ನವದೆಹಲಿ(www.thenewzmirror.com): ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆ ಯೋಜನೆ ಪಿಎಂ ಇ-ಡ್ರೈವ್ ಅಡಿಯಲ್ಲಿ ಮೊದಲ ಹಂತದಲ್ಲಿಯೇ ರಾಷ್ಟ್ರದ ಐದು ಪ್ರಮುಖ ನಗರಗಳಿಗೆ 10,900 ಎಲೆಕ್ಟ್ರಿಕ್ ಬಸ್ ಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಈ ಪೈಕಿ ಬೆಂಗಳೂರು ನಗರಕ್ಕೆ 4500 ಬಸ್ ಗಳನ್ನು ಹಂಚಿಕೆ ಮಾಡುವ ಭರವಸೆ ನೀಡಲಾಗಿದೆ ಎಂದು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ನವದೆಹಲಿಯ ಬೃಹತ್ ಕೈಗಾರಿಕೆ ಸಚಿವಾಲಯದಲ್ಲಿ ಎಲೆಕ್ಟ್ರಿಕ್ ಬಸ್ ಹಂಚಿಕೆಯ ಸಂಬಂಧ ಕರ್ನಾಟಕ, ತೆಲಂಗಾಣ, ಗುಜರಾತ್ ಹಾಗೂ ದೆಹಲಿ ರಾಜ್ಯಗಳ ಅಧಿಕಾರಿಗಳ ಜತೆ ಕೇಂದ್ರ ಸಚಿವರು ಸಭೆ ನಡೆಸಿದರು.ಎಲೆಕ್ಟ್ರಿಕ್ ಬಸ್ ಗಳ ಬಳಕೆ ಹಾಗೂ ಅವುಗಳ ನಿರ್ವಹಣೆಗೆ ಅಗತ್ಯವಾದ ಪೂರಕ ಮೂಲಸೌಕರ್ಯವನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವರು; ಮಾಲಿನ್ಯರಹಿತ ಸಮೂಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ರಾಷ್ಟ್ರೀಯ ಅಗತ್ಯ ಎಂದು ಪ್ರತಿಪಾದಿಸಿದರು.ಬಸ್ ಹಂಚಿಕೆಯಲ್ಲಿ ಬೇಡಿಕೆ, ಜನಸಂಖ್ಯೆ ಹಾಗೂ ಹಳೆಯ ಬಸ್ ಗಳ ವಿಲೇವಾರಿ ಅಂಶಗಳನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕಕ್ಕೆ 4500 ಬಸ್ ಹಂಚಿಕೆ:
ಕರ್ನಾಟಕದ ಪರವಾಗಿ ಸಭೆಯಲ್ಲಿ ಹಾಜರಿದ್ದ ಸರಿಗೆ ಇಲಾಖೆಯ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಾಗಿ (BMTC) 7,000 ಎಲೆಕ್ಟ್ರಿಕ್ ಬಸ್ ಗಳಿಗೆ ಬೇಡಿಕೆ ಸಲ್ಲಿಸಿದರು. ಕೆಲ ದಿನಗಳ ಹಿಂದೆ ನವದೆಹಲಿಯಲ್ಲಿ ಸಚಿವರನ್ನು ಭೇಟಿಯಾಗಿದ್ದ ರಾಜ್ಯದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಕೂಡ ಇಷ್ಟೇ ಸಂಖ್ಯೆಯ ಬಸ್ ಗಳಿಗೆ ಬೇಡಿಕೆ ಸಲ್ಲಿಸಿದರು.ಈ ಬೇಡಿಕೆ ಹಾಗೂ ಜನಸಂಖ್ಯೆಯನ್ನು ಪರಿಗಣಿಸಿ ಮೊದಲ ಹಂತದಲ್ಲಿಯೇ ಬಿಎಂಟಿಸಿಗೆ 4,500 ಬಸ್ ಗಳನ್ನು ಒದಗಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದರು. ದೇಶದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರಕ್ಕೆ ಅತ್ಯಧಿಕ ಬಸ್ ಗಳನ್ನು ಹಂಚಿಕೆ ಮಾಡುವ ಭರವಸೆಯನ್ನು ಅವರು ನೀಡಿದರು.
ಉಳಿದಂತೆ ದೆಹಲಿ ಸಾರಿಗೆ ಸಂಸ್ಥೆ 2800 ಬಸ್ ಗಳಿಗೆ ಬೇಡಿಕೆ ಇಟ್ಟಿದ್ದು, ಅಷ್ಟೂ ಬಸ್ ಗಳನ್ನು ಒದಗಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದರು. ದೇಶದ ಇತರೆ ನಗರಗಳಿಗೆ ಹೋಲಿಸಿದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನಸಂಖ್ಯೆ ಅಧಿಕವಾಗಿದೆ. ಜತೆಗೆ ಇನ್ನೂ ಕೆಲ ಅಂಶಗಳನ್ನು ಪರಿಗಣಿಸಿ ಬೇಡಿಕೆ ಇಟ್ಟಿರುವಷ್ಟೂ ಸಂಖ್ಯೆಯ ಬಸ್ ಗಳನ್ನು ಹಂಚಿಕೆ ಮಾಡುವಂತೆ ಕೇಂದ್ರ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಳಿದಂತೆ ಸೂರತ್ ನಗರ ಸಾರಿಗೆ ಸಂಸ್ಥೆ 600 ಬಸ್ ಗಳಿಗೆ ಬೇಡಿಕೆ ಇಟ್ಟಿದ್ದು, ಅಷ್ಟೂ ಬಸ್ ಗಳನ್ನು ಹಂಚಿಕೆ ಮಾಡುವ ಭರವಸೆ ನೀಡಲಾಗಿದೆ. ಅಹಮದಾಬಾದ್ ನಗರಕ್ಕೆ 1000 ಬಸ್ ಗಳನ್ನು ಕೇಳಲಾಗಿದ್ದು, ಅಷ್ಟೂ ಬಸ್ ಗಳನ್ನೂ ಹಂಚಿಕೆ ಮಾಡುವುದಕ್ಕೆ ಸಚಿವರು ಒಪ್ಪಿಗೆ ನೀಡಿದರು.
ತೆಲಂಗಾಣದ ರಾಜಧಾನಿ ಹೈದರಾಬಾದ್ ನಗರ ಸಾರಿಗೆ ಸಂಸ್ಥೆ 2800 ವಿದ್ಯುತ್ ಚಾಲಿತ ಬಸ್ ಗಳಿಗೆ ಬೇಡಿಕೆ ಇಟ್ಟಿತ್ತು, ಆ ಪೈಕಿ 2000 ಬಸ್ ಗಳನ್ನು ಹಂಚಿಕೆ ಮಾಡುವ ಬಗ್ಗೆ ಸಚಿವರು ಭರವಸೆ ನೀಡಿದರು.
ಒಟ್ಟಾರೆಯಾಗಿ ಐದೂ ನಗರಗಳಿಂದ 14,200 ಬಸ್ ಗಳಿಗೆ ಬೇಡಿಕೆ ಬಂದಿತ್ತು. ಆ ಪೈಕಿ 10,900 ಬಸ್ ಗಳನ್ನು ಮೊದಲ ಹಂತದಲ್ಲಿ ಹಂಚಿಕೆ ಮಾಡಲಾಗುತ್ತಿದೆ ಎಂದ ಕೇಂದ್ರ ಸಚಿವರು; ಎಲೆಕ್ಟ್ರಿಕ್ ಬಸ್ ಗಳನ್ನು ಹಂಚಿಕೆ ಮಾಡುವ ಮುನ್ನ ಐದೂ ನಗರಗಳ ಸಾರಿಗೆ ಸಂಸ್ಥೆಗಳು ಡಿಪೋಗಳಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದು ಸೇರಿದಂತೆ ಅಗತ್ಯವಾದ ಮೂಲಸೌಕರ್ಯವನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಡಿಪೋಗಳನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಅಗತ್ಯವಾದರೆ ಹೊಸ ಡಿಪೋಗಳನ್ನು ಸ್ಥಾಪಿಸುವ ಬಗ್ಗೆ ತ್ವರಿತಗತಿಯಲ್ಲಿ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾಲಿನ್ಯರಹಿತ ಸಮೂಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುವುದು ರಾಷ್ಟ್ರೀಯ ಅಗತ್ಯ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ಹೆಚ್ಚು ಒತ್ತು ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಗುರಿ ಸಾಧಿಸುತ್ತೇವೆ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.