರದಲ್ಲಿ ನಿಮ್ಮ ಡಿಎಲ್ ಪ್ರಿಂಟ್ ಆಗಿದೆ ನೀವು ನೀಡಿರುವ ವಿಳಾಸಕ್ಕೆ ಕಳುಹಿಸುತ್ತೀವಿ ಅಂತ ಹೇಳಿದ್ದರಂತೆ. ಅದಾಗಿ ಮೂರು ತಿಂಗಳು ಕಳೆದರೂ ಇನ್ನೂ ಡಿಎಲ್ ತಲಿಪಿಲ್ಲವಂತೆ. ಒಂಭತ್ತು ತಿಂಗಳಲ್ಲಿ ಹೆರಿಗೆ ಆಗುತ್ತೆ ಆದರೆ ಒಂದು ಡಿಲ್ ಮಾತ್ರ ಸಿಗೋದಿಲ್ಲ ಎಂದು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಇಡೀ ಕಚೇರಿಯಲ್ಲಿ ಭ್ರಷ್ಟತೆ ತುಂಬಿ ತುಳುಕುತ್ತಿದೆ. ಇಂಥ ವ್ಯವಸ್ಥೆಯಲ್ಲಿ ನಾವು ಇದ್ದೀವಿ ಎಂದು ಬೇಜಾರಿನಿಂದ ಮಾಹಿತಿ ನೀಡಿದ್ದಾರೆ.
ಘಟನೆ 5
ಸಾರ್ವಜನಿಕರು ಕಚೇರಿಗೆ ತೆರಳಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಕು ಎಂದರೆ ಯಾವೊಬ್ಬ ಅಧಿಕಾರಿಯೂ ನಿಗಧಿತ ಸಮಯಕ್ಕೆ ಕಚೇರಿಯಲ್ಲಿ ಸಿಗುವುದಿಲ್ಲ. ಎಲ್ಲ ಮಧ್ಯವರ್ತಿಗಳೇ, ಬ್ರೋಕರ್ ಗಳೇ ಇಲ್ಲಿ ಹಿರಿಯ ಆರ್ ಟಿಓ, ಸೀನಿಯರ್ ಇನ್ಸ್ ಪೆಕ್ಟರ್, ಕ್ಲರ್ಕ್, ಅಟೆಂಡರ್. ಅಧಿಕಾರಿಗಳನ್ನ ಕೇಳೋಣ ಎಂದರೆ ಯಾರೂ ಸರಿಯಾದ ಸಮಯಕ್ಕೆ ಕಚೇರಿಗೆ ಬರೋದಿಲ್ಲವಂತೆ. ನ್ಯೂಝ್ ಮಿರರ್ ತಂಡಕ್ಕೂ ಇದೇ ಅನುಭವವಾಗಿದ್ದು, ಕಚೇರಿಯಲ್ಲಿನ ಭ್ರಷ್ಟತೆ ಹಾಗೂ ಲಂಚಾವತಾರವನ್ನ ಅನಾವರಣ ಮಾಡುವ ಕೆಲ್ಸ ಮಾಡುತ್ತಿದೆ.
ಇಷ್ಟೆಲ್ಲಾ ಅವ್ಯವಸ್ಥೆಗಳು ಗೊತ್ತಿದ್ದರೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಸೌಂದರ್ಯ ಸುಮ್ಮನಿರುವುದು ಯಾಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲ ಸಾರ್ವಜನಿಕರ ಬಳಿ ಮಧ್ಯವರ್ತಿಗಳು ಹೇಳಿದ ಪ್ರಕಾರ ತಾವು ಪಡೆದ ಲಂಚದ ಹಣವನ್ನ ಸಂಬಂಧಪಟ್ಟ ಅಧಿಕಾರಿಗಳಿಗೂ ತಲುಪಿಸುತ್ತಾರಂತೆ. ಹೀಗಾಗಿಯೇ ಆರ್ ಟಿಓ ಸಿಬ್ಬಂದಿಗಿಂತ ಹೆಚ್ಚು ಮಧ್ಯವರ್ತಿಗಳ ಹಾವಳಿ ಹೆಚ್ಚಾಗೋಕೆ ಕಾರಣ ಎನ್ನುವ ಮಾತುಗಳೂ ಕೇಳಿ ಬರುತ್ತಿದೆ.
ಇದೇ ರೀತಿ ರಾಜ್ಯದ ಬೇರೆ ಸಾರಿಗೆ ಕಚೇರಿಗಳಲ್ಲಿ ಸಾರ್ವಜನಿಕರು ಇಂಥ ಸಮಸ್ಯೆ ಎದುರಿಸುತ್ತಿದ್ದರೆ ಮಧ್ಯವರ್ತಿಗಳ ಹಾವಳಿ ಎದುರಿಸಿದ್ದರೆ ಹಾಗೂ ನಿಮ್ಮ ಕಾರ್ಯಕ್ಕೆ ಅಲೆದು ಅಲೆದು ಸುಸ್ತಾಗಿದ್ದರೆ ನಮ್ಮ ಮೇಲ್ ಐಡಿ ([email protected]) ಹಾಗೂ ನಮ್ಮ ವಾಟ್ಸ್ ಅಫ್ ಸಂಖ್ಯೆ (8105669066) ಗೆ ಮಾಹಿತಿ ನೀಡಿ, ( ಕೇವಲ ಮೆಸೆಜ್ ಮಾತ್ರ).