ಬೆಂಗಳೂರು,(www.thenewzmirror.com);
ಈಗ ಎಲ್ಲೆಲ್ಲೂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನದ್ದೇ ಸದ್ದು. ಅರೇ ನವೆಂಬರ್ 11 2022 ರಂದು ಬೆಂಗಳೂರಿನಲ್ಲಿ ಉದ್ಘಾಟನೆ ಮಾಡಿದ್ದ ರೈಲಿನ ಬಗ್ಗೆ ಈಗ ಯಾಕೆ ಮಾತು ಅಂತ ಪ್ರಶ್ನೆ ಮಾಡಬೇಡಿ.., ಉದ್ಘಾಟನೆ ಆಗಿ ಹಲವು ದಿನಗಳ ನಂತರ ನಿಮ್ಮ ನ್ಯೂಝ್ ಮಿರರ್ ಗೆ ಈ ರೈಲಿನಲ್ಲಿ ಪ್ರಯಾಣ ಮಾಡುವ ಅವಕಾಶ ಲಭಿಸಿತ್ತು. ನ್ಯೂಝ ಮಿರರ್ ನ ವರದಿಗಾರ ಕಣ್ಣಲ್ಲಿ, ಅವ್ರ ಅನುಭವದಲ್ಲಿ ಒಂದೇ ಭಾರತ್ ರೈಲು ಅಂದರೆ ಏನು..? ಏನಿದರ ವಿಶೇಷತೆ ಅನ್ನೋದರ ಕುರಿತ ಒಂದು ವರದಿ ಇಲ್ಲಿದೆ.
ಮೊದಲನೆಯದಾಗಿ ಇದನ್ನ ರೈಲು ಅಂತ ಕರೆಯುವ ಬದಲು ಇದನ್ನ ವಿಮಾನ ಅಂತ ಕರೆದರೂ ತಪ್ಪಿಲ್ಲ.., ಯಾಕಂದರೆ ವಿಮಾನದಲ್ಲಿ ಪ್ರಯಾಣ ಮಾಡಿದಷ್ಟೇ ಅನುಭವ ಒಂದೇ ಭಾರತ್ ರೈಲಿನಲ್ಲಿ ಸಿಕ್ಕಿದೆ. ಇಲ್ಲಿನ ವಾತಾವರಣ.., ಇಲ್ಲಿನ ವ್ಯವಸ್ಥೆ ಇಂಥ ಮಾತನ್ನ ಇಲ್ಲಿ ಬರಿಯಬೇಕು ಎಂದು ಅನಿಸುತ್ತಿದೆ. ಹೀಗಾಗಿ ಸ್ವಂತ ಅನುಭವ ಅನ್ನುವುದಕ್ಕಿಂತ ಒಬ್ಬ ಪ್ರಯಾಣಿಕನಾಗಿ ಪಡೆದ ಅನುಭವವನ್ನ ಈ ವರದಿಯಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ದಕ್ಷಿಣ ಭಾರತದಲ್ಲಿ ಮೊದಲ ಒಂದೇ ಭಾರತ್ ರೈಲಿಗೆ ನವೆಂಬರ್ 11 ರಂದು ಪ್ರಧಾನಿ ಮೋದಿ ಚಾಲನೆ ಕೊಟ್ಟಿದ್ರು. ಅರೆ ಬೇರೆ ಎಲ್ಲಾ ರೈಲಿಗಿಂತ ನೋಡೋಕೆ ಕೊಂಚ ಭಿನ್ನವಾಗಿದೆ. ಅಷ್ಟಕ್ಕೇ ಒಂದೇ ಭಾರತ್ ಅಂತ ಕರೆಯಬೇಕಾ ಅನ್ನೋ ಪ್ರಶ್ನೆಯನ್ನ ಇಟ್ಟುಕೊಂಡು ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮೈಸೂರಿಗೆ ಪ್ರಯಾಣ ಮಾಡಿದೆ. ಆಗ ನನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ ಹೋಯ್ತು.
ದಕ್ಷಿಣ ಭಾರತದಲ್ಲಿ ಚೆನ್ನೈ ನಿಂದ ಮೈಸೂರು ಮಾರ್ಗವಾಗಿ ಪ್ರತಿ ದಿನ ಸಂಚಾರ ಮಾಡುವ ಒಂದೇ ಭಾರತ್ ರೈಲು ಶೇಕಡಾ 80 ರಷ್ಟು ಸ್ವದೇಶಿ ನಿರ್ಮಿತ ಸಂಪೂರ್ಣ ಹವಾನಿಯಂತ್ರಿತ ರೈಲು ಇದಾಗಿದೆ. 16 ಬೋಗಿಗಳಿರುವ ಈ ರೈಲು ನಿರ್ಮಾಣಕ್ಕೆ ತಗುಲಿದ ವೆಚ್ಚ ಹತ್ರತ್ರ 115 ರಿಂದ 120 ಕೋಟಿ.., ವಂದೇ ಭಾರತ್ ರೈಲಿಗೆ ವೀಲ್ ಮತ್ತು ಆಕ್ಸಲ್ ಗಳನ್ನ ಉಕ್ರೇನ್‌ನಿಂದ ಆಮದು ಮಾಡಿಕೊಳ್ಳಲಾಗಿದೆ.
ಸ್ವದೇಶಿ ನಿರ್ಮಿತ ರೈಲು ಇದಾಗಿದ್ದರಿಂದ ರೈಲಿನ ವೇಗ ಕೊಂಚ ಹೆಚ್ಚಿದೆ. ಬೆಂಗಳೂರು ಮೈಸೂರು ನಡುವೆ 110 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡಿದರೆ ಬೆಂಗಳೂರು ಟು ಚೆನ್ನೈ ನಡುವೆ 120 ಕಿಲೋ ಮೀಟರ್ ವೇಗದಲ್ಲಿ ಸಂಚಾರ ಮಾಡುತ್ತಿದೆ. ಹೀಗಾಗಿ ಬೆಳಗ್ಗೆ 5.50 ಕ್ಕೆ ಚೆನ್ನೈನಿಂದ ಹೊರಡುವ ರೈಲು ಮಧ್ಯಾಹ್ನ 12.30 ಕ್ಕೆ ಮೈಸೂರು ತಲುಪಲಿದೆ.., ಹಾಗೆನೇ 1.05 ಕ್ಕೆ ಮೈಸೂರು ಬಿಡುವ ರೈಲು ಸಂಜೆ 7.35 ಕ್ಕೆ ಚೆನ್ನೈ ತಲುಪಲಿದೆ., ಈ ನಡುವೆ ಕಾಟಪಾಡಿ ಜಂಕ್ಷನಲ್ಲಿ ಎರಡು ನಿಮಿಷ.., ಬೆಂಗಳೂರು KSR ರೈಲ್ವೆ ನಿಲ್ದಾಣದಲ್ಲಿ 5 ನಿಮಿಷ ಮಾತ್ರ ನಿಲುಗಡೆಯಾಗಲಿದೆ. ಅದನ್ನ ಹೊರತು ಪಡಿಸಿದೆ ಬೇರೆ ಎಲ್ಲೂ ಈ ರೈಲು ನಿಲುಗಡೆ ಆಗುವುದಿಲ್ಲ. ಹೀಗಾಗಿ ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಏನು ವಂದೇ ಭಾರತ್ ರೈಲಿನ ವಿಶೇಷತೆ..?
– ಉತ್ತಮ ಸೌಕರ್ಯದೊಂದಿಗೆ 2ನೇ ಪೀಳಿಗೆಯ ರೈಲು
– ಗರಿಷ್ಠ ವೇಗ ಗಂಟೆಗೆ 160 ಕಿ.ಮೀ.
– ಮೈಸೂರು – ಚೆನ್ನೈ ಪ್ರಯಾಣದ ಸಮಯ 8.30 ಗಂಟೆಯಿಂದ 6.30 ಗಂಟೆಗೆ ಇಳಿಕೆ
– ವಿಶೇಷಚೇತನರಿಗೆ ಪ್ರತ್ಯೇಕ ಶೌಚಾಲಯ
– ರೈಲುಗಳ ಡಿಕ್ಕಿ ತಪ್ಪಿಸಲು ಕವಚ ಅಳವಡಿಕೆ
– 180 ಡಿಗ್ರಿ ತಿರುಗುವ ಆಸನಗಳು ಮತ್ತು ಇನ್ಫೋಟೈನ್ಮೆಂಟ್ ಸಿಸ್ಟಮ್
– 16 ಬೋಗಿಗಳನ್ನು ಹೊಂದಿದ್ದು, 384 ಮೀ. ಉದ್ದ, ಪ್ರತ್ಯೇಕ ಎಂಜಿನ್ ಇಲ್ಲ
– ವಂದೇ ಭಾರತ್ ರೈಲಿನಲ್ಲಿ ಆನ್‌ಬೋರ್ಡ್ ಉಪಾಹಾರದ ವ್ಯವಸ್ಥೆ
– ವೈಫೈ, ಮಾಹಿತಿ ವ್ಯವಸ್ಥೆ, ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲೈಟ್ ವ್ಯವಸ್ಥೆ
– ಸ್ವಯಂ ಚಾಲಿತ ಬಾಗಿಲು, ಸಿಸಿಟಿವಿ, ಬಯೋ ಶೌಚಾಲಯ ವ್ಯವಸ್ಥೆ
– ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ 1,128 ಪ್ರಯಾಣಿಕರ ಸೀಟಿನ ಸಾಮರ್ಥ್ಯ
– ಉತ್ತಮ ವೇಗವರ್ಧನೆ ಹಾಗೂ ನಿಧಾನಗೊಳಿಸಲು ಇಂಟೆಲಿಜೆಂಟ್ ಬ್ರೇಕಿಂಕ್ ವ್ಯವಸ್ಥೆ
– ಐಶರಾಮಿ ವ್ಯವಸ್ಥೆ, ಸೀಟುಗಳನ್ನು ವಿಮಾನದ ರೀತಿ ನಿರ್ಮಾಣ
– ಹವಾನಿಯಂತ್ರಿತ, ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್‌ಗಳನ್ನು ಹೊಂದಿದೆ.
ಪ್ರಯಾಣ ದರ ಎಷ್ಟಿರುತ್ತೆ..?
– ಮೈಸೂರು, ಚೆನ್ನೈ ನಡುವಿನ ಪ್ರಯಾಣದರ ಎಕಾನಮಿ ಕ್ಲಾಸ್ 1200 ರೂ, ಎಕ್ಸಿಕ್ಯುಟಿವ್ ಕ್ಲಾಸ್ 2295 ರೂ.
– ಮೈಸೂರು, ಬೆಂಗಳೂರು ನಡುವಿನ ಪ್ರಯಾಣದರ ಎಕಾನಮಿ ಕ್ಲಾಸ್ 515 ರೂ, ಎಕ್ಸಿಕ್ಯುಟಿವ್ ಕ್ಲಾಸ್ 985 ರೂ.
ಎಲ್ಲೆಲ್ಲಿ ನಿಲುಗಡೆ ಆಗಲಿದೆ..?
– ಕಾಟಪಾಡಿ ಜಂಕ್ಷನ್
– ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ
ರೈಲಿನ ವೇಗ ಎಷ್ಟಿರಲಿದೆ..?
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಟೆಸ್ಟಿಂಗ್ ಹಂತದಲ್ಲಿ ಗಂಟೆಗೆ 180 ಕಿಮೀ ವೇಗದಲ್ಲಿ ಸಾಗಿತ್ತು. ಆದರೆ, ಪ್ರಾಯೋಗಿಕವಾಗಿ ಈ ರೈಲಿನ ಗರಿಷ್ಠ ವೇಗ 130 ಕಿಮೀ ಎನ್ನಲಾಗಿದೆ. ಯಾಕೆಂದರೆ 180 ಕಿಮೀ ವೇಗದಲ್ಲಿ ರೈಲು ಸಾಗಲು ಬೇಕಾದ ಸಮರ್ಪಕ ಹಳಿ ವ್ಯವಸ್ಥೆ ನಮ್ಮಲ್ಲಿ ಇನ್ನೂ ರೂಪುಗೊಂಡಿಲ್ಲ. ಸದ್ಯದ ಸ್ಥಿತಿಯಲ್ಲಿ ಗಂಟೆಗೆ 80ರಿಂದ 100 ಕಿಮೀ ವೇಗದಲ್ಲಿ ವಂದೇ ಭಾರತ್ ರೈಲು ಸಾಗುತ್ತಿದೆ. ಚೆನ್ನೈನಿಂದ ಮೈಸೂರಿನ ಮಧ್ಯೆ ಇರುವ ಸುಮಾರು 500 ಕಿ ಮೀ ದೂರವನ್ನು ಆರೂವರೆಗೆ ಗಂಟೆಯಲ್ಲಿ ಇದು ಕ್ರಮಿಸುತ್ತದೆ. ಅಂದರೆ, ಗಂಟೆಗೆ ಸುಮಾರು 80-100 ಕಿ ಮೀ ವೇಗದಲ್ಲಿ ಇದು ಸಾಗುತ್ತದೆ.
ಪ್ರಯಾಣಿಕರು ಏನು ಹೇಳುತ್ತಾರೆ..?
ಡಿಜಿಟಲೀಕರಣ ಹಾಗೂ ಸ್ವಚ್ಛ ಭಾರತ್ ಗೆ ಹೆಚ್ಚಿನ ಒತ್ತು ಕೊಟ್ಟಿರುವ ರೈಲಿನಲ್ಲಿ ಪ್ರಯಾಣ ಮಾಡಿದ ಪ್ರಯಾಣಿಕರು ನೂರಕ್ಕೆ 99 ರಷ್ಟು ಅಂಕವನ್ನ ಕೊಡುತ್ತಾರೆ., ಇನ್ಫೋಟೈನ್ ಮೆಂಟ್, ಸ್ವಚ್ಛತೆಗೆ ಹೆಚ್ಚಿನ ಒತ್ತು ಹಾಗೂ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿರುವ ಈ ರೈಲಿನಲ್ಲಿ ಪ್ರಯಾಣ ನಿರೀಕ್ಷೆಗೂ ಮೀರಿದ ಅನುಭವ ಕೊಟ್ಟಿದೆ ಅಂರ ಮೆಚ್ಚುಗೆಯ ಮಾತುಗಳನ್ನ ಆಡುತ್ತಿದ್ದಾರೆ.