ಗದಗ(www.thenewzmirror.com): ಅಭಿವೃದ್ಧಿಯ ಸುತ್ತ ಜನ ಓಡಾಡಬಾರದು, ಜನರ ಸುತ್ತ ಅಭಿವೃದ್ಧಿ ಆಗಬೇಕು. ಎಲ್ಲಿ ಜನ ವಾಸವಾಗಿದ್ದಾರೊ ಅಲ್ಲಿ ಅಭಿವೃದ್ಧಿ ಆಗಬೇಕು,ಗ್ರಾಮಗಳ ಅಭಿವೃದ್ಧಿ ಮಾಡದೇ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ 10 ಲಕ್ಷ ರೂಗಳ ವೆಚ್ಚದಲ್ಲಿ ಲೋಕಸಭಾ ಸದಸ್ಯರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ನಿರ್ಮಿಸಲಾಗುತ್ತಿರುವ ಗ್ರಾಮದೇವಿ ಸಮುದಾಯ ಭವನದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆಯನ್ನು ನೆರವೇರಿಸಿ ಮಾತನಾಡಿದ ಅವರು, ಡಿಸಿ ಕಚೇರಿ ಸುತ್ತ ಅಭಿವೃದ್ಧಿ ಆಗುವುದಲ್ಲ. ಭಾರತ ಗ್ರಾಮಗಳಿಂದ ಕೂಡಿದ ದೇಶ, ಮಹಾತ್ಮಾ ಗಾಂಧೀಜಿಯವರು ಗ್ರಾಮ ಸ್ವರಾಜ್ಯ, ರಾಮರಾಜ್ಯದ ಬಗ್ಗೆ ಮಾತನಾಡಿದ್ದಾರೆ. ಆದರೆ, ಎಲ್ಲೋ ಒಂದು ಕಡೆ ನಾವು ಮರೆತಂತೆ ಕಾಣಿಸುತ್ತದೆ. ಗ್ರಾಮಗಳ ಅಭಿವೃದ್ಧಿ ಮಾಡದೇ ಈ ದೇಶ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಕೃಷಿ ಅಭಿವೃದ್ಧಿ ಆದರೆ ಆಹಾರದ ಸುರಕ್ಷತೆ ಆಗುತ್ತದೆ. ಆಹಾರದ ಸುರಕ್ಷತೆ ಯಾವ ದೇಶಕ್ಕಿದೆಯೋ ಅದು ಸ್ವಾವಲಂಬನೆಯ ಸ್ವಾಭಿಮಾನದ ದೇಶ ಆಗುತ್ತದೆ. ಇಲ್ಲಿದಿದ್ದರೆ ಇನ್ನೊಬ್ಬರ ಮುಂದೆ ಕೈ ಒಡ್ಡುವ ದೇಶ ಆಗುತ್ತದೆ. ಈ ದೇಶವನ್ನು ಸ್ವಾವಲಂಬನೆಯ ಸ್ವಾಭಿಮಾನಿ ದೇಶ ಮಾಡಿರುವುದು ರೈತ. ಕೃಷಿ ಅಭಿವೃದ್ಧಿ ಆಗಿದೆ. ಆದರೆ, ರೈತ ಅಭಿವೃದ್ಧಿ ಆಗಿಲ್ಲ. ಎಲ್ಲರಿಗೂ ಆಹಾರದ ಭದ್ರತೆ ಇದೆ. ಆದರೆ, ಆಹಾರ ಬೆಳೆದಿರುವ ರೈತನ ಪರಿಸ್ಥಿತಿ ಸೋಚನೀಯವಾಗಿದೆ. ರೈತರಮನೆಯಲ್ಲಿ ಯಾರಿಗಾದರೂ ಆರೋಗ್ಯ ತಪ್ಪಿದರೆ, ಮದುವೆ ಮಾಡಿದರೆ ಸಾಲ ಹೆಚ್ಚಾಗುತ್ತದೆ. ಅದಕ್ಕೆ ನಾನು ಬ್ಯಾಂಕರ್ಸ್ ಮೀಟಿಂಗ್ ನಲ್ಲಿ ಹೇಳಿದ್ದೇನೆ. ಅತಿ ಹೆಚ್ಚು ಬಂಡವಾಳ ಹೂಡಿಕೆ ಆಗುವುದು ಕೃಷಿ ವಲಯದಲ್ಲಿ, ಕೃಷಿ ಆದಾಯ ಹೆಚ್ಚಾಗಿ ರೈತನ ಆರ್ಥಿಕ ಸ್ಥಿತಿ ಸುಧಾರಣೆ ಆದಾಗ ಅವನ ಕೈಯಲ್ಲಿ ದುಡ್ಡಿದ್ದರೆ ಹೆಚ್ಚು ಖರ್ಚು ಮಾಡುತ್ತಾನೆ. ಸರ್ಕಾರಕ್ಕೆ ಅದಾಯ ಹೆಚ್ಚಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದ ಪ್ರತಿಯೊಂದು ವಸ್ತುವಿನ ಬೆಲೆಯೂ ಹೆಚ್ಚಾಗಿದೆ. ರೈತರಿಗೆ ನೀಡುವ ಬೀಜ, ಗೊಬ್ಬರದ ಬೆಲೆ ಹೆಚ್ಚಾಗಿದೆ. ಕರ್ನಾಟಕದಲ್ಲಿ ಡಿಸೇಲ್, ಪೆಟ್ರೊಲ್ ಬಳಕೆ ಮಾಡುವ ರೈತರ ಖರ್ಚು ಹೆಚ್ಚಾಗಿದೆ. ಗಾಡಿಗೆ ಹಾಕುವ ಎಣ್ಣೆ ಹಾಗೂ ಸಂಜೆ ಹಾಕುವ ಎಣ್ಣೆಯ ದರವೂ ಹೆಚ್ಚಾಗಿದೆ. ಹೀಗಾಗಿ ಗ್ರಾಮೀಣ ಜನತೆ ಸಾಲದ ಸೂಲದಲ್ಲಿ ಸಿಲುಕುವಂತೆ ಆಗಿದೆ. ಇದು ಬದಲಾವಣೆ ಆಗಬೇಕು. ಅಂದಾಗ ಮಾತ್ರ ಈ ದೇಶಕ್ಕೆ ನಾಡಿಗೆ ಭವಿಷ್ಯ ಇದೆ. ಆ ಕೆಲಸವನ್ನು ಪ್ರಾಮಾಣಿಕವಾಗಿ ಕೆಲಸ ಮಾಡುವ ವ್ಯಕ್ತಿಗಳ ಕೈಯಲ್ಲಿ ಅಧಿಕಾರ ಸಿಕ್ಕಾಗ ಮಾತ್ರ ಮಾಡಲು ಸಾಧ್ಯ ಎಂದು ಹೇಳಿದರು.