ಜಮ್ಮುಕಾಶ್ಮೀರ:
ದೂರ ಸಂಪರ್ಕ ಸೇವಾ ಸಂಸ್ಥೆ ರಿಲಯನ್ಸ್ ಜಿಯೊದ ಜಿಯೊ ಟೀವಿ, ಶ್ರೀ ಅಮರನಾಥ ದೇಗುಲದ ಆರತಿಯನ್ನು ನೇರಪ್ರಸಾರವನ್ನು ಮಾಡುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಕ್ತರು ಈ ಪವಿತ್ರ ದೇವಾಲಯಕ್ಕೆ ನೇರವಾಗಿ ಭೇಟಿ ನೀಡಿ ದರ್ಶನ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಭಕ್ತರಿಗೆ ನೆರವಾಗಲು ಜಿಯೊ ಟೀವಿ ಈ ನೇರಪ್ರಸಾರ ಮಾಡುತ್ತಿದೆ.
ಕಡಿದಾದ ಭೂಪ್ರದೇಶ ಮತ್ತು ಸವಾಲಿನ ಪರಿಸ್ಥಿತಿಯಲ್ಲಿಯೂ ಕಂಪನಿಯು, ನೇರಪ್ರಸಾರಕ್ಕೆ ಅಗತ್ಯವಿರುವ ನೆಟ್‌ವರ್ಕ್ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ಅತ್ಯಲ್ಪ ಅವಧಿಯಲ್ಲಿಯೇ ಸ್ಥಾಪಿಸಿದೆ.
ಭಕ್ತರಿಗೆ ನೇರವಾಗಿ ಬಂದು ದರ್ಶನ ಪಡೆದಷ್ಟೇ ಒಳ್ಳೆಯ ಅನುಭವ ಕೊಡುವ ನಿಟ್ಟಿನಲ್ಲಿ, ಶ್ರೀ ಅಮರನಾಥ ದೇವಾಲಯ ಸಮಿತಿಯ ಆರಂಭಿಸಿದ ವಿವಿಧ ಆನ್‌ಲೈನ್ ಸೇವೆಗಳನ್ನು ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉದ್ಘಾಟಿಸಿದ್ದಾರೆ.
‘ಕೋವಿಡ್ 19 ಸಾಂಕ್ರಾಮಿಕ ರೋಗದ ಕಾರಣದಿಂದ ಈ ವರ್ಷ ಲಕ್ಷಾಂತರ ಜನರಿಗೆ ಪವಿತ್ರ ಶ್ರೀ ಅಮರನಾಥ ಗುಹಾಲಿಂಗ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದೇವಸ್ಥಾನ ಸಮಿತಿಯು, ವರ್ಚುವಲ್ ವಿಧಾನದಲ್ಲಿ ದರ್ಶನ, ಹವನ ಮತ್ತು ಪ್ರಸಾದದ ಸೌಲಭ್ಯವನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಿದೆ. ದರ್ಶನ, ಹವನ, ಪ್ರಸಾದ ಮತ್ತು ಅರ್ಚಕರನ್ನೂ ಭಕ್ತರು ಆನ್‌ಲೈನ್‌ನಲ್ಲಿಯೇ ತಮ್ಮ ಹೆಸರಿನಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ. ನಂತರ ಪ್ರಸಾದವನ್ನು ಅವರ ಮನೆಬಾಗಿಲಿಗೆ ತಲುಪಿಸಲಾಗುವುದು’ ಎಂದು ದೇವಸ್ಥಾನ ಸಮಿತಿಯ ವಕ್ತಾರರು ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ 2021ರ ಅಮರನಾಥ ಯಾತ್ರೆಯನ್ನು ಅಮರನಾಥ ದೇಗುಲ ಸಮಿತಿಯು ರದ್ದುಗೊಳಿಸಿತ್ತು. ಹಾಗಾಗಿ ಭಕ್ತರು ಈ ವರ್ಷ ಈ ಪವಿತ್ರ ಯಾತ್ರಾಸ್ಥಳದ ದರ್ಶನ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಭಕ್ತರು ಈ ಯಾತ್ರಾಸ್ಥಳದ ಜೊತೆಗಿನ ಸಂಬಂಧವನ್ನು ಮುಂದುವರಿಸುವ ನಿಟ್ಟಿನಲ್ಲಿ ಜಿಯೊ ಡಿಜಿಟಲ್ ಲೈಫ್ ಬೆಂಬಲದೊಂದಿಗೆ ಜಿಯೊ ಸಂಸ್ಥೆಯು ಆರತಿಯ ನೇರಪ್ರಸಾರ ಆರಂಭಿಸಿದೆ. ಜಿಯೊ ಟೀವಿಯಲ್ಲಿ ಈ ನೇರಪ್ರಸಾರವಾಗುತ್ತಿದ್ದು, ಜಿಯೊಮೀಟ್‌ನ ಮೂಲಕ ಭಕ್ತರು ತಮ್ಮ ಅರ್ಚಕರ ಜೊತೆಯಲ್ಲಿ ದೇಗುಲದ ವರ್ಚುವಲ್ ಪೂಜಾಕೊಠಡಿಯಲ್ಲಿ ಸೇರಿ, ಅವರ ಹೆಸರು ಮತ್ತು ಗೋತ್ರಗಳನ್ನು ಹೇಳಿ ಹವನ, ಪೂಜೆ ನಡೆಸಲು ಸಾಧ್ಯವಿದೆ.
ಆನ್‌ಲೈನ್‌ನಲ್ಲಿ ಅಮರನಾಥಲಿಂಗದ ದರ್ಶನ ಪಡೆಯಲು, ತಮ್ಮ ಹೆಸರಿನಲ್ಲಿ ಫೂಜೆ ಮಾಡಿಸಲು ಭಕ್ತರು, ದೇವಸ್ಥಾನದ ಸಮಿತಿಯ ಮೊಬೈಲ್ ಆಪ್‌ನಲ್ಲಿ www.shriamarnathjishrine.com ವೆಬ್‌ಸೈಟ್‌ನಲ್ಲಿ ‘Book Online Pooja / Hawan / Prasad’ ವಿಭಾಗಕ್ಕೆ ಭೇಟಿ ನೀಡಬೇಕು. ಬುಕ್ಕಿಂಗ್ ಪ್ರಕ್ರಿಯೆಗಳು ಮುಗಿದ ನಂತರ ಭಕ್ತರಿಗೆ ಜಿಯೊಮೀಟ್‌ನ ವರ್ಚುವಲ್ ರೂಮ್‌ನ ಲಿಂಕ್ ಅನ್ನು ಕಳಿಸಿಕೊಡಲಾಗುತ್ತದೆ. ನಿಗದಿಪಡಿಸಿದ ಸಮಯಕ್ಕೆ ಭಕ್ತರು ಆ ರೂಮ್‌ಗೆ ಜಾಯಿನ್ ಆಗಿ ಅರ್ಚಕರು ನಡೆಸುವ ಪೂಜೆ, ಹವನಗಳಲ್ಲಿ ಭಾಗಿಯಾಗಬಹುದು.