ಬೆಂಗಳೂರು, (www.thenewzmirror.com):
ಕರೋನಾ ಅಲೆ ಇನ್ನೂ ನಿಂತಿಲ್ಲ ಈ ವೇಳೆಗೆ ಪ್ರಾಥಮಿಕ ಶಾಲೆಗಳನ್ನ ಆರಂಭಮಾಡೋದು ಸರಿಯಲ್ಲ ಅನ್ನೋ ಕೂಗುಗಳು ಕೇಳಿ ಬರ್ತಿವೆ.., ಸುಮಾರು 17 ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಕನ್ನಡ ಪರ ಸಂಘಟನೆಗಳಿಂದ ಬಹಿರಂಗ ಪತ್ರ
ಇವರಿಗೆ,
1). ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು.
2). ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಸಚಿವರು,
ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು
3). ಮಾನ್ಯ ಆರೋಗ್ಯ ಸಚಿವರು,
ಕರ್ನಾಟಕ ಸರ್ಕಾರ,
ವಿಧಾನಸೌಧ, ಬೆಂಗಳೂರು
ರಾಷ್ಟ್ರೀಯ ಮಹಿಳಾ ನ್ಯಾಯಪರ ವೇದಿಕೆ
ವಿಷಯ: ಕೋವಿಡ್ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲಾರಂಭ ಮಾಡುವುದಕ್ಕೆ ಆಕ್ಷೇಪ
ಮಾನ್ಯರೇ,
ಕೋವಿಡ್ 19 ಸೋಂಕಿಗೆ ಅವೆಷ್ಟೋ ಮಂದಿ ಬಲಿಯಾಗಿದ್ದು, ಆ ಆತಂಕದ ಪರಿಸ್ಥಿತಿ ಇನ್ನೂ ದೂರವಾಗದ ಕಾರಣ ಮಾರ್ಗಸೂಚಿ ನಿಯಮಗಳನ್ನೂ ಸರ್ಕಾರ ಸಂಪೂರ್ಣವಾಗಿ ಸಡಿಲಿಸಿಲ್ಲ. ಆದರೂ ಲಸಿಕೆ ಪಡೆಯದ 10 ವರ್ಷದೊಳಗಿನ ಮಕ್ಕಳಿಗೆ ಶಾಲೆ ಆರಂಭಿಸುವುದು ಸೂಕ್ತವಲ್ಲ ಎಂದು ಸರ್ಕಾರದ ಗಮನಸೆಳೆಯಲು ಬಯಸುತ್ತೇವೆ.
ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ನವೆಂಬರ್‌ನಲ್ಲಿ 3ನೇ ಅಲೆ ಇರಬಹುದೆಂದೂ, ಅದು ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಇನ್ನೂ ಅನೇಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವುದು ಸರ್ಕಾರಕ್ಕೆ ತಿಳಿದಿದೆ. ಹೀಗಿದ್ದರೂ ಕೂಡಾ ಕರ್ನಾಟಕ ಸರ್ಕಾರ ಶಾಲಾರಂಭದ ಬಗ್ಗೆ ಪೋಷಕರ ಹಾಗೂ ಸರ್ಕಾರೇತರ ಸಂಸ್ಥೆಗಳ ಅಭಿಪ್ರಾಯ ಪಡೆಯದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ.
ಕರ್ನಾಟಕದಲ್ಲಿ 6ನೇ ತರಗತಿ ಆರಂಭವಾಗಿದ್ದು ಸರ್ಕಾರದ ನಿರ್ಧಾರದಿಂದ ಮಕ್ಕಳಿಗೆ ಪ್ರಾಣ ಭೀತಿ ಕಾಡಿದೆ. ಇದೇ ಸಂದರ್ಭದಲ್ಲಿ 1ರಿಂದ 5ನೇ ತರಗತಿವೆರೆಗಿನ ಶಾಲೆಗಳ ಆರಂಭಕ್ಕೆ ಮುಂದಾಗಿರುವುದಕ್ಕೆ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.
ಕಳೆದ ವರ್ಷ ಶಾಲಾರಂಭ ಮಾಡುವ ವಿಚಾರದಲ್ಲಿ ಪೋಷಕರ ಅಭಿಪ್ರಾಯ ಕೇಳಿರುವ ಸರ್ಕಾರ ಈ ವರ್ಷ ಆ ಕ್ರಮಕ್ಕೆ ಮುಂದಾಗಿಲ್ಲವೇಕೆ? ಕಳೆದ ವರ್ಷ ಶಾಲಾರಂಭಕ್ಕೆ ಪೋಷಕರ ಆಕ್ಷೇಪ ಇತ್ತು. ಈ ವರ್ಷವೂ ಅದೇ ರೀತಿ ಅಭಿಪ್ರಾಯ ಕೇಳಿಬಂದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಭಿಗೆ ಮಣಿಯಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಶಿಕ್ಷಣ ಸಚಿವರೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆಯೇ ಎಂಬ ಅನುಮಾನ ಇದೆ.
ವಿದೇಶಗಳಿಗೆ ತೆರಳಲು ವ್ಯಾಕ್ಸಿನೇಷನ್ ಅಗತ್ಯವಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಕೊರೋನಾ ಲಸಿಕೆ ಪಡೆದಿರಲೇಬೇಕು ಎಂದು ಹೇಳುತ್ತಿರುವ ಸರ್ಕಾರ ಶಾಲೆಗಳ ವಿಚಾರದಲ್ಲಿ ವ್ಯತಿರಿಕ್ತ ನಿಲುವು ತಾಳಿರುವುದು ಸರಿಯಲ್ಲ. ಹಾಗಾಗಿ ಮಕ್ಕಳಿಗೆ ವ್ಯಾಕ್ಸಿನೇಷನ್ ವ್ಯವಸ್ಥೆ ಆಗುವವರೆಗೂ 10 ವರ್ಷದೊಳಗಿನ ಮಕ್ಕಳಿಗೆ ಬೌತಿಕ ತರಗತಿ ಆರಂಭಿಸಬಾರದು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ.
ಇಂತಿ
ರಾಷ್ಟ್ರೀಯ ಮಹಿಳಾ ನ್ಯಾಯಪರ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರು
ಡಾ. ನ್ಯಾಯಪರ ಸವಿತಾ ಹಾಗೂ ವಿವಿಧ ಸಂಘ-ಸಂಸ್ಥೆಗಳು