ಬೆಂಗಳೂರು, (www.thenewzmirror.com):
ಕರೋನಾದಿಂದ ಕಂಗೆಟ್ಟಿದ್ದ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ.., ನಾಳೆಯಿಂದಲೇ ಸಿನಿಮಾ ಥಿಯೇಟರ್, ಸ್ವಿಮಿಂಗ್ ಪೂಲ್, ಜಿಮ್ ಹಾಗೂ ಯೋಗ ಸೆಂಟರ್ ಗಳಲ್ಲಿ ಶೇಕಡಾ 100 ರಷ್ಟು ಭರ್ತಿಗೆ ಅವಕಾಶ ನೀಡಲಾಗಿದೆ.
ಮುಖ್ಯಮಂತ್ರಿ ಜತೆ ನಡೆದ ಸಭೆ ಬಳಿಕ ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಡಿಸೆಂಬರ್ ಕೊನೆ ವಾರದಲ್ಲಿ ಒಮಿಕ್ರಾನ್ ವೈರಾಣು ಹರಡುವಿಕೆ ಹೆಚ್ಚಾದ ಬಳಿಕ ಕೆಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದ್ರೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬರ್ತಿದೆ. ಈ ಹಿನ್ನಲೆಯಲ್ಲಿ ಇಂಥ ತೀರ್ಮಾನ ಎಂದು ಮಾಹಿತಿ ನೀಡಿದ್ರು.
ಜನವರಿಯಲ್ಲಿ ಆಸ್ಪತ್ರೆಗಳಲ್ಲಿ 5-6% ಆಸ್ಪತ್ರೆ ದಾಖಲಾತಿ ಇತ್ತು. ಈಗ ಇದು 2% ಗೆ ಇಳಿಕೆಯಾಗಿದೆ.., ಶೇಕಡಾ 50 – 50 ರಷ್ಟು ನಿಯಮ ಹೇರಿದ್ದರಿಂದ ಚಿತ್ರಮಂದಿರಗಳ ಮಾಲೀಕರು, ನಿರ್ಮಾಪಕರು ಹಾಗೂ ಉದ್ಯಮದಲ್ಲಿರುವವರಿಗೆ ನಷ್ಟವಾಗಿದೆ. ಚಿತ್ರರಂಗದ ಅಭಿಮಾನಿಗಳು, ಉದ್ಯಮದಲ್ಲಿ ತೊಡಗಿಸಿಕೊಂಡವರ ನಿರೀಕ್ಷೆಯನ್ನು ಗಮನದಲ್ಲಿರಿಸಿ ಈ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಹೇಳಿದರು.
ಇದೇ ರೀತಿ ಜಿಮ್ ಮತ್ತು ಈಜುಕೊಳಗಳಲ್ಲೂ ಶೇ.100 ರಷ್ಟು ಬಳಕೆಗೆ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಮುನ್ನಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು. ಚಿತ್ರ ವೀಕ್ಷಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ವೀಕ್ಷಿಸುವಾಗ ಒಳಗೆ ಆಹಾರ ಸೇವಿಸಲು ಅವಕಾಶ ನೀಡಬಾರದು ಎಂದು ಸೂಚಿಸಲಾಗುವುದು. ಈ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಅಧಿಕಾರಿಗಳು ಯಾವುದೇ ವೇಳೆಯಲ್ಲಿ ಪರಿಶೀಲನೆ ಮಾಡುತ್ತಾರೆ. ಈ ನಿಯಮಗಳನ್ನು ಪಾಲಿಸದಿದ್ದರೆ ಚಿತ್ರಮಂದಿರಗಳ ವಿರುದ್ಧ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.