ಬೆಂಗಳೂರು,(www.thenewzmirror.com):
ಸಂಪೂರ್ಣವಾಗಿ ತೆರಿಗೆ ಕಟ್ಟದಿದ್ರೂ ಮಂತ್ರಿ ಮಾಲ್ ಇಂದಿನಿಂದ ಆರಂಭಗೊಂಡಿದೆ. ಸುಮಾರು 27 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಕಾರಣಕ್ಕೆ ಕಳೆದ ನಾಲ್ಕು ದಿನಗಳ ಹಿಂದೆ ಬಿಬಿಎಂಪಿ ಮಲ್ಲೇಶ್ವರಂ ನಲ್ಲಿರೋ ಮಂತ್ರಿ ಮಾಲ್ ಗೆ ಬೀಗ ಜಡಿದಿತ್ತು. ಬಿಬಿಎಂಪಿ ಕ್ರಮ ಪ್ರಶ್ನಿಸಿ ಮಂತ್ರಿ ಮಾಲ್ ಕೋರ್ಟ್ ಮೊರೆ ಹೋಗಿತ್ತು. ವಾದ ಆಲಿಸಿದ ಕೋರ್ಟ್, ಕೂಡಲೇ ಮಂತ್ರಿ ಮಾಲ್ ಆರಂಭಕ್ಕೆ ಸೂಚನೆ ಕೊಟ್ಟಿತ್ತು.
ಮಂತ್ರಿ ಮಾಲ್ ಆಡಳಿತ ಮಂಡಳಿಯ ಮೆಸರ್ಸ್ ಅಭಿಷೇಕ್ ಪ್ರೊಪ್‌ಬಿಲ್ಡ್ ಪ್ರೈವೆಟ್ ಲಿಮಿಟೆಡ್ ಕಂಪನಿ ಹಾಗೂ ಮೆಸರ್ಸ್ ಹಮಾರಾ ಶೆಲ್ಟರ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಎಂ. ನಾಗ ಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಷ್ಟೇ ಅಲ್ದೇ ಶುಕ್ರವಾರ ಮಧ್ಯರಾತ್ರಿಯೊಳಗೆ ಆರ್‌ಟಿಜಿಎಸ್ ಮೂಲಕ 2 ಕೋಟಿ ರೂ.ಗಳನ್ನು ಬಿಬಿಎಂಪಿ ಖಾತೆಗೆ ಪಾವತಿಸಬೇಕು. ಶನಿವಾರ ಮತ್ತು ಭಾನುವಾರ ರಜೆ ಇರುವ ಕಾರಣ ಭದ್ರತೆಗಾಗಿ 4 ಕೋಟಿ ರೂ.ಗಳ ಚೆಕ್ ಕೊಟ್ಟು ಸೋಮವಾರ ಮಧ್ಯಾಹ್ನ 12 ಗಂಟೆಯೊಳಗೆ 2 ಕೋಟಿ ರೂ. ಪಾವತಿಸಿ, 4 ಕೋಟಿ ರೂ.ಗಳ ಚೆಕ್ ವಾಪಸು ಪಡೆಯಬೇಕು ಎಂದು ನ್ಯಾಯಪೀಠ ಆದೇಶ ನೀಡಿತು.
ಅರ್ಜಿದಾರರು ಎಷ್ಟು ವರ್ಷಗಳಿಂದ, ಎಷ್ಟು ಬಾಕಿ ಹಣ ಉಳಿಸಿಕೊಂಡಿದ್ದಾರೆ ಮತ್ತು ಈ ಬಾಕಿ ಹಣ ಪಾವತಿಗಾಗಿ ಬಿಬಿಎಂಪಿ ಮಂತ್ರಿ ಮಾಲ್ ಆಡಳಿತ ಮಂಡಳಿಗೆ ತಿಳಿಸಿರುವ ಬಗೆಗಿನ ಸಮರ್ಪಕ ದಾಖಲೆಗಳನ್ನು ನ್ಯಾಯಪೀಠಕ್ಕೆ ಒದಗಿಸಬೇಕು. ಒಂದು ವೇಳೆ ದಾಖಲೆಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಮಧ್ಯಂತರ ಆದೇಶ ರದ್ದುಗೊಳಿಸಲಾಗುವುದು ಎಂದು ನ್ಯಾಯಪೀಠ, ಮಾಲ್ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದೆ.