ಬೆಂಗಳೂರು, (www.thenewzmirror.com) :
ಕೇಂದ್ರ ಸರ್ಕಾರ ಸುಧಾಮೂರ್ತಿ ಅವರನ್ನು ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನ ಮಾಡಿದೆ. ಇಂದು ಅಂದರೆ ಮಾರ್ಚ್ 8ರ ಶುಕ್ರವಾರ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಆ ಮೂಲಕ ಪ್ರಧಾನಿ ಮೋದಿ ಮಹಿಳಾ ದಿನಾಚರಣೆಯಂದೇ ರಾಜ್ಯದ ಮಹಿಳಾ ಸಮುದಾಯಕ್ಕೆ ಹೊಸ ಗಿಫ್ಟ್ ನೀಡಿದ್ದಾರೆ.
ಇನ್ಫೋಸಿಸ್ ಫೌಂಡೇಷನ್‌ನ ಮುಖ್ಯಸ್ಥೆ ಸುಧಾಮೂರ್ತಿ ಅವರನ್ನ ರಾಜ್ಯಸಭಾ ಸದಸ್ಯರಾಗಿ ಸುಧಾಮೂರ್ತಿ (73) ಅವರನ್ನು ನಾಮ ನಿರ್ದೇಶನ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾಪಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಈ ಕುರಿತಂತೆ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದು, ಭಾರತದ ರಾಷ್ಟ್ರಪತಿಗಳು ಸುಧಾಮೂರ್ತಿ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ನನಗೆ ಖುಷಿ ತಂದಿದೆ ಹಾಗೆನೇ ಸಮಾಜಸೇವೆ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರ ಮತ್ತು ಸ್ಪೂರ್ತಿದಾಯಕವಾಗಿದೆ. ರಾಜ್ಯಸಭೆಯಲ್ಲಿ ಅವರ ಉಪಸ್ಥಿತಿಯು ನಾರಿ ಶಕ್ತಿಗೆ ಪ್ರಬಲವಾದ ಸಾಕ್ಷಿಯಾಗಲಿದೆ. ಅವರ ಸಂಸದೀಯ ಅಧಿಕಾರಾವಧಿಗೆ ಹಾರೈಸುತ್ತೇನೆ. ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.
ಸುಧಾಮೂರ್ತಿ ಪುತ್ರಿ ಅಕ್ಷತಾ ಮೂರ್ತಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ. ರಿಷಿ ಸುನಕ್ ಮತ್ತು ಅಕ್ಷತಾ ಮೂರ್ತಿ ಈಗಾಗಲೇ ವಿದೇಶದಲ್ಲಿ ರಾಜಕೀಯದಲ್ಲಿದ್ದಾರೆ. ಈಗ ಸುಧಾಮೂರ್ತಿ ಅವರನ್ನು ಭಾರತದಲ್ಲಿ ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ. ಲೇಖಕರು, ವಿವಿಧ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿರುವ ಸುಧಾಮೂರ್ತಿ ಅವರು ರಾಜಕೀಯಕ್ಕೆ ಬರಬೇಕು ಎಂಬುದು ಬಹಳ ದಿನಗಳ ಬೇಡಿಕೆಯಾಗಿತ್ತು. ಮಹಿಳಾ ದಿನಾಚರಣೆ ದಿನವೇ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಲಾಗಿದೆ.
ನಿರೀಕ್ಷೆ ಮಾಡಿರಲಿಲ್ಲ
ರಾಜ್ಯಸಭಾ ಸದಸ್ಯರಾಗಿ ನಾಮ ನಿರ್ದೇಶನಗೊಂಡ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸುಧಾಮೂರ್ತಿ ಅವರು, “ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಈ ವಿಚಾರ ಈಗ ತಿಳಿಯಿತು. ರಾಜಕೀಯಕ್ಕೆ ಬರಬೇಕು ಎಂದು ಕೊಂಡಿರಲಿಲ್ಲ. ಸಮಾಜಕ್ಕಾಗಿ ಸದಾ ಕೆಲಸ ಮಾಡುತ್ತೇನೆ” ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ ಸುಧಾಮೂರ್ತಿ.
ಆಗಸ್ಟ್ 19, 1950ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿ ಸುಧಾಮೂರ್ತಿ ಜನಿಸಿದರು. ಡಾ. ಆರ್. ಹೆಚ್. ಕುಲಕರ್ಣಿ ಮತ್ತು ವಿಮಲಾ ಕುಲಕರ್ಣಿ ದಂಪತಿಯ ಪುತ್ರಿ. ಹುಬ್ಬಳ್ಳಿಯ ಕೆಎಲ್ಇ ಸಂಸ್ಥೆಯ BVB ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ಐಐಟಿಯಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಟಾಟಾ ಇಂಜಿನಿಯರಿಂಗ್ ಮತ್ತು ಲೋಕೊಮೊಟಿವ್ ಕಂಪನಿಯಲ್ಲಿ ಸುಧಾಮೂರ್ತಿ ಕೆಲಸ ಆರಂಭಿಸಿದರು. ಅತಿದೊಡ್ಡ ವಾಹನ ತಯಾರಿಕಾ ಘಟಕಕ್ಕೆ ನೇಮಕಗೊಂಡ ಮೊದಲ ಮಹಿಳಾ ಇಂಜಿನಿಯರ್ ಎಂಬ ಹೆಗ್ಗಳಿಕೆ ಅವರದ್ದು. ಮುಂಬೈ ಮತ್ತು ಜಮ್‌ಶೆಡ್‌ಪುರದಲ್ಲಿಯೂ ಕಾರ್ಯ ನಿರ್ವಹಣೆ ಮಾಡಿದರು.
ಸುಧಾಮೂರ್ತಿ ಅವರು 1970 ಫೆಬ್ರವರಿ 10ರಂದು ನಾರಾಯಣ ಮೂರ್ತಿ ಅವರನ್ನು ವಿವಾಹವಾದರು. ಇನ್ಪೋಸಿಸ್ ಕಂಪನಿ ಸ್ಥಾಪಿಸಿದರು. ಕಂಪನಿ ಆದಾಯದಲ್ಲಿ ಒಂದಷ್ಟು ಹಣವನ್ನು ಸಮಾಜ ಸೇವೆಗೆ ಮೀಡಲಿಟ್ಟರು. 1996ರಲ್ಲಿ ಇನ್ಫೋಸಿಸ್ ಫೌಂಡೇಷನ್ ಸ್ಥಾಪನೆ ಮಾಡಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮನೆ ನಿರ್ಮಾಣ, ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಾಣ, ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಫೌಂಡೇಷನ್ ಮೂಲಕ ಸಮಾಜಮುಖಿ ಕಾರ್ಯವನ್ನ ಮಾಡುತ್ತಿದ್ದಾರೆ ಸುಧಾಮೂರ್ತಿ.