ಬೆಂಗಳೂರು, (www.thenewzmirror.com) :
ದೇವರು ಇದ್ದಾನೋ, ಇಲ್ಲವೋ ಅನ್ನೋದು ಆ ದೇವರಿಗಷ್ಟೇ ಗೊತ್ತು. ಜನರ ಕಣ್ಣಿಗೆ ಬೀಳದೇ ಅಲೆಲ್ಲೋ ದೇವಲೋಕದಲ್ಲಿ ಅಡಗಿ ಕುಳಿತಿರುವ ಭಗವಂತ ಯಾವ ಕ್ಷಣದಲ್ಲಿ ಕ್ರೂರಿಯಾಗ್ತಾನೋ, ಯಾವ ಘಳಿಗೆಯಲ್ಲಿ ಕರುಣಾಮಯಿ ಆಗ್ತಾನೋ ಗೊತ್ತಿಲ್ಲ. ಆದರೆ, ಒಮ್ಮೊಮ್ಮೆ ದೈವ ಸಮಾನರಾದ ಮಕ್ಕಳ ವಿಚಾರದಲ್ಲೂ ಕ್ರೌರ್ಯತೆ ಮೆರೆದು ಗಹಗಹಿಸುತ್ತಾನೆ.
ಜೀವ ತುಂಬಿ ಪ್ರಪಂಚಕ್ಕೆ ಕಳುಹಿಸಿಕೊಡುವ ಭಗವಂತ, ಕಣ್ಣುಬಿಟ್ಟು ಇಡೀ ಪ್ರಪಂಚವನ್ನು ನೋಡುವ ಮೊದಲೇ ಕಿತ್ಕೊಂಡು ಬಿಡ್ತಾನೆ. ಇಲ್ಲಾಗಿದ್ದು ಅಷ್ಟೇ..ಈಗೀಗಷ್ಟೇ ಬೆರಗುಗಣ್ಣಿನಿಂದ ಭೂಮಂಡಲವನ್ನು ನೋಡುತ್ತಿದ್ದ ನನ್ನಮ್ಮ ಸೂಪರ್ಸ್ಟಾರ್ ಖ್ಯಾತಿಯ ಸಮನ್ವಿಯನ್ನ ದೇವರು ಏಕಾಏಕಿ ಕರೆಸಿಕೊಂಡುಬಿಟ್ಟಿದ್ದಾನೆ.
ಅಮೃತಾ ಹಾಗೂ ರೂಪೇಶ್ ದಂಪತಿಗೆ ಸಮನ್ವಿ ಬರೀ ಮಗಳಾಗಿರಲಿಲ್ಲ. ತಂದೆಯ ಪಾಲಿಗೆ ತಾಯಿ ಸ್ಥಾನ ತುಂಬಿದ್ರೆ.. ಹಡೆದವ್ವನಿಗೆ ಪ್ರಪಂಚವೇ ಆಗಿದ್ದಳು. ಮೊದಲ ಮಗುವನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದ ಅಮೃತಾ ನಾಯ್ಡು ಹಾಗೂ ರೂಪೇಶ್ ದಂಪತಿ ಬಾಳಿಗೆ ಸಮನ್ವಿ ಬೆಳಕಾಗಿ ಆಗಮಿಸಿದ್ದಳು. ಇವಳು ಬಂದ್ಮೇಲೆ ಅವರಿಬ್ಬರ ಬದುಕು ಬಂಗಾರವಾಗಿತ್ತು. ಕತ್ತಲೆ ತುಂಬಿದ ಬಾಳಲ್ಲಿ ಬೆಳಕು ಮೂಡಿತ್ತು. ಮರೆಯಾದ ಸಂತೋಷ, ಸಂಭ್ರಮ ಮರಳಿ ಸಿಕ್ಕಿತ್ತು. ಚಿಕ್ಕ ಸಂಸಾರ-ಚೊಕ್ಕ ಸಂಸಾರವಾಗಿ ಸ್ವರ್ಗಕ್ಕೆ ಕಿಚ್ಚು ಹಚ್ಚುತ್ತಾ ಬದುಕುತ್ತಿದ್ರು. ಅಷ್ಟರಲ್ಲೇ ಈ ಘನಘೋರ ದುರಂತ ನಡೆದು ಬಿಟ್ಟಿದೆ.

ಭಗವಂತ ಕ್ರೂರಿ, ಅವನಿಗೆ ಕರುಣೆಯಿಲ್ಲ, ಕಣ್ಣಿಲ್ಲ ಅಂತ ಜನರೆಲ್ಲ ಹಿಡಿಶಾಪ ಹಾಕುತ್ತಿರುವಾಗ ಸಮನ್ವಿಯ ಹೆತ್ತವರು ಮತ್ತೆ ದೇವರ ಮೊರೆ ಹೋಗಿದ್ದಾರೆ. ನಮ್ಮ ಹೊಟ್ಟೆಗೆ ಮತ್ತೊಂದು ಕುಡಿಯನ್ನು ನೀನೇ ಹಾಕಿರುವೆ. ಆ ಕುಡಿಗೆ ಈಗ ನಾಲ್ಕು ತಿಂಗಳು. ಈ ಹೊತ್ತಲ್ಲಿ ನಾನು ನಿನಗೆ ಬೇಡುವುದು ಒಂದೇ. ನಮ್ಮಿಂದ ಕಸಿದುಕೊಂಡಿರುವ ನಮ್ಮ ಮನೆಯ ನಂದಾದೀಪ, ನಮ್ಮ ಮುದ್ದಿನ ಮಗಳು, ನಮ್ಮ ಮನೆಯ ರಾಜಕುಮಾರಿಯನ್ನ ಮತ್ತೆ ನಮ್ಮ ಮಡಿಲಿಗೆ ಹಾಕಿಬಿಡು. ಸಮನ್ವಿಯನ್ನೇ ನನ್ನ ಮಗಳನ್ನಾಗಿ ವಾಪಾಸ್ ಕೊಟ್ಟುಬಿಡು. ಹೀಗಂತ, ಸಮನ್ವಿಯ ಹಡೆದವ್ವ ಅಮೃತಾ ನಾಯ್ಡು ದೇವರ ಬಳಿ ಬೇಡಿಕೊಳ್ಳುತ್ತಿದ್ದಾರೆ.

ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಲ್ಲಿ ನನ್ನದೊಂದು ಪ್ರಾರ್ಥನೆ. ನಾನು ಈಗ ನಾಲ್ಕು ತಿಂಗಳ ಗರ್ಭಿಣಿ. ಮತ್ತೆ ನನ್ನ ಮುದ್ದು ಕಂದಮ್ಮ ಸಮನ್ವಿಯ ಬರುವಿಕೆಗಾಗಿ ಈ ತಾಯಿ ಜೀವ ಹಂಬಲಿಸುತ್ತಿದೆ. ದಯಮಾಡಿ ನನಗೊಂದು ಸಹಾಯ ಮಾಡಿ. ಆ ಭಗವಂತನಲ್ಲಿ ಪ್ರಾರ್ಥಿಸಿ. ನಿಮ್ಮ ಎಲ್ಲರ ಪ್ರಾರ್ಥನೆಯಿಂದಾದರು ನನ್ನ ಮುದ್ದು ಕಂದಮ್ಮನನ್ನು ಆ ಭಗವಂತ ಮರಳಿ ಕಳುಹಿಸಿಬಿಡಲಿ. ಅವಳನ್ನು ನನ್ನ ಗರ್ಭದಲ್ಲಿ ಜೋಪಾನ ಮಾಡಿ ಕಾಪಾಡಿಕೊಳ್ಳುತ್ತೇನೆ. ದಯಮಾಡಿ ಈ ತಾಯಿ ಕರೆಗೆ ಕೈ ಜೋಡಿಸಿ ನನ್ನ ಸಮನ್ವಿಯ ಪುನಃ ಬರುವಿಕೆಗಾಗಿ ಸಹಾಯ ಮಾಡಿ. ಅವಳು ಮತ್ತೆ ನನ್ನ ಮಗಳಾಗಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯ ಪ್ಲೀಸ್.. ಪ್ಲೀಸ್.. ಪ್ಲೀಸ್. ನನ್ನ ಮಗಳು ತಿರುಗಿ ಬಂದರೆ ನಾನು ಮತ್ತೆ ಬದುಕು ಕಟ್ಟಿಕೊಳ್ಳಲು ಸಾಧ್ಯ.
ಅಮೃತಾ ನಾಯ್ಡು, ಸಮನ್ವಿ ತಾಯಿ
ಇದು, ಸಮನ್ವಿಯ ಹೆತ್ತವ್ವ ಬರೆದಿರುವ ಪತ್ರ. ಸೋಷಿಯಲ್ ಮೀಡಿಯಾದಲ್ಲಿ ಇದನ್ನು ಹಂಚಿಕೊಂಡಿದ್ದಾರೆ ಅಮೃತಾ. ಈ ತಾಯಿಯ ಕರುಳ ಬಳ್ಳಿ ಕಳೆದುಕೊಂಡ ಸಂಕಟವನ್ನು ನೋಡಿದರೆ ಕರುಳು ಕಿತ್ತುಬರುವಂತಾಗ್ತಿದೆ. ಹೊಕ್ಕಳ ಉರಿ ಕತ್ತರಿಸಿಕೊಟ್ಟು ಸಮನ್ವಿಗೆ ಜೀವ ಕೊಟ್ಟ ಹೆತ್ತವ್ವ ಅಮೃತಾ ಈಗ ಮತ್ತೊಮ್ಮೆ ಸಮನ್ವಿಗೆ ಕರುಳ ಬಳ್ಳಿಯನ್ನು ಕತ್ತರಿಸಿಕೊಡುತ್ತೇನೆ. ಅವಳು ಮತ್ತೆ ನನ್ನ ಹೊಟ್ಟೆಯಲ್ಲೇ ಹುಟ್ಟಿಬರಲಿ ಎಂದು ಬೇಡುತ್ತಿದ್ದಾರೆ. ಆಘಾತದ ಮೇಲೆ ಆಘಾತ, ನೋವಿನ ಮೇಲೆ ನೋವು ಕೊಟ್ಟು ಹಿಂಸೆ ಮಾಡುತ್ತಿರುವ ಭಗವಂತ ಅಮೃತಾಗೆ ಮತ್ತೊಂದು ಕುಡಿಯನ್ನು ಕೊಡುವ ಮನಸ್ಸು ಮಾಡಿದ್ದಾನೆ.
ಇನ್ನಾದ್ರೂ ಅಮೃತಾ ವಿಚಾರದಲ್ಲಿ ದೇವರು ಕೊಂಚ ಕರುಣಾಮಯಿಯಾಗಿರಲಿ. ಇಲ್ಲಿವರೆಗೂ ಸಂತೋಷ ಕೊಟ್ಟು ದುಃಖ ಕೊಟ್ಟಿರುವ ಭಗವಂತ, ಅಮೃತಾ ಆಸೆಯಂತೆ ಸಮನ್ವಿಯನ್ನು ವಾಪಾಸ್ ಆಕೆಯ ಹೊಟ್ಟೆಗೆ ಹಾಕಲಿ, ನನ್ನಮ್ಮ ಸೂಪರ್ಸ್ಟಾರ್ ಅಂತ ಕೂಗಿದ ಸಮನ್ವಿ ಮತ್ತೆ ಅದೇ ಉದರದಲ್ಲಿ ಹುಟ್ಟಿಬರಲಿ.