ಬೆಂಗಳೂರು:
ವಿದ್ಯಾರ್ಥಿಗಳಿಗೆ ಪ್ರೌಢಶಾಲಾ ಹಂತದಿಂದಲೇ ತಾಂತ್ರಿಕ ಶಿಕ್ಷಣಕ್ಕೆ ಒತ್ತು ಕೊಡಬೇಕು. ಇದಕ್ಕಾಗಿ ತಾಂತ್ರಿಕ ಶಿಕ್ಷಣ ಆಧಾರಿತ ಶಾಲೆಗಳನ್ನು (ಟೆಕ್ನಾಲಜಿ ಸ್ಕೂಲ್ಸ್) ಆರಂಭಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಐ.ಟಿ./ಬಿಟಿ ಇಲಾಖೆ ವತಿಯಿಂದ ‘ಬಿಯಾಂಡ್ ಬೆಂಗಳೂರು’ (‘ಬೆಂಗಳೂರು ವ್ಯಾಪ್ತಿಯಾಚೆ’) ಉಪಕ್ರಮದಡಿ ಮಂಗಳವಾರ ಏರ್ಪಡಿಸಿದ್ದ ‘ನಾವೀನ್ಯತೆ ಮತ್ತು ಪರಿಣಾಮ’ (‘ಇನ್ನೊವೇಷನ್ ಅಂಡ್ ಇಂಪ್ಯಾಕ್ಟ್) ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿದ ಅವರು, ಹುಬ್ಬಳ್ಳಿ ವಲಯದಲ್ಲಿ ಹೊಸ ತಾಂತ್ರಿಕತೆಯ ಉದ್ಯಮದ ಬೆಳವಣಿಗೆಗೆ ತಕ್ಷಣದಿಂದಲೇ ಆದ್ಯತೆಯ ಮೇಲೆ ಕ್ರಮ ವಹಿಸಲಾಗುವುದು ಎಂದರು.
1960ರಷ್ಟು ಹಿಂದೆಯೇ ಹುಬ್ಬಳ್ಳಿಯಲ್ಲಿ ಪ್ರತ್ಯೇಕ ಟೆಕ್ನಾಲಜಿ ಹೈಸ್ಕೂಲ್ ಇತ್ತು. ಆದರೆ ತದನಂತರದಲ್ಲಿ ಅದನ್ನು ಮುಚ್ಚಲಾಯಿತು, ಮಕ್ಕಳಲ್ಲಿ ಗ್ರಹಿಕೆ ಶಕ್ತಿ ಹೆಚ್ಚಾಗಿರುವುದರಿಂದ ಹೈಸ್ಕೂಲ್ ಮಟ್ಟದಲ್ಲೇ ತಾಂತ್ರಿಕ ಶಿಕ್ಷಣಕ್ಕೆ ಒತ್ತು ಕೊಡುವುದು ಮುಖ್ಯ. ಹೀಗಾಗಿ ಕೆಲವು ಪ್ರೌಢಶಾಲಾ ಹಂತದಲ್ಲಿ ಪ್ರತ್ಯೇಕ ಟೆಕ್ನಾಲಜಿ ಸ್ಕೂಲ್ ಗಳನ್ನು ಆರಂಭಿಸುವುದು ಸೂಕ್ತ ಎಂದು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಟಿಂಕರಿಂಗ್ ಲ್ಯಾಬ್ ಗಳನ್ನು ಮೇಲ್ದರ್ಜೆಗೇರಿಸಿ ಆ ಹಂತದಲ್ಲಿ ಸ್ವಲ್ಪ ಮಟ್ಟಿಗಾದರೂ ಕೃತಕ ಬುದ್ಧಿಮತ್ತೆಯನ್ನು (ಎಐ) ಅಳವಡಿಸುವ ಅಗತ್ಯವಿದೆ. 150 ಐಟಿಐ ಕಾಲೇಜುಗಳನ್ನು ಉನ್ನತ ದರ್ಜೆಗೇರಿಸಿರುವಂತೆಯೇ ಪಾಲಿಟೆಕ್ನಿಕ್ ಕಾಲೇಜುಗಳನ್ನೂ ಉನ್ನತ ದರ್ಜೆಗೇರಿಸಬೇಕು ಎಂದು ಸಲಹೆ ನೀಡಿದರು.
ಹುಬ್ಬಳ್ಳಿ ಸಮಾರಂಭದಲ್ಲಿ ಹಾಜರಿದ್ದ ಐಟಿ/ಬಿಟಿ ಸಚಿವರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ಎ.ಐ. (ಕೃತಕ ಬುದ್ಧಿಮತ್ತೆ) ಮತ್ತು ಡ್ಯಾಟಾ ಎಂಜಿನಿಯರಿಂಗ್ ಗೆ ಸಂಬಂಧಿಸಿದ ಉತ್ಕೃಷ್ಠತಾ ಕೇಂದ್ರವನ್ನು (ಸೆಂಟರ್ ಆಫ್ ಎಕ್ಸ್ ಲೆನ್ಸ್) ಹುಬ್ಬಳ್ಳಿಯಲ್ಲಿ ಶೀಘ್ರವೇ ಸ್ಥಾಪಿಸಲಾಗುವುದು ಎಂದರು.
ಹೊಸ ತಾಂತ್ರಿಕ ಬೆಳವಣಿಗೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು ಎಂಬುದು ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್.ಇ.ಪಿ-2020) ಆಶಯವಾಗಿದೆ. ಆ ಪ್ರಕಾರವಾಗಿ, ಶಾಲಾ ಮಟ್ಟದಲ್ಲಿ ಮುಂದಿನ ವರ್ಷದಿಂದಲೇ ಮಕ್ಕಳಿಗೆ ಕೋಡಿಂಗ್ ಕಲಿಕೆಯನ್ನು ಪಠ್ಯಕ್ರಮದ ಭಾಗವನ್ನಾಗಿ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಅಧ್ಯಕ್ಷ .ಬಿ.ವಿ.ನಾಯ್ಡ ಅವರು, ಈಗ ಆನ್ ಲೈನ್ ಶಿಕ್ಷಣವನ್ನು ಎಲ್ಲರಿಗೂ ಸಿಗುವಂತೆ ಮಾಡಲು ವಿದ್ಯಾರ್ಥಿಗಳಿಗೆ ಟ್ಯಾಬ್ ಅನ್ನು ಕೊಡುವ ಯೋಜನೆಯನ್ನು ಸರ್ಕಾರಗಳು ಹೊಂದಿವೆ. ಇದೇ ಸಂದರ್ಭದಲ್ಲಿ ಟ್ಯಾಬ್ ಗಳನ್ನು ಚೀನಾದಿಂದಲೋ ಮತ್ತೆಲ್ಲಿಂದಲೋ ಆಮದು ಮಾಡಿಕೊಳ್ಳುವ ಬದಲು ನಮ್ಮಲ್ಲೇ ಇವುಗಳನ್ನು ತಯಾರಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಆಲೋಚಿಸಬೇಕು ಎಂದರು.