- 58 ಅತಿ ಸೂಕ್ಷ್ಮ ಮತ್ತು 151 ಸೂಕ್ಷ್ಮ ಪ್ರದೇಶ ಡೇಂಜರ್
ಬೆಂಗಳೂರು:
ರಾಜಧಾನಿ ಬೆಂಗಳೂರಿನಲ್ಲಿ ಮಳೆ ಪ್ರವಾಹಕ್ಕೆ ತುತ್ತಾಗುವ 209 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 58 ಅತಿ ಸೂಕ್ಷ್ಮ ಮತ್ತು 151 ಸೂಕ್ಷ್ಮ ಪ್ರದೇಶಗಳಿವೆ.
ಪಾಲಿಕೆ ವ್ಯಾಪ್ತಿಯಲ್ಲಿ ಮುಚ್ಚಿ ಹೋಗಿರುವ ಚರಂಡಿಗಳು ಮತ್ತು ಮಳೆ ನೀರು ಹರಿಯುವ ಚರಂಡಿಗಳ ಮರು ಪರಿಶೀಲನೆ ನಡೆಸುವುದಾಗಿ ಈ ಹಿಂದೆ ಬಿಬಿಎಂಪಿ ತಿಳಿಸಿತ್ತು. ಆದರೆ, ಮಳೆಗಾಲ ಮುಗಿಯುತ್ತಾ ಬಂದರೂ ಚರಂಡಿಗಳ ವ್ಯವಸ್ಥೆ ಮಾತ್ರ ಸರಿಯಾಗಿಲ್ಲ. ಹೀಗಾಗಿ ಭಾನುವಾರ ಸುರಿದ ಮಳೆಗೆ ಇಷ್ಟೆಲ್ಲಾ ಹಾನಿಯಾಗಲು ಇದು ಕೂಡಾ ಕಾರಣವಾಗಿದೆ. ಚರಂಡಿಗಳ ಹೂಳು ತೆಗೆದು, ಮಳೆ ನೀರು ಸುಗಮವಾಗಿ ಹರಿಯುವಂತೆ ಮಾಡುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲವಾಗಿದೆ ಎಂಬುದು ಸಾರ್ವಜನಿಕರ ಆರೋಪ.
ಮಳೆಗಾಲಕ್ಕೂ ಮುನ್ನವೇ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದರೂ ಸರಿಯಾದ ನಿರ್ವಹಣೆ ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಎಲ್ಲ ವಲಯಗಳಲ್ಲೂ ಭಾನುವಾರ ಸುರಿದ ಮಳೆ ಅವಾಂತರ ಸೃಷ್ಟಿಸಿದ್ದು, ಕೋಟ್ಯಂತರ ರು. ನಷ್ಟಕ್ಕೆ ಕಾರಣವಾಗಿದೆ.
ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಪೂರ್ವ ವಲಯದಲ್ಲಿ ಅತಿ ಹೆಚ್ಚು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ. ಪೂರ್ವ ವಲಯವೊಂದರಲ್ಲೇ 38 ಸೂಕ್ಷ್ಮ ಪ್ರದೇಶಗಳಿದ್ದು ದಾಸರಹಳ್ಳಿ 37 ಮತ್ತು ರಾಜರಾಜೇಶ್ವರಿ ನಗರ ವಲಯದಲ್ಲಿ 32 ಸೂಕ್ಷ್ಮ ಪ್ರದೇಶಗಳಿವೆ. ಮಹದೇವಪುರ 29, ದಕ್ಷಿಣ 20, ಯಲಹಂಕ 19, ಕೇಂದ್ರ ಕಚೇರಿ 13, ಬೊಮ್ಮನಹಳ್ಳಿ 11, ಪಶ್ಚಿಮ 10 ಸ್ಥಳಗಳಿವೆ. ಮಳೆಗಾಲ ಆರಂಭಕ್ಕೂ ಮುನ್ನ ಈ ಬಗ್ಗೆ ಮಾಹಿತಿ ನೀಡಿದ್ದ ಪಾಲಿಕೆ ಈ ಪ್ರದೇಶಗಳಲ್ಲಿ ಪ್ರವಾಹ ತಡೆಗೆ ಯಾವುದೇ ಕ್ರಮ ಕೈಗೊಂಡಂತಿಲ್ಲ.
ರಾಜರಾಜೇಶ್ವರಿನಗರ, ಪಶ್ಚಿಮ ವಲಯ, ಪೂರ್ವ ವಲಯದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ಸಾಕಷ್ಟುಅನಾಹುತಗಳು ಸಂಭವಿಸಿದೆ. ಪಾಲಿಕೆ ರಾಜಕಾಲುವೆ, ಮಳೆನೀರು ಕಾಲುವೆ ಕಾಮಗಾರಿಗಳು ಸಮರ್ಪಕವಾಗಿ ಮಾಡುತ್ತಿಲ್ಲ. ಹೀಗಾಗಿ ಮಳೆ ಬಂದಾಗ ಕಾಲುವೆಗಳ ನೀರು ತಗ್ಗುಪ್ರದೇಶಕ್ಕೆ ನುಗ್ಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.