ಬೆಂಗಳೂರು, (www.thenewzmirror.com) :
ಅನಂತಕುಮಾರ್ ಮತ್ತು ಪುನೀತ್‍ರಾಜ್‍ಕುಮಾರ್ ಈ ಸಮಾಜದ ಎರಡು ಕಣ್ಣುಗಳಾಗಿದ್ದವು. ಅವುಗಳನ್ನು ಕಳೆದುಕೊಂಡಿದ್ದರೂ ಇದೀಗ ಮರ,ಗಿಡಗಳನ್ನು ನೆಟ್ಟು ಬೆಳೆಸುವ ಮೂಲಕ ಅವರ ಸೇವೆಯನ್ನು ಸಾರ್ಥಕಗೊಳಿಸಲು ಮುಂದಾಗಿದ್ದೇವೆ ಎಂದು ಅದಮ್ಯ ಚೇತನದ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತ್ ಕುಮಾರ್ ಮಾಹಿತಿ ನೀಡಿದರು.
ಅದಮ್ಯ ಚೇತನ ಸಂಸ್ಥೆ ವತಿಯಿಂದ 325ನೇ `ಹಸಿರು ಭಾನುವಾರ’ ಕಾರ್ಯಕ್ರಮವನ್ನು ಎಚ್‍ಎಸ್‍ಆರ್ ಲೇಔಟ್‍ನಲ್ಲಿರುವ ಸ್ವಾಭಿಮಾನ ಪಾರ್ಕ್‍ನಲ್ಲಿ ಕನ್ನಡದ ಕಣ್ಮಣಿಗಳಾದ ಕೇಂದ್ರ ಮಾಜಿ ಸಚಿವ ದಿ. ಅನಂತಕುಮಾರ್ ನೆನಪಿನಲ್ಲಿ ಮತ್ತು ನಟ ದಿ. ಡಾ. ಪುನೀತ್ ರಾಜ್‍ಕುಮಾರ್ ಅವರ ಜನ್ಮದಿನಾಚರಣೆ ಸ್ಮರಣಾರ್ಥವಾಗಿ ಗಿಡ ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಭಾನುವಾರ ಅವರು ಮಾತನಾಡಿದರು.
ರಾಘವೇಂದ್ರ ರಾಜ್‍ಕುಮಾರ್ ಒಬ್ಬ ಕಾರ್ಯಕರ್ತನಾಗಿ ಬಂದು ಗಿಡ ನೆಟ್ಟಿದ್ದಾರೆ. ಅನಂತಕುಮಾರ್ ಅವರಿಗೆ ರಾಜ್ ಕುಟುಂಬದ ಬಗ್ಗೆ ಒಳ್ಳೆಯ ಗೌರವ, ಅಭಿಮಾನ ಇತ್ತು. ರಾಜ್‍ಕುಮಾರ್ ಸೇರಿದಂತೆ ಅವರು ಕುಟುಂಬ ವರ್ಗ ಸಿನಿಮಾಗೆ ಮಾತ್ರ ಸೇವೆಯನ್ನು ಸೀಮಿತಗೊಳಿಸಲಿಲ್ಲ. ಚಿತ್ರರಂಗದಲ್ಲಿರುವವರು ಸಮಾಜ ಸೇವೆಯನ್ನು ಹೇಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಅದಮ್ಯ ಚೇತನದ ವತಿಯಿಂದ ಬಿಸಿಯೂಟ ಕಾರ್ಯಕ್ರಮ ನಡೆಸುತ್ತಿದ್ದು, ಅಡುಗೆ ಮನೆಯಲ್ಲಿ ಅಕ್ಕಿ ತೊಳೆದದ್ದು, ತರಕಾರಿ ತೊಳೆದ ನೀರನ್ನು ವ್ಯರ್ಥ ಮಾಡುವುದು ಬೇಡ ಎನಿಸಿ, ಅದನ್ನು ಡ್ರಮ್‍ಗೆ ತುಂಬಿಸಿಕೊಟ್ಟು ನಂತರ ಅದನ್ನು ಟ್ಯಾಂಕರ್‍ಗೆ ತುಂಬಿಸಿಕೊಂಡು ಗಿಡಗಳಿಗೆ ನೀರು ಹಾಕಲು ಹೋದೆವು. ಗಿಡಗಳೇ ಕಾಣಲಿಲ್ಲ. ಆಗಲೇ ಅದಮ್ಯ ಚೇತನದ ವತಿಯಿಂದ ಗಿಡಗಳನ್ನು ಬೆಳೆಸಬೇಕೆಂಬ ಆಲೋಚನೆ ಬಂದಿದ್ದು, ಅಂದಿನಿಂದ ಅದಮ್ಯ ಚೇತನಕ್ಕೂ, ಗಿಡಗಳಿಗೂ ನಂಟು ಬೆಳೆಯಿತು ಎಂದು ಅಭಿಯಾನ ನಡೆದುಬಂದ ಹಾದಿಯನ್ನು ತೇಜಸ್ವಿನಿ ಅನಂತಕುಮಾರ್ ನೆನಪಿಸಿಕೊಂಡರು.