ಮೈಸೂರು(www.thenewzmirror.com): ಬಹುನಿರೀಕ್ಷಿತ ಮೇಕೆದಾಟು ಯೋಜನೆ ಜಾರಿಗೆ ನಾವು ಸನ್ನದ್ಧರಾಗಿದ್ದೇವೆ. ನ್ಯಾಯಾಲಯದಲ್ಲಿಯೂ ನಮಗೆ ನ್ಯಾಯ ಸಿಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು,ತಮಿಳುನಾಡಿಗೆ ಹೆಚ್ಚುವರಿ ನೀರು ಹರಿದು ಹೋಗುತ್ತಿದೆ ಹಾಗೂ ಅವರ ಅಚ್ಚುಕಟ್ಟು ಪ್ರದೇಶ ಹೆಚ್ಚಳವಾಗುತ್ತಿದೆ, ” ನಮ್ಮ ಅಚ್ಚುಕಟ್ಟು ಪ್ರದೇಶವೂ ಶೇ.6 ರಷ್ಟು ಹೆಚ್ಚಾಗಿದೆ. ಯೋಜನೆ ಜಾರಿಗೆ ನಾವು ಸನ್ನದ್ಧರಾಗಿದ್ದೇವೆ. ನ್ಯಾಯಾಲಯದಲ್ಲಿಯೂ ನಮಗೆ ನ್ಯಾಯ ಸಿಗುತ್ತದೆ. ಈಗಾಲೇ ಕನಕಪುರದಲ್ಲಿ ಮೇಕೆದಾಟು ಕಚೇರಿ ತೆರೆದಿದ್ದೇವೆ. ಭೂಸ್ವಾಧೀನ, ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಎಲ್ಲಿ ಭೂಮಿ ನೀಡಬೇಕು ಎಂದು ನಾವು ತಯಾರಾಗಿದ್ದೇವೆ” ಎಂದು ತಿಳಿಸಿದರು.
ಕಾವೇರಿ ಹಾಗೂ ಕಬಿನಿ ನೀರಾವರಿ ಪ್ರದೇಶದಲ್ಲಿ ಅಭಿವೃದ್ಧಿಯಾಗಿಲ್ಲ ಎನ್ನುವ ಪ್ರಶ್ನೆಗೆ, “ಮಂಡ್ಯ ಜಿಲ್ಲೆಗೆ ನೀರಾವರಿ ಇಲಾಖೆಯಿಂದ 1 ಸಾವಿರ ಕೋಟಿ ಅನುದಾನ ನೀಡಿದ್ದೇವೆ. ಕಾಲುವೆ ಸ್ವಚ್ಚತೆ, ನೀರಿನ ಸೋರಿಕೆ ತಡೆಗಟ್ಟುವಿಕೆ, ಕೊನೆ ಪ್ರದೇಶಕ್ಕೆ ನೀರು ತಲುಪಿಸುವುದು ಹೀಗೆ ಅನೇಕ ಕೆಲಸಗಳನ್ನು ಮಾಡಿದ್ದೇವೆ. ಕಬಿನಿ ಪ್ರದೇಶಕ್ಕೆ ರೂ.400 ಕೋಟಿ ನೀಡಿದ್ದೇವೆ” ಎಂದರು.
ಕಾವೇರಿ ಆರತಿ ಘೋಷಣೆ ಮಾಡಿ ಒಂದು ವರ್ಷವಾಗಿರುವ ಬಗ್ಗೆ ಕೇಳಿದಾಗ, “ಒಂದಷ್ಟು ರೈತರು ಆತಂಕದಲ್ಲಿದ್ದಾರೆ. ಅವರು ಆತಂಕಕ್ಕೆ ಒಳಗಾಗುವ ಪ್ರಮೇಯವಿಲ್ಲ. ಪೂಜೆ ಹಾಗೂ ಪ್ರಾರ್ಥನೆ ಮಾಡುವುದರಲ್ಲಿ ಏನಿದೆ? ಪೂಜೆಯನ್ನು ಚಿಕ್ಕದಾಗಿಯೂ ದೊಡ್ಡದಾಗಿಯೂ ಮಾಡಬಹುದು. ಸುಮಾರು 1500 ಜನಕ್ಕೆ ಪ್ರತ್ಯಕ್ಷವಾಗಿ ಉದ್ಯೋಗ ದೊರೆಯುತ್ತದೆ” ಎಂದರು.
ಕೆಆರ್ ಎಸ್, ಕಬಿನಿಗೆ ಒಟ್ಟಾಗಿ ಬಾಗಿನ ಅರ್ಪಣೆ ಮಾಡುವಿರಾ ಎಂದು ಕೇಳಿದಾಗ, “ಈಗ ಕೆಆರ್ ಎಸ್ ಜೂನ್ ತಿಂಗಳಲ್ಲಿ ತುಂಬಿ ಇತಿಹಾಸದ ಪುಟ ಸೇರಿದೆ” ಎಂದರು.
“ಕಾವೇರಿ ಜಲಾನಯನ ಪ್ರದೇಶಕ್ಕೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಪ್ರತಿ ಕ್ಷೇತ್ರವನ್ನೂ ಗಮದಲ್ಲಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆ ಒಂದಕ್ಕೆ 1 ಸಾವಿರ ಕೋಟಿಗೂ ಹೆಚ್ಚು ಅನುದಾನಕ್ಕೆ ಅನುಮೋದನೆ ನೀಡಲಾಗಿದೆ” ಎಂದು ಡಿಸಿಎಂ ಹೇಳಿದರು.
“ನಮ್ಮ ಸರ್ಕಾರ ಎರಡು ವರ್ಷಗಳ ಅಧಿಕಾರವಧಿಯಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶವನ್ನು ಹೆಚ್ಚು ಮಾಡಿದೆ. 80 ವರ್ಷಗಳ ಹಳೆಯ ಕಾಲುವೆಗಳನ್ನು ದುರಸ್ತಿಗೊಳಿಸಲಾಗಿದೆ. ತಮಿಳುನಾಡಿಗೆ 9 ಟಿಎಂಸಿ ನೀರು ಹೋಗಬೇಕಿತ್ತು ಹೆಚ್ಚು ಮಳೆ ಬಂದ ಕಾರಣಕ್ಕೆ 30 ಟಿಎಂಸಿಗಿಂತ ಹೆಚ್ಚು ನೀರು ಬಿಡಲಾಗಿದೆ. ಕಳೆದ ವರ್ಷವೂ 177 ಟಿಎಂಸಿಗಿಂತ ಹೆಚ್ಚುವರಿಯಾಗಿ 305 ಟಿಎಂಸಿ ನೀರು ಹರಿಸಲಾಗಿತ್ತು. 2022- 23 ರಲ್ಲಿ 400 ಟಿಎಂಸಿ ಹೆಚ್ಚುವರಿ ನೀರು ಹರಿಸಲಾಗಿದೆ. ಮೂರು ವರ್ಷಗಳಿಗೊಮ್ಮೆ ನೀರು ಹರಿವಿನ ಪ್ರಮಾಣ ಕಡಿಮೆಯಾಗುವುದನ್ನು ಅಂಕಿಅಂಶಗಳನ್ನು ನೋಡಿದರೆ ತಿಳಿಯುತ್ತದೆ” ಎಂದರು.