ಬೆಂಗಳೂರು, (www.thenewzmirror.com):
ದೇಶದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ಪಂಚ ರಾಜ್ಯ ಚುನಾವಣೆಯ ದಿನಾಂಕ ನಿಗಧಿಯಾಗಿದ್ದು, ಕೇಂದ್ರ ಚುನಾವಣಾ ಆಯೋಗ ಮತದಾನಕ್ಕೆ ಮುಹೂರ್ತ ಫಿಕ್ಸ್ ಮಾಡಿ ಅಧಿಸೂಚನೆ ಹೊರಡಿಸಿದೆ.
ನವದೆಹಲಿಯಲ್ಲಿ ಮಾಹಿತಿ ನೀಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಒಟ್ಟು ಏಳು ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ ಅಂತ ಮಾಹಿತಿ ನೀಡಿದ್ರು. ಕೋವಿಡ್ ನಿಯಮಾನುಸಾರ ಮತದಾನ ಪ್ರಕ್ರಿಯೆ ಮುಗಿಸುವಂತೆ ಆಯಾ ರಾಜ್ಯ ಚುನಾವಣಾಧಿಕಾರಿಗಳಿಗೆ ಇದೇ ವೇಳೆ ಸೂಚನೆ ನೀಡಿದ್ದಾರೆ.
ಗೋವಾ, ಪಂಜಾಬ್, ಮಣಿಪುರ್, ಉತ್ತರಾಖಂಡ್ ಹಾಗೂ ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಿಗೆ ಚುನಾವಣಾ ದಿನಾಂಕವನ್ನು ಘೋಷಿಸಲಾಗಿದೆ. ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 14ರಂದು ಸೋಮವಾರ ನಡೆಯಲಿದೆ. ಒಟ್ಟು ಏಳು ಹಂತಗಳಲ್ಲಿ ಪಂಚರಾಜ್ಯ ಚುನಾವಣೆ ನಡೆಯಲಿದೆ.
ಮತಗಟ್ಟೆಗಳನ್ನು ಗ್ರೌಂಡ್ ಫ್ಲೋರ್‌ನಲ್ಲಿ ಸ್ಥಾಪಿಸಲಾಗುತ್ತದೆ. ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ. 5 ರಾಜ್ಯಗಳಲ್ಲಿ 2,15,368 ಮತಗಟ್ಟೆ ಸ್ಥಾಪಿಸಲಾಗುವುದು. ಪ್ರತಿ ಮತಗಟ್ಟೆಯಲ್ಲಿ 1,250 ಜನ ಮತ ಚಲಾಯಿಸಬಹುದು. 80 ವರ್ಷ ಮೇಲ್ಪಟ್ಟವರು, ವಿಕಲ ಚೇತನರು, ಕೊರೊನಾ ಸೋಂಕಿತರಿಗೆ ಪೋಸ್ಟಲ್ ಬ್ಯಾಲೆಟ್ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮಾಹಿತಿ ನೀಡಿದ್ರು.
ಐದು ರಾಜ್ಯಗಳ ಚುನಾವಣಾ ಫಲಿತಾಂಶ ಮಾರ್ಚ್ 10ರಂದು ಪ್ರಕಟವಾಗಲಿದೆ. ಉತ್ತರ ಪ್ರದೇಶದಲ್ಲಿ 403 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದರೆ, ಪಂಜಾಬ್‌ನಲ್ಲಿ 117, ಉತ್ತರಾಖಂಡ್‌ನಲ್ಲಿ 70, ಮಣಿಪುರದಲ್ಲಿ 60 ಮತ್ತು ಪುಟಾಣಿ ರಾಜ್ಯ ಗೋವಾದಲ್ಲಿ 40 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಕೋವಿಡ್ ಹೆಚ್ಚಳವಾದ ಹಿನ್ನಲೆಯಲ್ಲಿ ಜನವರಿ 15ರವರೆಗೆ ಯಾವುದೇ ರೋಡ್ ಶೋ, ಸೈಕಲ್ ಜಾಥಾ ಸೇರಿದಂತೆ ಯಾವುದೇ ಮೆರವಣಿಗೆ ಮಾಡುವಂತಿಲ್ಲ, ಇದ್ರ ಜತೆಗೆ ರಾತ್ರಿ 8ರಿಂದ ಬೆಳಗ್ಗೆ 8 ಗಂಟೆಯವರೆಗೆ ಯಾವುದೇ ಮೆರವಣಿಗೆ, ಸಭೆಗಳನ್ನು ನಡೆಸುವಂತಿಲ್ಲ ಅಂತ ತಾಕೀತು ಮಾಡಿದೆ.
ಐದು ರಾಜ್ಯಗಳ ಚುನಾವಣೆಯಲ್ಲಿ ಒಟ್ಟು 18.34 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸುವ ಅಧಿಕಾರ ಹೊಂದಿದ್ದಾರೆ. ಇವರಲ್ಲಿ 8.55 ಕೋಟಿ ಮಹಿಳಾ ಮತದಾರರು ಇದ್ದಾರೆ. 24.9 ಲಕ್ಷ ಹೊಸ ಮತದಾರರೂ ನೋಂದಣಿ ಮಾಡಿಕೊಂಡಿದ್ದಾರೆ.
ಮೊದಲ ಹಂತ – ಉತ್ತರ ಪ್ರದೇಶ
ಮತದಾನ – ಫೆಬ್ರವರಿ 10
2ನೇ ಹಂತ – ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ
ಮತದಾನ – ಫೆಬ್ರವರಿ 14
3ನೇ ಹಂತ – ಉತ್ತರ ಪ್ರದೇಶ
ಮತದಾನ – ಫೆಬ್ರವರಿ 20
4ನೇ ಹಂತ – ಉತ್ತರ ಪ್ರದೇಶ
ಮತದಾನ – ಫೆಬ್ರವರಿ 23
5ನೇ ಹಂತ – ಉತ್ತರ ಪ್ರದೇಶ, ಮಣಿಪುರ ಮೊದಲ ಹಂತ
ಮತದಾನ – ಫೆಬ್ರವರಿ 27
6ನೇ ಹಂತ – ಉತ್ತರ ಪ್ರದೇಶ, ಮಣಿಪುರ 2ನೇ ಹಂತ
ಮತದಾನ – ಮಾರ್ಚ್ 3
7ನೇ ಹಂತ – ಉತ್ತರ ಪ್ರದೇಶ
ಮತದಾನ – ಮಾರ್ಚ್ 7
ಫಲಿತಾಂಶ – ಮಾರ್ಚ್ 10