ಐಎಎಸ್ ಅಧಿಕಾರಿಗಳ ವಿರುದ್ಧ ಅವಮಾನ ಆಗುವಂತೆ ಸಿಎಂ ನಡೆದುಕೊಂಡಾಗ ಅವರ ಅಸೋಸಿಯೇಷನ್ ಎಲ್ಲಿ ಹೋಗಿತ್ತು: ವಿಜಯೇಂದ್ರ

RELATED POSTS

ಬೆಂಗಳೂರು(www.thenewzmirror.com): ಮುಖ್ಯಮಂತ್ರಿ ಸಿದ್ದರಾಮಯ್ಯ ಐಎಎಸ್ ಅಧಿಕಾರಿಗಳ ವಿರುದ್ಧ ಅವಮಾನ ಆಗುವಂತೆ ನಡೆದುಕೊಂಡಾಗ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್ ಎಲ್ಲಿ ಹೋಗಿತ್ತು? ಆಗ ಅವರು ಯಾಕೆ ಮುಖ್ಯಮಂತ್ರಿಗಳ ವಿರುದ್ಧ ದೂರು ನೀಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ  ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯ ರವಿಕುಮಾರ್ ಅವರ ಹೇಳಿಕೆ ಕುರಿತು ಮಾಧ್ಯಮಗಳ ವರದಿ ಗಮನಿಸಿದ್ದೇನೆ. ರವಿಕುಮಾರ್ ಅವರು ಈ ಸಂಬಂಧ ಸ್ಪಷ್ಟನೆಯನ್ನೂ ನೀಡಿದ್ದಾರೆ. ತದನಂತರ ಐಎಎಸ್ ಅಧಿಕಾರಿಗಳ ಅಸೋಸಿಯೇಷನ್‍ನವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ದೂರು ನೀಡಿದ್ದಾಗಿ ಮಾಹಿತಿ ಬಂದಿದೆ. ಕಾಂಗ್ರೆಸ್ ಪಕ್ಷದ ಕೆಲವು ಮುಖಂಡರು ನಿನ್ನೆ ಹೊರಟ್ಟಿಯವರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ; ಎಫ್‍ಐಆರ್ ದಾಖಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ ಎಂದರು.

ರವಿಕುಮಾರ್ ಅವರ ವಿಚಾರ ಒಂದೆಡೆ ಇರಲಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಬೆಳಗಾವಿಯಲ್ಲಿ ಬಹಿರಂಗ ಸಭೆಯಲ್ಲಿ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಗೆ ಕಪಾಳಕ್ಕೆ ಹೊಡೆಯಲು ಹೋದರಲ್ಲವೇ? ಆಗ ಈ ಅಸೋಸಿಯೇಷನ್ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು. ಇದೇ ಮುಖ್ಯಮಂತ್ರಿಗಳು ಇನ್ನೊಂದು ಕಡೆ ಸರಕಾರಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳನ್ನು ‘ಏಯ್ ಎದ್ದೇಳು’ ಎಂದು ಅಪಮಾನ ಮಾಡಿದ್ದರು. ಆಗ ಐಎಎಸ್ ಅಸೋಸಿಯೇಷನ್ ಎಲ್ಲಿ ಹೋಗಿತ್ತು ಎಂದು ಕೇಳಿದರು. ಇದು ಕೂಡ ಚರ್ಚೆ ಆಗಲಿ. ಜನರು ಕೂಡ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

ಸಿಎಂ ಸ್ಥಾನಕ್ಕೆ ಬಹಳ ಜನ ಪ್ರಯತ್ನ:

ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಹಳ ಜನ ಪ್ರಾರ್ಥನೆ ಮಾಡುತ್ತಿದ್ದಾರೆ; ಪ್ರಯತ್ನ ಮಾಡುತ್ತಿದ್ದಾರೆ. ಸುರ್ಜೇವಾಲಾರನ್ನು ಕರೆಸಿ ಭೂಮಿ ಪೂಜೆ, ಗುದ್ದಲಿ ಪೂಜೆ ಮಾಡಿಸಲಿದ್ದಾರೆ. ಬರುವ ದಿನಗಳಲ್ಲಿ ಏನೇನಾಗುತ್ತೋ ಕಾದು ನೋಡೋಣ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಸಿದ್ದರಾಮಯ್ಯನವರು ರಾಜೀನಾಮೆ ನೀಡಿದರೆ ಯಾರು ಮುಖ್ಯಮಂತ್ರಿ ಎಂಬುದು ನಮಗೆ ಮುಖ್ಯವಲ್ಲ; ಕಾಂಗ್ರೆಸ್ ಸರಕಾರದ ಬಗ್ಗೆ ರಾಜ್ಯದ ಜನರು ಛೀಮಾರಿ ಹಾಕುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತರ ಬಗ್ಗೆ ಈ ಸರಕಾರಕ್ಕೆ ಕಾಳಜಿ ಇಲ್ಲ ಎಂದು ಬಿ.ವೈ. ವಿಜಯೇಂದ್ರ ಅವರು ಟೀಕಿಸಿದರು.

ಬಡವರಿಗೆ ಮನೆ, ಗಂಗಾ ಕಲ್ಯಾಣ ಯೋಜನೆ ನೀಡಲು ಈ ಕಾಂಗ್ರೆಸ್ ಸರಕಾರಕ್ಕೆ ಸಾಧ್ಯ 

ಆಗುತ್ತಿಲ್ಲ. ಮುಖ್ಯಮಂತ್ರಿ ಯಾರು ಇದ್ದರೆಷ್ಟು? ಬಿಟ್ಟರೆಷ್ಟು. ಅಭಿವೃದ್ಧಿ ಆಗುತ್ತಿಲ್ಲ. ರಾಜ್ಯದ ಇತಿಹಾಸದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಾರಿಗೆ ಸರಕಾರಿ ನೌಕರರಿಗೆ ಸಂಬಳ ಕೊಡಲು ಸಾಧ್ಯ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು. ಪೊಲೀಸ್ ಇಲಾಖೆಯಲ್ಲಿ ನಿಗದಿತ ದಿನದಂದು ವೇತನ ಕೊಡಲು ಸಾಧ್ಯ ಆಗುತ್ತಿಲ್ಲ ಎಂದು ವಿವರಿಸಿದರು. ನೀರಾವರಿ ಇಲಾಖೆಯಲ್ಲಿ 2-3 ತಿಂಗಳಿನಿಂದ ಸಂಬಳ ಸರಿಯಾಗಿ ಆಗುತ್ತಿಲ್ಲ. ಎಲ್ಲ ಇಲಾಖೆಗಳಲ್ಲೂ ಇದೇ ಪರಿಸ್ಥಿತಿ ಇದೆ ಎಂದು ತಿಳಿಸಿದರು. ಇಂಥ ದರಿದ್ರ ಸರಕಾರ ಬದುಕಿದೆಯೇ ಎಂದು ಜನಸಾಮಾನ್ಯರು ಮಾತನಾಡುತ್ತಿದ್ದಾರೆ. ಯಾರೇ ಮುಖ್ಯಮಂತ್ರಿ ಇದ್ದರೂ ಪರಿಸ್ಥಿತಿ ಬದಲಾಗದು ಎಂದು ನುಡಿದರು.

ಪ್ರಿಯಾಂಕ್ ಖರ್ಗೆ ತಿರುಕನ ಕನಸು: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರೆಸ್ಸೆಸ್ ನಿಷೇಧಿಸುವುದಾಗಿ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದರ ಕುರಿತು ಪತ್ರಕರ್ತರು ಪ್ರಶ್ನಿಸಿದರು. ಮೂರ್ಖತನದ ಹೇಳಿಕೆಗೆ ನಾವು ಪ್ರತಿಕ್ರಿಯೆ ಕೊಡಲಾಗುವುದಿಲ್ಲ; ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರಕಾರವು ಮೂರನೇ ಬಾರಿ ಅಧಿಕಾರಕ್ಕೆ ಬಂದಿದೆ. ನರೇಂದ್ರ ಮೋದಿ ಜೀ ಅವರ ಜನಪ್ರಿಯತೆಯೂ ಜಾಸ್ತಿ ಆಗುತ್ತಿದೆ. ದೇಶವೂ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿದೆ. ಪುಕ್ಸಟ್ಟೆ ಭಾಷಣ ಮಾಡಿದರೆ ಭಾರತ 4ನೇ ದೊಡ್ಡ ಆರ್ಥಿಕ ಶಕ್ತಿ ಆಗಲು ಸಾಧ್ಯ ಇರಲಿಲ್ಲ; ಯಾವ ರೀತಿ ನರೇಂದ್ರ ಮೋದಿ ಜೀ ಅವರು ಕಳೆದ 11 ವರ್ಷಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ, ದೇಶವನ್ನು ಮುನ್ನಡೆಸಿದ್ದಾರೋ ಅದರಿಂದ ಈ ಸ್ಥಾನ ಲಭಿಸಿದೆ. ಪ್ರಿಯಾಂಕ್ ಖರ್ಗೆ ರಾತ್ರಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ತಿರುಕನ ಕನಸು ಕಾಣುತ್ತಿದ್ದರೆ ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಸರಕಾರ ಬದಲಾಗುವ ಕುರಿತು ನಮ್ಮ ಪಕ್ಷದವರು ಮಾತ್ರವಲ್ಲ; ಜನಸಾಮಾನ್ಯರೂ ಮಾತನಾಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರೂ ಮಾತನಾಡುತ್ತಿದ್ದಾರೆ. ರಾಮನಗರದ ಶಾಸಕ ಇಕ್ಬಾಲ್ ಅವರ ಹೇಳಿಕೆಗೆ ಮುಖ್ಯಮಂತ್ರಿ ಪ್ರತಿಕ್ರಿಯೆ ಏನು ಎಂದು ಈ ಸಂಬಂಧ ಪ್ರಶ್ನೆಗೆ ಮರುಪ್ರಶ್ನೆ ಹಾಕಿದರು.

ಕೇಂದ್ರದ ಸಚಿವರು, ನಮ್ಮೆಲ್ಲರ ಹಿರಿಯರಾದ ಪ್ರಲ್ಹಾದ್ ಜೋಶಿ ಅವರು ನಮ್ಮ ಪಕ್ಷದೊಳಗೆ ಕೆಲವು ಜಿಲ್ಲೆಗಳಲ್ಲಿ ಇದ್ದ ಆಂತರಿಕ ಸಮಸ್ಯೆ ಪರಿಹರಿಸುತ್ತಿದ್ದಾರೆ. ಸಣ್ಣಪುಟ್ಟ ಸಮಸ್ಯೆ ಪರಿಹರಿಸುವಂತೆ ನಾನೇ ಮನವಿ ಮಾಡಿದ್ದೆ. ಅದರಂತೆ ಸಮಯ ಕೊಟ್ಟು ಸಮಸ್ಯೆ ತಿಳಿಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist