ಬೆಂಗಳೂರು, ( www.thenewzmirror.com) ;
ದೇಶದಲ್ಲೇ ನಂಬರ್ ಓನ್ ಸಾರಿಗೆ ಸಂಸ್ಥೆ ಅನ್ನೋ ಬಿರುದು.., ಮತ್ತೊಂದ್ಕಡೆ ಪ್ರಯಾಣಿಕರಿಗೆ ಸೇವೆ ಕೊಡೋದೇ ನಮ್ಮ ಮೊದಲ ಆದ್ಯತೆ ಅಂತೆಲ್ಲಾ ಜಂಭ ಕೊಚ್ಚಿಕೊಳ್ಳುವ ಸಾರಿಗೆ ಸಂಸ್ಥೆಗಳು ಹಾಗೂ ಅಲ್ಲಿ ಕೆಲ್ಸ ಮಾಡುತ್ತಿರುವ ಅಧಿಕಾರಿಗಳ ಮುಖವಾಡವನ್ನ ನಿಮ್ಮ “ದಿ ನ್ಯೂಝ್ ಮಿರರ್” ಬಯಲು ಮಾಡೋ ಸಣ್ಣ ಪ್ರಯತ್ನಕ್ಕೆ ಕೈ ಹಾಕಿದೆ.
ಹೌದು, ಕಳೆದ ಹಲವು ವರ್ಷಗಳಿಂದ ನಷ್ಟದಲ್ಲಿರುವ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳನ್ನ ಮೇಲೆತ್ತೋಕೆ ಸರ್ಕಾರ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಅನುದಾನ ನೀಡ್ತಿದೆ.., ಹೀಗಿದ್ರೂ ಇಲಾಖೆಗಳಲ್ಲಿ ನಡೀತಿರುವ ವಿಪರೀತ ಭ್ರಷ್ಟಚಾರದಿಂದ ನಷ್ಟದ ಪ್ರಮಾಣ ಹೆಚ್ಚಾಗ್ತಾನೇ ಹೋಗ್ತಿದೆ. ಇಂಥದ್ರಲ್ಲಿ ನಿಮಗದ ಅಧಿಕಾರಿಗಳ ನಡೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಸದ್ಯಕ್ಕೆ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯೋಕೆ ಎಲ್ಲಿಲ್ಲದ ಕಸರತ್ತನ್ನ ಮಾಡ್ತಿದ್ದಾರೆ. ಹೀಗಿರುವಾಗ ರಾಜಕೀಯ ಸಮಾವೇಶ, ಸಭೆ ಸಮಾರಂಭಗಳಿಗೆನೂ ಕೊರತೆಯಿಲ್ಲ.., ಯಾವುದೇ ಒಂದು ಸಮಾವೇಶ ನಡೆಯುತ್ತೆ ಅಂದ್ರೆ ಲಕ್ಷಾಂತರ ಕಾರ್ಯಕರ್ತರನ್ನ ಸೇರಿಸೋದು ರಾಜಕಾರಣಿಗಳಿಗೆ ದೊಡ್ಡ ಟಾಸ್ಕ್. ಇಂಥದ್ರಲ್ಲಿ ಯಾವುದೇ ಮುಖಂಡರ ಪ್ರಮುಖ ಸಭೆ- ಸಮಾರಂಭ ಅಂದ್ರೆ ಅಲ್ಲಿಗೆ ಹೋಗುವ ಕಾರ್ಯಕರ್ತಿಗೆ ಸಾರಿಗೆ ಸೌಕರ್ಯ ವ್ಯವಸ್ಥೆ ಮಾಡುವುದು ಪ್ರತೀತಿ. ಹೀಗೆ ಸಾರಿಗೆ ವ್ಯವಸ್ಥೆ ಮಾಡುವ ಭರದಲ್ಲಿ ನಿಯಮ ಮೀರಿ ಸರ್ಕಾರಿ ಬಸ್ ಗಳನ್ನ ಬುಕ್ ಮಾಡಿ ಕಳಿಸೋದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ.
ಹೀಗೆ ರಾಜಕೀಯ ಸಮಾವೇಶ ಅಂದ್ರೆ ಹೆಚ್ಚಿನ ಸರ್ಕಾರಿ ಬಸ್ ಗಳು ಸಮಾವೇಶಕ್ಕೆ ಹೋಗೋದ್ರಿಂದ ಸಾರ್ವಜನಿಕ್ರಿಗೆ ಭಾರೀ ಕಿರಿಕಿರಿ ಆಗ್ತಿದೆ. ಕಾರಣ ನಿಗಧಿತ ಸಮಯಕ್ಕೆ ಬಸ್ ಬಾರದೆ ಇರೋದ್ರಿಂದ ಅದೆಷ್ಟೋ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಓಡಾಡೋಕೆ ಕಷ್ಟವಾಗ್ತಿದೆ.
ನಿಯಮ ಏನು ಹೇಳುತ್ತೆ..?
ಸರ್ಕಾರಿ ಒಡೆತನದಲ್ಲಿರೋ ಸಾರಿಗೆ ಸಂಸ್ಥೆಗಳು ಒಂದು ನಿಯಮವನ್ನ ಮಾಡಿಕೊಂಡಿವೆ. ಯಾವುದೇ ಸಭೆ ಸಮಾರಂಭಗಳಿಗೆ ಒಪ್ಪಂದದ ಮೇಲೆ ಬಸ್ ಗಳನ್ನ ನೀಡಬಹುದು.., ಇದಕ್ಕೆ ಇಂತಿಷ್ಟು ದರ ಅಂತ ನಿಗದಿ ಮಾಡಿ ಇರುವ ಒಟ್ಟಾರೆ ಬಸ್ ಗಳ ಪೈಕಿ ಶೇಕಡಾ 10 ರಷ್ಟು ಬಸ್ ಗಳನ್ನ ಮಾತ್ರ ಒಪ್ಪಂದದ ಮೇರೆಗೆ ನೀಡಬಹುದು ಅಂತ ನಿಯಮ ಮಾಡಿಕೊಂಡಿವೆ.
ಹೀಗಿದ್ದರೂ ಹಣದಾಸೆಗೆ ಬಿದ್ದ ಕೆಲ ಅಧಿಕಾರಿಗಳು ನಿಯಮವನ್ನ ಗಾಳಿಗೆ ತೂರಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿ ಶೇಕಡಾ 50 ರಿಂದ 60 ರಷ್ಟು ಬಸ್ ಗಳನ್ನ ರಾಜಕೀಯ ಕಾರ್ಯಕ್ರಮಗಳಿಗೆ ಕಳುಹಿಸೋ ಕೆಲ್ಸವನ್ನ ಮಾಡುತ್ತಿದ್ದಾರೆ.
“ದಿ ನ್ಯೂಝ್ ಮಿರರ್” ಗೆ ಸಿಕ್ಕಿರೋ ಮಾಹಿತಿ ಪ್ರಕಾರ ಇತ್ತೀಚೆಗೆ ( ಮಾರ್ಚ್ 24 2023) ಕೇಂದ್ರ ಗೃಹ ಸಚಿವ ಅಮಿತ್ ಷಾ ಬೆಂಗಳೂರಿಗೆ ಆಗಮಿಸಿದ್ರು. ಈ ವೇಳೆ ಸರ್ಕಾರಿ ಕಾರ್ಯಕ್ರಮಗಳು ನಗರದ ಬೇರೆ ಬೇರೆ ಭಾಗಗಳಲ್ಲಿ ಆಯೋಜನೆಗೊಂಡಿದ್ವು. ಇಂಥ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರನ್ನ ಸೇರಿಸೋಕೆ ಹಾಗೂ ಅವ್ರನ್ನ ಬೇರೆ ಬೇರೆ ಭಾಗಗಳಿಂದ ಕಾರ್ಯಕ್ರಮ ನಡೆಯೋ ಸ್ಥಳಕ್ಕೆ ಕರೆದೊಯ್ಯೋಕೆ ಬಿಎಂಟಿಸಿ ಬಸ್ ಗಳ ವ್ಯವಸ್ಥೆಯನ್ನ ಬಿಜೆಪಿಯ ಕೆಲ ಮುಖಂಡರು ಮಾಡಿದ್ದರು. ಹೀಗಾಗಿ 6800 ಬಸ್ ಗಳನ್ನ ಹೊಂದಿರೋ ಬಿಎಂಟಿಸಿಯಿಂದ ರಾಜಕೀಯ ಮುಖಂಡರು ಶೇಕಡಾ 50 ರಷ್ಟು ಬಸ್ ಗಳನ್ನ ತಮ್ಮ ಕಾರ್ಯಕ್ರಮಕ್ಕೆ ಬುಕ್ ಮಾಡಿಕೊಂಡಿದ್ದರು. ಅಂದ್ರೆ ಹತ್ರತ್ರ ಮೂರು ಸಾವಿರ ಬಸ್ ಗಳು ಅಮಿತ್ ಷಾ ಕಾರ್ಯಕ್ರಮಕ್ಕೆ ಕಾರ್ಯಕರ್ತರನ್ನ ಕರೆದುಕೊಂಡು ಹೋಗೋಕೆ ಹೋಗಿದ್ವು.
ಇದರಿಂದಾಗಿ ಪರೀಕ್ಷಾ ಸಮಯ ಆಗಿದ್ದರಿಂದ ಬಹುತೇಕ ವಿದ್ಯಾರ್ಥಿಗಳು ಬಸ್ ಗಳಿಲ್ಲದೆ ಪರದಾಟ ನಡೆಸಿದ್ದು ಒಂದು ಕಡೆಯಾದರೆ ಮತ್ತೊಂದ್ಕಡೆ ಪ್ರಯಾಣಿಕರು ಬಿಸಿಲು ಎನ್ನದೇ ಅರ್ಧದಿನ ಬಸ್ ಗಾಗಿ ಕಾಯೋ ಸ್ಥಿತಿ ನಿರ್ಮಾಣವಾಗಿತ್ತು.
ಬಿಎಂಟಿಸಿ ಸಿಬ್ಬಂದಿಗೂ ತಪ್ಪದ ಕಾಟ..!
ರಾಜಕೀಯ ಕಾರ್ಯಕ್ರಮಕ್ಕೆ ಶೇಕಡಾ 50 ರಷ್ಟು ಬಸ್ ಗಳು ಬುಕ್ ಆಗಿದ್ದರಿಂದ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಣೆ ಮಾಡುವ ಸಿಬ್ಬಂದಿಗೂ ಇದರ ಬಿಸಿ ತಟ್ಟಿತ್ತು. ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದಿದ್ದರೆ ವೇತನ ಕಟ್ ಮಾಡುವ ಅಧಿಕಾರಿಗಳ ಕಾಟ ಒಂದು ಕಡೆ.., ಮತ್ತೊಂದ್ಕಡೆ ಬಸ್ ಗಳಿಲ್ಲದೆ ಪರದಾಟ.., ಐದು ಕಿಲೋ ಮೀಟರ್ ದೂರವಿದ್ದ ಬಿಎಂಟಿಸಿ ಡಿಪೋಗೆ ತೆರಳೋಕೆ ಮೂರು ಗಂಟೆ ತೆಗೆದುಕೊಂಡ ಉದಾಹರಣೆಗಳೂ ನಡೆದಿವೆ.
ಅಧಿಕಾರಿಗಳೇ ಇದೇನಾ ನಿಮ್ಮ ಬದ್ಧತೆ..?
ಸದ್ಯ ಚುನಾವಣೆ ಸಮಯದಲ್ಲಿ ಸಾರಿಗೆ ಸಂಸ್ಥೆಯಲ್ಲಿ ಕೆಲ್ಸ ಮಾಡುವ ಅಧಿಕಾರಿಗಳಿಗೆ ಬದ್ಧತೆ ಇಲ್ವಾ ಅನ್ನೋ ಪ್ರಶ್ನೆ ಕಾಡುತ್ತಿದೆ. ಇದನ್ನೆಲ್ಲಾ ನಿರ್ವಹಣೆ ಮಾಡುವ ವ್ಯವಸ್ಥಾಪಕ ನಿರ್ದೇಶಕರೂಗಳೂ ಏನೂ ಮಾಡಲಾಗದ ಸ್ಥಿತಿಯಲ್ಲಿ ಇದ್ದಾರೆ.., ಆಡಳಿತ ಪಕ್ಷದಿಂದ ಮೌಖಿಕ ಹುಕುಂ ಬರ್ತಾ ಇದ್ದಂತೆ ಅವ್ರು ಕೇಳಿದಷ್ಟು ಬಸ್ ಗಳನ್ನ ಕಾರ್ಯಕ್ರಮಕ್ಕೆ ಕಳಿಸ್ತಾರೆ.., ಆದ್ರೆ ನಿಗಧಿತ ಸಮಯಕ್ಕೆ ಬಸ್ ಬರುತ್ತೆ ಅಂತ ಬಿಸಿಲಲ್ಲಿ ಕಾಯುತ್ತಿರೋ ಪ್ರಯಾಣಿಕರ ಪಾಡನ್ನ ಕೇಳೋರು ಯಾರು..? ಅನ್ನೋ ಪ್ರಶ್ನೆಗೆ ಎಸಿ ರೂಮಿನಲ್ಲಿ ಕುಳಿತುಕೊಳ್ಳುವ ಅಧಿಕಾರಿಗಳಿಂದ ನೋ ಆನ್ಸರ್.., ಶೇಕಡಾ 10 ರಷ್ಟು ಬಸ್ ಗಳನ್ನ ಮಾತ್ರ ಒಪ್ಪಂದದ ಮೇರೆಗೆ ನೀಡಬೇಕೆಂಬ ನಿಯಮವಿದ್ದರೂ ಅದನ್ನ ಮೀರಿ ಮನಸೋ ಇಚ್ಛೆ ಬಸ್ ಗಳನ್ನ ಒಪ್ಪಂದದ ಮೇರೆಗೆ ನೀಡುತ್ತಿರುವಾದರೂ ಯಾಕೆ..? ಅವರಿಗೆ ಬದ್ಧತೆ ಇಲ್ವಾ ಅನ್ನೋ ಪ್ರಶ್ನೆಯನ್ನ ಪ್ರಯಾಣಿಕರು ಮಾಡುತ್ತಿದ್ದಾರೆ.
ಇನ್ನಾದರೂ ಇದಕ್ಕೆ ಬೀಳುತ್ತಾ ಬ್ರೇಕ್..?
ಸದ್ಯ ಪರೀಕ್ಷಾ ಸಮಯ ಆಗಿರುವುದರಿಂದ ಚುನಾವಣೆ ಬೇರೆ ಹತ್ತಿರ ಬರುತ್ತಿದೆ. ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆ ಮರುಕಳಿಸಬಾರದು ಎನ್ನುವ ಕಾರಣಕ್ಕೆ ಸಾರಿಗೆ ಸಂಸ್ಥೆಗಳ ನಡೆ ವಿರುದ್ಧ ಕಾನೂನು ಸಮರಕ್ಕೆ ಕೆಲ ವಿದ್ಯಾರ್ಥಿಗಳು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.. ಈ ಹಿಂದೆ ನಿಗದಿ ಪಡಿಸಿದ ಪ್ರಮಾಣದಲ್ಲೇ ಬಸ್ ಗಳನ್ನ ಒಪ್ಪಂದದ ಮೇರೆಗೆ ನೀಡುವಂತೆ ನ್ಯಾಯಾಲಯದ ಮೊರೆ ಹೋಗಲೂ ಮುಂದಾಗಿದ್ದಾರಂತೆ.
ಎಲ್ಲಿ ಹೋದ್ರು ಸಾಮಾಜಿಕ ಹೋರಾಟಗಾರರು..?
ಸಾರಿಗೆ ನೌಕರರ ಮುಷ್ಕರ ಅಂತ ಬಂದಾಗ ಪರೀಕ್ಷೆ ಕಾರಣ ಕೊಟ್ಟು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಕೆಲ ಸಾಮಾಜಿಕ ಹೋರಾಟಗಾರರಿಗೆ ಚುನಾವಣೆ ಕಣ್ಣಿಗೆ ಕಾಣುತ್ತಿಲ್ವಾ ಎನ್ನುವ ಪ್ರಶ್ನೆಗಳು ಮೂಡುತ್ತಿವೆ. ಪರೀಕ್ಷಾ ಸಮಯದಲ್ಲಿ ಮನಸೋ ಇಚ್ಛೆ ಬಾಡಿಗೆ ನೀಡುವ ಆಟಾ ಟೋಪಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾಕೆ ಹೋರಾ ಮಾಡುತ್ತಿಲ್ಲ ಎನ್ನುವ ಪ್ರಶ್ನೆಯನ್ನ ಹೋರಾಟಗಾರರಿಗೆ ವಿದ್ಯಾರ್ಥಿಗಳು ಮಾಡುತ್ತಿದ್ದಾರೆ.