ನವದೆಹಲಿ, (www.thenewzmirroe.com) :
ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಒಮಿಕ್ರಾನ್ ಬಗ್ಗೆ ಆತಂಕಿತರಾಗಬೇಡಿ, ಆದರೆ ಎಚ್ಚರ ವಹಿಸಿ ಎಂದು ಮಾತು ಆರಂಭಿಸಿದ ಪ್ರಧಾನಿ, ಎಲ್ಲರಿಗೂ ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು, ಹೊಸವರ್ಷ 2022 ಸ್ವಾಗತಿಸೋಣ ಎಂದು ಮನವಿ ಮಾಡಿದರು.
ಇಂದು ನಮ್ಮ ದೇಶವು ಮಹತ್ವದ ನಿರ್ಣಯ ತೆಗೆದುಕೊಂಡಿದೆ. 15ರಿಂದ 18 ವರ್ಷದ ಮಕ್ಕಳಿಗೆ ದೇಶದಲ್ಲಿ ಲಸಿಕೆ ನೀಡುತ್ತೇವೆ. 3ನೇ ಜನವರಿ ಸೋಮವಾರದಿಂದ ಮಕ್ಕಳಿಗೆ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ತಿಳಿಸಿದರು.
ದೇಶದಲ್ಲಿ ಒಮಿಕ್ರಾನ್ ಸೋಂಕಿನ ಭೀತಿ ಇದೆ, ಮಾಸ್ಕ್ ಬಳಕೆ ಕಡ್ಡಾಯಗೊಳಿಸಿ ಎಂದು ನಮೋ ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದರು. 18 ಲಕ್ಷ ಐಸೋಲೇಷನ್ ಬೆಡ್ಗಳಿವೆ, ಕೊರೊನಾ ರೂಪಾಂತರಿಯಾಗಿ ಪರಿವರ್ತನೆಯಾಗ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಒಮಿಕ್ರಾನ್ ಸೋಂಕು ನಮ್ಮನ್ನು ಕಾಡುತ್ತಿದೆ. ಕೊರೊನಾ ರೂಪಾಂತರಿಯಾಗಿ ಪರಿವರ್ತನೆ ಹೊಂದುತ್ತಿದೆ. ಹೆಚ್ಚುವರಿ ಐಸಿಯು, ಆಕ್ಸಿಜನ್ ಬೆಡ್‌ಗಳನ್ನು ಸಿದ್ಧಪಡಿಸಿದ್ದೇವೆ. ವಿಶ್ವದಾದ್ಯಂತ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿದೆ ಎಂದು ತಿಳಿಸಿದರು.ದೇಶದ ಎಲ್ಲ ನಾಗರಿಕರ ಸಾಮಾಹಿಕ ಪರಿಶ್ರಮ ಮತ್ತು ಇಚ್ಛಾಶಕ್ತಿಯಿಂದಾಗಿ 100 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ನೀಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಭಾರತದ ದೊಡ್ಡ ಜನಸಂಖ್ಯೆಯಲ್ಲಿ ಬಹುತೇಕರಿಗೆ ಎರಡು ಡೋಸ್ ಲಸಿಕೆಗಳು ಸಿಕ್ಕಿವೆ. ಲಸಿಕೆ ವಿತರಣೆಗೆ ಸಂಬಂಧಿಸಿದ ಐಟಿ ಮತ್ತು ಇತರ ಪೂರಕ ಕ್ರಮಗಳಿಗೂ ಸರ್ಕಾರ ಆದ್ಯತೆ ನೀಡಿದೆ. ವಿಶ್ವದಲ್ಲಿ ಅತಿಹೆಚ್ಚು ಜನರಿಗೆ ನಾವು ಲಸಿಕೆ ನೀಡಿದ್ದೇವೆ ಎಂದರು.
ಉತ್ತರಖಂಡ, ಗೋವಾ, ಹಿಮಾಚಲ ಪ್ರದೇಶದಲ್ಲಿ ಶೇ 100ರಷ್ಟು ಲಸಿಕಾಕರಣವಾಗಿದೆ. ದೇಶದ ದೂರದೂರದ ಹಳ್ಳಿಗಳಲ್ಲಿಯೂ ಸಂಪೂರ್ಣ ಲಸಿಕಾಕರಣ ಆಗಿರುವ ಸುದ್ದಿ ಬಂದಾಗ ಮನಸ್ಸಿಗೆ ಸಂತೋಷವಾಗುತ್ತದೆ. ಒಂದು ತಂಡವಾಗಿ ನಾವು ಕೆಲಸ ಮಾಡಿದ್ದೇವೆ. ನಮ್ಮ ಅರೋಗ್ಯ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ನಮ್ಮ ದೇಶದಲ್ಲಿ ಬೇಗನೇ ಮೂಗಿನಿಂದ ಕೊಡುವ ಲಸಿಕೆ ಮತ್ತು ಡಿಎನ್ಎ ಲಸಿಕಾಕರಣವೂ ಆರಂಭವಾಗಲಿದೆ ಎಂದರು.