ಬೆಂಗಳೂರು: (thenewzmirror.com):
ಗ್ರಾಮೀಣ ಭಾಗದ ವಿದ್ಯುತ್ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಬೆಸ್ಕಾಂ ವ್ಯಾಪ್ತಿಯ 104 ಗ್ರಾಮಗಳಲ್ಲಿ ಜೂನ್ 18 ರಂದು ಏರ್ಪಡಿಸಿದ್ದ ಮೊದಲ ವಿದ್ಯುತ್ ಅದಾಲತ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ವೇಳೆ ಗ್ರಾಹಕರು ಎದುರಿಸುತ್ತಿರುವ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಹಿರಿಯ ಅಧಿಕಾರಿಗಳ ಗಮನಸೆಳೆದರು.
ಹೆಚ್ಚುವರಿ ಕಾರ್ಯನಿರ್ವಾಹಕ ಅಭಿಯಂತರಿಂದ ಹಿಡಿದು ಬೆಸ್ಕಾಂ ನಿಗಮ ಕಚೇರಿಗಳ ಹಿರಿಯ ಅಧಿಕಾರಿಗಳು ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆದ ಮೊದಲ ವಿದ್ಯುತ್ ಅದಾಲತ್ ನಲ್ಲಿ ಭಾಗವಹಿಸಿ ಜನರ ಅಹಾವಾಲುಗಳನ್ನು ಸ್ವೀಕರಿಸಿದರು.
ಹೊಸ ಪರಿವರ್ತಕಗಳು, ಹೆಚ್ಚುವರಿ ವಿದ್ಯುತ್ ಕಂಬಗಳು, ಹೊಸ ವಿದ್ಯುತ್ ಸಂಪರ್ಕ, ಗುಣಮಟ್ಟದ ವಿದ್ಯುತ್ ಪೂರೈಕೆ, ಹಳೆ ಲೈನ್ ಬದಲಾವಣೆ ಸೇರಿದಂತೆ ಹತ್ತು ಹಲವು ಬೇಡಿಕೆಗಳನ್ನು ಗ್ರಾಹಕರು ಬೆಸ್ಕಾಂ ಅಧಿಕಾರಿಗಳ ಮುಂದಿಟ್ಟರು.
ಗ್ರಾಮೀಣ ಭಾಗದ ಅದರಲ್ಲೂ ಬೆಸ್ಕಾಂನ ಗಡಿ ಭಾಗದ ತಾಲೂಕುಗಳ ಹಳ್ಳಿಗಳಲ್ಲಿ ವಿದ್ಯುತ್ ಅದಾಲತ್ ಗಳನ್ನು ಆಯೋಜಿಸಿ, ಗ್ರಾಹಕರ ಆಹವಾಲುಗಳನ್ನು ಪಡೆಯಲಾಯಿತು. ಬೆಸ್ಕಾಂ ವ್ಯಾಪ್ತಿಯ 104 ಗ್ರಾಮಗಳಲ್ಲಿ ವಿದ್ಯುತ್ ಅದಾಲತ್ ಗಳನ್ನು ಆಯೋಜಿಸಲಾಗಿತ್ತು.
ಗ್ರಾಹಕರು ತಾವು ಎದುರಿಸುತ್ತಿರುವ ದಿನ ನಿತ್ಯದ ವಿದ್ಯುತ್ ಸಂಬಂಧಿತ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು. ಹೆಚ್ಚಾಗಿ ಬಿಲ್ಲಿಂಗ್, ವಿದ್ಯುತ್ ವ್ಯತ್ಯಯ, ಹೊಸ ಸಂಪರ್ಕ, ಹೊಸ ಟ್ರಾನ್ಸ್ ಫಾರ್ಮರ್ , ಎಲ್ ಟಿ ಲೈನ್ ಬೇಡಿಕೆ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಗ್ರಾಹಕರು ಅದಾಲತ್ ನಲ್ಲಿ ಅಧಿಕಾರಿಗಳ ಗಮನಸೆಳೆದರು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದರು.
ಬೆಸ್ಕಾಂ ನಿರ್ದೇಶಕ ತಾಂತ್ರಿಕ ಡಿ. ನಾಗಾರ್ಜನ ರು ಚಿಂತಾಮಣಿ ತಾಲೂಕಿನ ಗಡಿವಾರಹಳ್ಳಿ ಯಲ್ಲಿ ನಡೆದ ಅದಾಲತ್ ನಲ್ಲಿ ಭಾಗವಹಿಸಿದ್ದರು. ಸುಮಾರು 150 ಮಂದಿ ಅದಾಲತ್ ನಲ್ಲಿ ಭಾಗವಹಿಸಿದ್ದು, ಹೊಸ ವಿದ್ಯುತ್ ಸಂಪರ್ಕಗಳಿಗೆ ಗ್ರಾಹಕರಿಂದ ಬೇಡಿಕೆ ವ್ಯಕ್ತವಾಯಿತು. ಬೆಳಕು ಯೋಜನೆ ಮತ್ತಿತರ ಬೆಸ್ಕಾಂ ವಿದ್ಯುತ್ ಯೋಜನೆಳಿಗೆ ಗ್ರಾಹಕರು ನಿರ್ದೇಶಕರಿಗೆ ಬೇಡಿಕೆ ಸಲ್ಲಿಸಿದರು.
ಅದಾಲತ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿರುವ ಗ್ರಾಹಕರಿಗ ಶೀಘ್ರ ವಿದ್ಯುತ್ ಸಂಪರ್ಕ ನೀಡುವ ಭರವಸೆ ನೀಡಲಾಗಿದೆ ಎಂದು ನಾಗಾರ್ಜುನ ತಿಳಿಸಿದರು.
ಚಂದಾಪುರದ ವೀರಸಂದ್ರ ಉಪ ವಿಭಾಗದ ಮುತ್ತನಲ್ಲೂರು ಗ್ರಾಮದಲ್ಲಿ ನಡೆದ ಅದಾಲತ್ ನಲ್ಲಿ ಭಾಗವಹಿಸಿದ್ದ ಗ್ರಾಹಕರು ನೀರು ಸಂಪರ್ಕ ಮತ್ತು ಮನೆಗಳ ವಿದ್ಯುತ್ ಸಂಪರ್ಕಕ್ಕೆ ಒದಗಿಸಿರುವ ವಿದ್ಯುತ್ ಪರಿವರ್ತಕದ ಲೋಡ್ ಸಾಮಾರ್ಥ್ಯವನ್ನು ಹೆಚ್ಚಿಸುವಂತೆ ಬೆಸ್ಕಾಂನ ಪ್ರಧಾನ ವ್ಯವಸ್ಥಾಪಕ (ಗ್ರಾಹಕ ಸಂಪರ್ಕ) ಎಸ್. ಆರ್. ನಾಗರಾಜ ಅವರಿಗೆ ವಿನಂತಿಸಿದರು.
ನೂರು ಮನೆಗಳಿಗೆ ಸದ್ಯ ಒದಗಿಸಲಾಗಿರುವ ವಿದ್ಯುತ್ ಪರಿವರ್ತಕದ ಸಾಮಾರ್ಥ್ಯ ಹೆಚ್ಚಿಸಬೆಕು ಮತ್ತು ಎಲ್ ಟಿ ಲೈನ್ ಬದಲಾಯಿಸಬೇಕು ಎಂಬ ಬೇಡಿಕೆಯನ್ನು ಮುತ್ತನಲ್ಲೂರು ಗ್ರಾಮಸ್ಥರು ಸಲ್ಲಿಸಿದರು. ಮುಂದಿನ ಎರಡು ವಾರಗಳಲ್ಲಿ ಈ ಬೇಡಿಕೆಯನ್ನು ಈಡೇರಿಸುವ ಭರವಸೆಯನ್ನು ಸಭೆಯಲ್ಲಿ ನೀಡಲಾಯಿತು ಎಂದು ನಾಗರಾಜ ತಿಳಿಸಿದರು.
ಬೆಸ್ಕಾಂ ನ ಮುಖ್ಯ ಪ್ರಧಾನ ವ್ಯವಸ್ಥಾಪಕ (ಆಪರೇಷನ್ಸ್ ) ಎಂ.ಎಲ್. ನಾಗರಾಜು ಅವರು ಮೊಳಕಾಲ್ಮರು ತಾಲೂಕಿನ ಬಂಡ್ರಾಬಿ ಗ್ರಾಮದಲ್ಲಿ ನಡೆದ ಅದಾಲತ್ ನಲ್ಲಿ ಭಾಗಿಯಾಗಿದ್ದರು.
ಗ್ರಾಮೀಣ ಭಾಗದ ಜನರ ವಿದ್ಯುತ್ ಸಮಸ್ಯೆಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿ ಪರಿಹಾರ ಸೂಚಿಸಲು ಪ್ರತಿ ತಿಂಗಳ ಮೂರನೇ ಶನಿವಾರ ವಿದ್ಯುತ್ ಅದಾಲತ್ ನಡೆಸಲು ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಎಲ್ಲ ಎಸ್ಕಾಂಗಳಿಗೆ ಸೂಚಿಸಿದ್ದರು.
ಅದಾಲತ್ ನಲ್ಲಿ ಗ್ರಾಹಕರಿಗೆ ವಿದ್ಯುತ್ ಸುರಕ್ಷತೆ ಮತ್ತು ಬೆಸ್ಕಾಂನ ವಿದ್ಯುತ್ ಸೇವೆಗಳಾದ ಜನಸ್ನೇಹಿ ವಿದ್ಯುತ್ ಸೇವೆಗಳು, ಸೌರ ವಿದ್ಯುತ್, ವಾಟ್ಸ್ ಆಪ್ ಸಹಾಯವಾಣಿ ಮತ್ತು ಸರಕಾರದ ಇನ್ನಿತರ ಯೋಜನೆಗಳ ಕುರಿತು ಬೆಸ್ಕಾಂನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.