
ಬೆಂಗಳೂರು, (www.thenewzmirror.com) :
ಬೆಂಗಳೂರು:
ಬೆಂಗಳೂರು ನಗರ ಉಸ್ತುವಾರಿ ವಹಿಸಿಕೊಂಡಿರುವ ಮುಖ್ಯಮಂತ್ರಿ ಇಂದು ಬೆಂಗಳೂರಿನಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳ ವೀಕ್ಷಣೆಗೆ ಮುಂದಾಗಿದ್ರು, ನಿನ್ನೆ ರಾತ್ರಿ ವರೆಗೂ ಯಾವ ಅಧಿಕಾರಿಗೂ ಮಾಹಿತಿ ಇರಲಿಲ್ಲ, ತಡರಾತ್ರಿ ಇದ್ದಕ್ಕಿದ್ದ ಹಾಗೆ ನಗರ ಪ್ರದಕ್ಷಿಣೆ ಫಿಕ್ಸ್ ಆಯ್ತು. ಎಷ್ಟು ಬೇಗ ಫಿಕ್ಸ್ ಆಯ್ತೋ ಅಷ್ಟೇ ಬೇಗ ಮುಕ್ತಾಯವಾಯ್ತು.
ಬೆಳಗ್ಗೆ 7.30 ಕ್ಕೆ ಮಳೆಯಿಂದ ಹಾನಿಗೊಳಗಾದ ಎಚ್.ಎಸ್.ಆರ್ ಬಡಾವಣೆ, ಮಡಿವಾಳ, ಹೊಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಕೆರೆಗಳ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿಗಳು ಅಗರ ಪಕ್ಕದಲ್ಲಿರುವ ಬಡಾವಣೆಗಳಿಗೆ ನೀರು ಮನೆಗಳಿಗೆ ನುಗ್ಗಿ ಅನಾಹುತಗಳಾಗಿವೆ. 15-20 ಕೆರೆಗಳ ನೀರು ಮೇಲ್ಮಟ್ಟದಿಂದ ಅಗರ ಕೆರೆಗೆ ಹರಿದು ಬರುತ್ತಿದೆ. ಇದನ್ನು ತಡೆಗಟ್ಟಿ ಸಾಮರ್ಥ್ಯವನ್ನು ಹೆಚ್ಚಿಸಲು ಮುಖ್ಯ ಚರಂಡಿ ದುರಸ್ಥಿ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಅಗರ ಸುತ್ತುಲಿನ ಬಡಾವಣೆಗಳಿಗೆ ಪ್ರತ್ಯೇಕ ಚರಂಡಿ ನಿರ್ಮಾಣ ಕಾರ್ಯವನ್ನು 4-5 ತಿಂಗಳಲ್ಲಿ ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ. ಒಳಚರಂಡಿ ಹಾಗೂ ಕೊಳಚೆ ನೀರನ್ನು ಪ್ರತ್ಯೇಕ ಮಾಡಲು ಅಗತ್ಯ ಕ್ರಮವಹಿಸಲಾಗುವುದು ಎಂದರು.
ಬಡಾವಣೆಗಳಲ್ಲಿ ಯು.ಜಿ.ಡಿ ಲೆವೆಲ್ ಗಳಲ್ಲಿ ವ್ಯತ್ಯಾಸ ಉಂಟಾಗಿದ್ದು, ಅದನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ. ಅಗರ ಎಸ್.ಟಿ.ಪಿ ಘಟಕದ ಸಾಮರ್ಥ್ಯ 35 ಎಂ.ಎಲ್‌ಡಿ ಇದ್ದರೂ ಕೇವಲ 25 ಎಂ.ಎಲ್.ಡಿ ನೀರನ್ನು ಸಂಸ್ಕರಿಸುತ್ತಿದೆ. ಪರಿಶೀಲನೆ ವೇಳೆಯಲ್ಲಿ ಸಂಸ್ಕರಿತ ನೀರೂ ಸಹ ಚರಂಡಿಗೆ ಸೇರುತ್ತಿರುವುದನ್ನು ಗಮನಿಸಿದ್ದು, ತಕ್ಷಣವೇ ಇದನ್ನು ಸರಿಪಡಿಸಿ, ನೇರವಾಗಿ ಕೆರೆಗಳಿಗೆ ಹರಿಸಬೇಕೆಂದು ಈಗಾಗಲೇ ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದರು.
ಮಡಿವಾಳ ಕೆರೆಗೆ ಹೊಂದಿಕೊಂಡಂತೆ ಇರುವ 4 ಎಂ.ಎಲ್.ಡಿ ಎಸ್.ಟಿ.ಪಿ ಘಟಕ ಕಾರ್ಯಾರಂಭ ಮಾಡಿಲ್ಲ. 4-5 ತಿಂಗಳ ಅವಧಿಯಲ್ಲಿ ಅದು ಕೂಡ ಸಂಪೂರ್ಣವಾಗಿ ಕಾಮಗಾರಿ ಮುಗಿಸಲು ಸೂಚಿಸಲಾಗಿದೆ ಎಂದರು.