ಬೆಂಗಳೂರು,(www.thenewzmirror.com) :
ಬೆಂಗಳೂರು ವಿಶ್ವವಿದ್ಯಾಲಯ ಯುಜಿಸಿ – ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು. ಜ್ಞಾನಭಾರತಿ ಆವರಣದ ಪ್ರೊ.ವೆಂಕಟಗಿರಿಗೌಡ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಮಹಿಳಾ ಪ್ರಾಧ್ಯಾಪಕರು, ಅಧಿಕಾರಿಗಳು, ಸಿಬ್ಬಂದಿ ಭಾಗಿಯಾಗಿ ವಿನೂತನವಾಗಿ ಮಹಿಳಾ ದಿನಾಚರಣೆ ಆಚರಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಹಿಳೆಯರಿಗೆ ಸಾಧಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಮನೋರಂಜನಾ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಂಗಪಯಣ ನಾಟಕ ತಂಡದಿಂದ ಡಾ.ಅಕ್ಕಯ್ ಪದ್ಮಶಾಲಿ ಅವರ ಜೀವನ ಆಧಾರಿತ ನಾಟಕ ‘ಅಕ್ಕಯ್ ಕರುಣೆಗೊಂದು ಸವಾಲು’ ನಾಟಕ ಪ್ರದರ್ಶನ ಮಾಡಲಾಯಿತು. ಈ ಸಂದರ್ಭದಲ್ಲಿ ಕುಲಪತಿ ಡಾ.ಜಯಕರ ಎಸ್ ಎಂ,ಕುಲಸಚಿವ ಶೇಕ್ ಲತೀಫ್,ವಿತ್ತಾಧಿಕಾರಿ ಡಾ ಸುನೀತಾ ಎಂ,ಸಿಂಡಿಕೇಟ್ ಸದಸ್ಯರಾದ ಡಾ.ಮಾಲಿನಿ ಕೆ,ಡಾ.ಎಂ.ಸಿದ್ದಪ್ಪ ಬೆಲಘಟ್ಟ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕುಲಪತಿ ಡಾ.ಜಯಕರ ಎಸ್ ಎಂ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರು ಮೇಲುಗೈ ಸಾಧಿಸಿದ್ದಾರೆ. ಪಿಯುಸಿ,ಎಸ್‌ಎಸ್ಎಲ್‌ಸಿ ಎಲ್ಲದರಲ್ಲೂ ಹೆಣ್ಣುಮಕ್ಕಳು ನಂಬರ್ ಒನ್ ಆದ್ರೂ ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳುವುದು ಸವಾಲಿನ ಸಂಗತಿ.ಇವತ್ತಿಗೂ ದೇಶದಲ್ಲಿ ಸ್ತ್ರೀಯರಿಗೆ ಸಾಕಷ್ಟು ಸಮಸ್ಯೆಗಳಿವೆ, ಅಂಕಿಅಂಶಗಳ ಪ್ರಕಾರ ಹೆಣ್ಣುಮಕ್ಕಳ ಸಾಕ್ಷರತೆ ಪ್ರಮಾಣ ಇನ್ನೂ ಕೂಡ ಹಿಂದುಳಿದಿದೆ.ಶಿಕ್ಷಣದಿಂದ ಮಾತ್ರ ಲಿಂಗ ತಾರತಮ್ಯ ಸಾಧಿಸಲು ಸಾಧ್ಯ.ಹೆಣ್ಣು ಸದೃಡವಾದರೆ ವಿಕಸಿತ ಭಾರತ ಸಾಧ್ಯ,ಹಾಗಾಗಿ ಸ್ತ್ರೀಯರು ಎಲ್ಲಾ ವರ್ಗದಲ್ಲೂ ಮತ್ತಷ್ಟು ಪ್ರಬಲರಾಗಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.