ಬೆಂಗಳೂರು, (www.thenewzmirror.com ):
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ಸ್ವತ್ತನ್ನು ಮರು ವಶ ಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಕಳೆದ ಮೂರು ದಿನಗಳಲ್ಲಿ ಎರಡು ಪ್ರಮುಖ ಬಡಾವಣೆಗಳಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.
ಮಂಗಳವಾರ ಬೆಳಗ್ಗೆ ರಾಜಾಜಿನಗರ 6 ನೇ ಹಂತದಲ್ಲಿ ಪ್ರಸನ್ನ ಚಿತ್ರಮಂದಿರದ ಬಳಿ 2 ಎಕರೆ 20 ಗುಂಟೆ ಬಿಡಿಎ ಜಾಗದಲ್ಲಿ ಅತಿಕ್ರಮವಾಗಿ 5 ತಾತ್ಕಾಲಿಕ ಶೆಡ್ ಗಳು ಮತ್ತು 1 ಗ್ಯಾರೇಜ್ ಅನ್ನು ನಿರ್ಮಾಣ ಮಾಡಲಾಗಿತ್ತು. ಹಲವು ಬಾರಿ ನೊಟೀಸ್ ನೀಡಿದ್ದರೂ ಅತಿಕ್ರಮ ತೆರವು ಮಾಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಮಾರ್ಗದರ್ಶನದಲ್ಲಿ ಬಿಡಿಎ ಪೊಲೀಸ್ ವರಿಷ್ಠಾಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದಲ್ಲಿ ಐದಕ್ಕೂ ಹೆಚ್ಚು ಜೆಸಿಬಿಗಳು ಮತ್ತು ಐವತ್ತಕ್ಕೂ ಹೆಚ್ಚು ಸಿಬ್ಬಂದಿಯಿಂದ ಅತಿಕ್ರಮವಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್ ಗಳು ಮತ್ತು ಗ್ಯಾರೇಜ್ ಅನ್ನು ತೆರವುಗೊಳಿಸಲಾಯಿತು.
ವಿಜಯನಗರ ಅತ್ತಿಗುಪ್ಪೆಯ ಕೆಂಪಾಪುರ ಅಗ್ರಹಾರದಲ್ಲಿ ಬಿಡಿಎಗೆ ಸೇರಿದ ಸರ್ವೇ ನಂಬರ್ 329/3 ರಲ್ಲಿ ಅತಿಕ್ರಮವಾಗಿ ನಿರ್ಮಾಣವಾಗಿದ್ದ ಪೆಟ್ರೋಲ್ ಬಂಕ್ ಮತ್ತು ಖಾಲಿ ಜಾಗ ಸೇರಿ ಒಟ್ಟು 1 ಎಕರೆ 9 ಗುಂಟೆ ಜಾಗವನ್ನು ವಶಪಡಿಸಿಕೊಳ್ಳಲಾಗಿದೆ.
ಭೂಮಾಲೀಕರು ಹೈಕೋರ್ಟ್ ನಲ್ಲಿ ದಾವೆ ಸಲ್ಲಿಸಿದರು.
ನ್ಯಾಯಾಲಯದಲ್ಲಿ ಅವರ ಪರವಾಗಿ ನೀಡಲಾಗಿದ್ದ ತೀರ್ಪನ್ನು ಪ್ರಶ್ನಿಸಿ ಬಿಡಿಎ ಮೇಲ್ಮನವಿ ಹೋಗಿತ್ತು. ಇದರ ವಿಚಾರಣೆಯನ್ನು ನಡೆಸಿದ ನ್ಯಾಯಾಲಯವು ಬಿಡಿಎ ಪರ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಬಿಡಿಎ ಅಧಿಕಾರಿಗಳು ಸದರಿ ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ನೂರಾರು ಕೋಟಿ ರೂಪಾಯಿ ಮೌಲ್ಯದ ನಮ್ಮ ಆಸ್ತಿಯನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳುವಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮ ಹಾಕಿದ್ದಾರೆ. ಬಿಡಿಎ ಆಸ್ತಿಯೆಂದರೆ ಅದು ಸಾರ್ವಜನಿಕರ ಆಸ್ತಿಯಾಗಿರುತ್ತದೆ. ಈ ಆಸ್ತಿಯನ್ನು ಉಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.