ಬೆಂಗಳೂರು,(www.thenewzmirror.com):
ಸರ್ಕಾರಿ ಶಾಲೆಗಳನ್ನ ನಡೆಸೋ ವಿಚಾರದಲ್ಲಿ ಜನತೆಯಿಂದ ಛೀಮಾರಿ ಹಾಕಿಸಿಕೊಂಡ ಸರ್ಕಾರ ಮತ್ತೊಮ್ಮೆ ನಗೆಪಾಟಲಿಗೆ ಎಡೆಮಾಡಿಕೊಟ್ಟಿದೆ.
ಭ್ರಷ್ಟಾಚಾರ, ದುರಾಡಳಿತ, ಅಕ್ರಮ, ಪೊಲೀಸ್ ದೌರ್ಜನ್ಯದ ನಡುವೆ ಇದೀಗ ಮತ್ತೊಂದು ವಿವಾದಕ್ಕೂ ಕಾರಣವಾಗಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ರೂ ಜುಟ್ಟಿಗೆ ಮಲ್ಲಿಗೆ ಹೂ ಅನ್ನುವಂತೆ ಜಾಹೀರಾತಿಗಾಗಿ ಬರೋಬ್ಬರಿ ನಾಲ್ಕೂವರೆ ಕೋಟಿ ಖರ್ಚು ಮಾಡಿದೆ.
ನವೆಂಬರ್ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕಾಗಿ (GIM) ಕಿರುಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಐದು ನಿಮಿಷಗಳ ಕಿರುಚಿತ್ರ ನಿರ್ಮಾಣಕ್ಕಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು ನಾಲ್ಕುವರೆ (4.5) ಕೋಟಿ ರೂಪಾಯಿಗಳನ್ನು ಪಾವತಿಸಲು ಒಪ್ಪಂದ ಮಾಡಿಕೊಂಡಿದೆ.
ಈಗಾಗಲೇ ಈ ಸಂಸ್ಥೆಗೆ ಒಂದುವರೆ (1.5) ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಪಾವತಿಸಲಾಗಿದೆ ಎಂದು ತಿಳಿದುಬಂದಿದೆ. ಈ ವಿಚಾರದ ಬಗ್ಗೆ ಸ್ವತಃ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ್ ನಿರಾಣಿ ತಮ್ಮ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಈ ಒಪ್ಪಂದ ರದ್ದುಪಡಿಸಲು ಸೂಚಿಸಿದ್ದಾರೆ.
ಸಚಿವರ ಈ ಟಿಪ್ಪಣಿ ಗಮನಿಸಿದರೆ ಹಲವಾರು ಅನುಮಾನಗಳು ಮೂಡುತ್ತವೆ. ಟಿಪ್ಪಣಿಯಲ್ಲಿ ಸಚಿವರು ಹೇಳಿರುವಂತೆ, ಈ ಕಿರುಚಿತ್ರಕ್ಕಾಗಿ ಮಾಡಿಕೊಂಡಿರುವ ಒಪ್ಪಂದವು ಅವರ ಗಮನಕ್ಕೆ ಬಂದಿರುವುದಿಲ್ಲ ಎಂದು ತಿಳಿದುಬರುತ್ತದೆ. ಇಲಾಖಾ ಸಚಿವರ ಗಮನಕ್ಕೆ ಬಾರದೇ ನಾಲ್ಕೂವರೆ ಕೋಟಿ ತೆರಿಗೆ ಹಣ ಖರ್ಚು ಮಾಡಿದ್ದಾರೆ ಅಂತ ಯಾರಾದ್ರೂ ನಂಬ್ತಾರಾ ಹೇಳಿ..?
ಇಲಾಖೆಯಲ್ಲಿ ಈ ಪ್ರಮಾಣದ ಹಣವನ್ನು ಯಾವ ಬಾಬ್ತಿಗೆ ಖರ್ಚು ಮಾಡಲಾಗುತ್ತಿದೆ ಎಂದು ಸಚಿವರಿಗೆ ತಿಳಿದಿಲ್ಲವೆಂದರೆ, ಅವರಿಗೆ ತಮ್ಮ ಇಲಾಖೆ ಮೇಲೆ ನಿಯಂತ್ರಣವಿಲ್ಲವೆನ್ನುವುದು ಸ್ಪಷ್ಟವಾಗಿ ತಿಳಿಯುತ್ತೆ.
ಪ್ರತಿ ಬಾರಿಯೂ ಕೆಟಿಟಿಪಿ ಕಾಯ್ದೆ ಉಲ್ಲಂಘನೆ ಮಾಡುತ್ತಿದೆ. ಎಲ್ಲಾ ಖರೀದಿಗಳಿಗೂ ಮತ್ತು ಗುತ್ತಿಗೆ ನೀಡಲು ಕೆಟಿಟಿಪಿ ಕಾಯ್ದೆಯಿಂದ ವಿನಾಯಿತಿ ಪಡೆಯುವುದಾದರೆ, ಆ ಕಾಯ್ದೆ ಯ ಅಗತ್ಯ ವಿದ್ಯಾ ಅನ್ನೋ ಪ್ರಶ್ನೆ ಮೂಡುತ್ತಿದೆ.
ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಮೆಗಾ ಚಿತ್ರಗಳನ್ನ ನಿರ್ಮಿಸಿದ ನಿರ್ಮಾಪಕ ಮತ್ತು ಅವರ ಸಂಬಂಧಿಯೊಬ್ಬರು ಇದೇ ಸರ್ಕಾರದಲ್ಲಿ ಮಂತ್ರಿಗಳಾಗಿದ್ದಾರೆ. ಈ ವಿಚಾರ ಅವರ ಗಮನಕ್ಕೆ ಬಂದಿತ್ತೊ ಇಲ್ಲವೊ ತಿಳಿದಿಲ್ಲ, ತಿಳಿದಿದ್ದರೆ, ಅವರೂ ಕೂಡ ಆಶ್ಚರ್ಯ ಪಡುತ್ತಿದ್ದರೆನೋ..?
ಜಾಗತಿಕ ಹೂಡಿಕೆದಾರರ ಸಮಾವೇಶವಾಗಿರುವುದರಿಂದ ಇದನ್ನ ಹಾಲಿವುಡ್ ನಿರ್ಮಾಣ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿರಬಹುದೆನೋ ಅನ್ನೋ ಮಾತುಗಳು ಹಾಲಿವುಡ್ ವಲಯದಲ್ಲಿ ಚರ್ಚೆಯಾಗ್ತಿದೆಯಂತೆ.
ಒಂದೆಡೆ ಹಣವಿಲ್ಲ ಎಂದು ಹೇಳುವ ಸರ್ಕಾರ ಮತ್ತೊಂದೆಡೆ, ಈ ರೀತಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲು ನೆರವಾಗುತ್ತಿದೆ. ಯಾವ ಜನಕಲ್ಯಾಣ ಸಾಧನೆಯೂ ಇಲ್ಲದ ಸರ್ಕಾರ, ತನ್ನನ್ನು ಬಿಂಬಿಸಿಕೊಳ್ಳಲು ಪ್ರತಿನಿತ್ಯ ಜಾಹಿರಾತು ನೀಡಿ ಹತ್ತಾರು ಕೋಟಿ ಹಣ ಅಪವ್ಯಯ ಮಾಡುತ್ತಿದೆ.
ಶಾಲೆಗಳ ನಿರ್ವಹಣೆಗೆ, ಪಠ್ಯ ಪುಸ್ತಕ, ಸಮವಸ್ತ್ರ, ಶೂ/ ಕಾಲುಚೀಲ ಒದಗಿಸಲು ಹಣದ ಮುಗ್ಗಟ್ಟು ಎಂದು ಹೇಳಿ ಪೋಷಕರಿಂದ ಮತ್ತು ದಾನಿಗಳಿಂದ ದೇಣಿಗೆ ಸಂಗ್ರಹಿಸಲು ಮುಂದಾಗುತ್ತದೆ.
ಸಚಿವರು ಜಿಮ್ ಸಮಾವೇಶಕ್ಕೆ ವ್ಯಯಿಸುತ್ತಿರುವ ಹಣವನ್ನು ಗಮನಿಸಿದರೆ, ಪ್ರತಿಯೊಂದರಲ್ಲೂ ಇದೇ ರೀತಿಯ ಲೂಟಿ ಕಂಡುಬರುತ್ತದೆ, ಆದ್ದರಿಂದ ಬಹುತೇಕ ಲೂಟಿ ಮಾಡಲು ಮತ್ತು ಜನರನ್ನು ನಂಬಿಸಲು ನಡೆಸುವ ಜಿಮ್ ಎಂಬ ನಾಟಕವನ್ನು ರದ್ದುಗೊಳಿಸುವುದೇ ಒಳಿತು ಎಂದು ಕೆ. ಆರ್. ಎಸ್. ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್ ಅಭಿಪ್ರಾಯ ಪಡ್ತಿದ್ದಾರೆ.
ಈ ಕಿರುಚಿತ್ರ ನಿರ್ಮಾಣದ ಬಗ್ಗೆ ಸಮಗ್ರ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಇದಕ್ಕೆ ಕಾರಣರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಇಲ್ಲಿಯವರೆಗೆ ನಡೆಸಲಾಗಿರುವ ಜಿಮ್ ಸಮಾವೇಶಕ್ಕಾಗಿ ಮಾಡಿರುವ ಖರ್ಚು ವೆಚ್ಚಗಳನ್ನು, ಅದರಿಂದ ಆಗಿರುವ ಪ್ರಯೋಜನಗಳ ಬಗ್ಗೆ ತನಿಖೆ ನಡೆಸಿ, ಜನರ ಮುಂದೆ ಇಡಬೇಕು ಎಂದೂ ಕೆ.ಆರ್.ಎಸ್ ಪಕ್ಷ ಆಗ್ರಹ ಪಡಿಸ್ತಿದೆ.