ಬೆಂಗಳೂರು,(www.thenewzmirror.com) ;
ಬಸ್ಸುಗಳ ಅಪಘಾತಗಳನ್ನು ನಿಯಂತ್ರಿಸಲು ನಿಗಮದ ಚಾಲನಾ ಸಿಬ್ಬಂದಿಗಳೊಂದಿಗೆ ಸಮಾಲೋಚನೆ, ಸಂವಾದ ಮತ್ತು ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
KSRTC ಕೇಂದ್ರ ಕಛೇರಿಯಲ್ಲಿ ʼಬಸ್ ಅಪಘಾತʼ ನಿಯಂತ್ರಿಸಲು ʼಚಾಲನಾ ಸಿಬ್ಬಂದಿʼಗಳಿಗೆ ಸಮಾಲೋಚನೆ, ಸಂವಾದ ಹಾಗೂ ಜಾಗೃತಿ ಕಾರ್ಯಾಗಾರದಲ್ಲಿ ಸುಮಾರು 35 ಮಂದಿ ಅಪಘಾತದಲ್ಲಿ ಭಾಗಿಯಾದಂತಹ ಚಾಲನಾ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಕಾರ್ಯಾಗಾರದಲ್ಲಿ ಅಪಘಾತ ಮಾಡಿರುವ ಚಾಲನಾ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್, ತಾವು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಾಗೂ ಸಲಹೆಗಳನ್ನು ವ್ಯಕ್ತಪಡಿಸಬಹುದೆಂದು ಸದರಿ ಕಾರ್ಯಾಗಾರವು ತಮ್ಮ ದೋಷ ಸರಿಪಡಿಸಿಕೊಳ್ಳಲು ಹಾಗೂ ನಿಗಮವು ಮುಂದಿನ ದಿನಗಳಲ್ಲಿ ಅಪಘಾತಗಳನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಒಂದು ಬಸ್ ಅಪಘಾತಕ್ಕೀಡಾದಲ್ಲಿ, ಬಸ್ಸಿನಲ್ಲಿರುವ ಪ್ರಯಾಣಿಕರಾಗಲಿ, ಇತರೆ ವಾಹನದ ಸವಾರ/ಪ್ರಯಾಣಿಕರುಗಳಿಗೆ ಉಂಟಾಗುವ ಸಾವು-ನೋವುಗಳ ಕುರಿತು ನಾವು ಚಿಂತಿಸಬೇಕು. ಕೆಲವರು ಶಾಶ್ವತವಾಗಿ ಅಂಗವೈಕಲ್ಯರಾಗುತ್ತಿದ್ದು, ಅವರ ಅವಲಂಬಿತರು ವಾರಸುದಾರರಿಲ್ಲದೆ ಜೀವ ಕಳೆಯುವಂತಾಗುವುದು ನಿಜಕ್ಕೂ ನೋವಿನ ಸಂಗತಿ ಹಾಗೂ ಭರಿಸಲಾಗದ ನಷ್ಟ. ಅವರ ಕುಟುಂಬದವರು ಮುಂದಿನ ಜೀವನ ನಡೆಸುವುದು ಬಹಳ ಕಷ್ಟಕರವಾಗುತ್ತಿದೆ.
ಅಪಘಾತ ಅಪಘಾತವೇ ಅದನ್ನು ಯಾರು ಬೇಕೆಂದು ಮಾಡದೇ ಇದ್ದರೂ ಸಹ, ಅಪಘಾತಗಳನ್ನು ನಿಯಂತ್ರಿಸಲೇಬೇಕು. ಅಪಘಾತಗಳ ಪ್ರಮಾಣವನ್ನು ಅವಲೋಕಿಸಿದಾಗ, ಶೇ.39 ರಷ್ಟು ಅಪಘಾತ 40 ರಿಂದ 50 ವರ್ಷ ವಯೋಮಾನದ ಚಾಲಕರಿಂದ ಸಂಭವಿಸಿರುತ್ತದೆ. ಶೇ.23 ರಷ್ಟು ಅಪಘಾತಗಳು 36 ರಿಂದ 40 ವರ್ಷದ ವಯಸ್ಸಿನ ಚಾಲಕರಿಂದ ಸಂಭವಿಸಿರುತ್ತದೆ. ಸಾವು-ನೋವುಗಳ ಪ್ರಮಾಣವನ್ನು ಅವಲೋಕಿಸಿದಾಗ 44% ಅಪಘಾತಗಳು ದ್ವಿಚಕ್ರ ವಾಹನಗಳು ಮತ್ತು 19% ಪಾದಚಾರಿಗಳು, ಶೇ.27 ರಷ್ಟು ಅಪಘಾತಗಳು ಮಧ್ಯಾಹ್ನದ ಅವಧಿಯಲ್ಲಿ (13.00 ರಿಂದ 17.00) ಸಂಭವಿಸುತ್ತಿರುವುದು ವರದಿಯಿಂದ ತಿಳಿದು ಬಂದಿರುತ್ತದೆ.
ಅಪಘಾತಕ್ಕೆ ಪ್ರಮುಖ ಕಾರಣವೆಂದರೆ, ಪಾದಚಾರಿಗಳು ಮತ್ತು ದ್ವಿಚಕ್ರ ವಾಹನಗಳ ಸವಾರರು, ವಾಹನ ಚಾಲನೆ ಮಾಡುವಾಗ, ಮೊಬೈಲ್ನಲ್ಲಿ ಮಾತನಾಡುವುದು, ಏಕಾ-ಏಕಿ ಯಾವುದೇ ಸೂಚನೆಯನ್ನು ನೀಡದೆ ಅಡ್ಡ ರಸ್ತೆಯಿಂದ ಮುಖ್ಯ ರಸ್ತೆಗೆ ಬರುವುದು, ಹೆಚ್ಚಿನ ಸಮಯದಲ್ಲಿ ಸಂಚಾರ ನಿಯಮವನ್ನು ಉಲ್ಲಂಘಿಸಿರುವುದರಿಂದ ಆಗಿದ್ದರೂ ಸಹ, ರಸ್ತೆ ದಾಟುವಾಗ, ಎದುರು ಬರುವ ವಾಹನಗಳ ಬಗ್ಗೆ ನಿರ್ಲಕ್ಷ್ಯತನ, ವೇಗವನ್ನು ಕಡಿತಗೊಳಿಸದೇ ಇರುವುದರಿಂದ ಅಪಘಾತವು ಸಂಭವಿಸುತ್ತಿರುವುದು ಸದರಿ ಕಾರ್ಯಗಾರದಿಂದ ಧೃಡಪಟ್ಟಿರುತ್ತದೆ.
ಅಪಘಾತಗಳನ್ನು ಕಡಿಮೆಗೊಳಿಸುವುದು ಅನಿವಾರ್ಯವಾಗಿದ್ದು, ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ WRI (World Resource Institute) ರವರಿಗೆ ಈ ಬಗ್ಗೆ ಅಧ್ಯಯನ ನಡೆಸಿ, ವರದಿಯನ್ನು ನೀಡುವಂತೆ ತಿಳಿಸಲಾಗಿದೆ.