ಶಿವಮೊಗ್ಗ(www.thenewzmirror.com): ಜಿಲ್ಲೆಯ ಬಹು ನಿರೀಕ್ಷಿತ ಸಿಗಂದೂರು ಸೇತುವೆ ಲೋಕಾರ್ಪಣೆಗೊಳ್ಳಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿದ ಸಂಸದ ಬಿವೈ ರಾಘವೇಂದ್ರ ನೇತೃತ್ವದ ತಂಡ ಸಂಪೂರ್ಣ ಸೇತುವೆ ಪರಿವೀಕ್ಷಣೆ ನಡೆಸಿತು.

ಸಾಗರ ತಾಲ್ಲೂಕು ಕಳಸವಳ್ಳಿ – ಅಂಬಾರಗೊಡ್ಲು ಮಾರ್ಗದ ನಡುವೆ ಶರಾವತಿ ಹಿನ್ನೀರಿನ ಪ್ರದೇಶದಲ್ಲಿ ನಿರ್ಮಾಣ ಮಾಡಿರುವ ಐತಿಹಾಸಿಕ ಕೇಬಲ್ ಆಧಾರಿತ ಸಿಗಂದೂರು ಸೇತುವೆ ಕಾಮಗಾರಿ ಮುಕ್ತಾಯಗೊಂಡು ಸಾರ್ವಜನಿಕ ಬಳಕೆಗೆ ಲೋಕಾರ್ಪಣೆಗೊಳ್ಳಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದ್ದು, ಇಂದು ಸ್ಥಳಕ್ಕೆ ಭೇಟಿ ನೀಡಿ ಸಂಸದರ ನೇತೃತ್ವದ ತಂಡದಿಂದ ಸಂಪೂರ್ಣ ಸೇತುವೆ ಪರಿವೀಕ್ಷಣೆ ನಡೆಸಲಾಯಿತು.
ಇದಕ್ಕೂ ಮುನ್ನ ನಾಡಿನ ಇತಿಹಾಸ ಪ್ರಸಿದ್ಧ ಶಕ್ತಿ ಕೇಂದ್ರಗಳಲ್ಲಿ ಒಂದಾದ ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ಸನ್ನಿಧಾನಕ್ಕೆ ಪಕ್ಷದ ಪ್ರಮುಖರೊಂದಿಗೆ ಭೇಟಿ ನೀಡಿ ಯಾವುದೇ ಅಡೆತಡೆಗಳಿಲ್ಲದೆ ನಿರ್ವಿಘ್ನವಾಗಿ ಸಾಗಲು ಶಕ್ತಿ ನೀಡಿದ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಲಾಯಿತು.
ಮಲೆನಾಡ ಹಚ್ಚ ಹಸಿರಿನ ರಾಜಧಾನಿ ಶಿವಮೊಗ್ಗ ಜಿಲ್ಲೆ ಹಲವಾರು ವಿಶೇಷತೆಗಳಿಂದ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಅಂಬಾರಗೋಡ್ಲು – ಕಳಸವಳ್ಳಿ ನಡುವೆ ಸಾಗುವ ಹಾದಿಗೆ ನಿರ್ಮಾಣ ಮಾಡಿರುವ ಈ ಸಿಗಂದೂರು ಸೇತುವೆ ಒಂದು ಹೊಸ ಮೈಲಿಗಲ್ಲು ಎಂದು ದಾಖಲೆ ಬರೆದಿದೆ.
ನವನವೀನ ತಂತ್ರಜ್ಞಾನ ಹಾಗೂ ಆಧುನಿಕ ತಾಂತ್ರಿಕ ವ್ಯವಸ್ಥೆಯಿಂದ ಅತ್ಯಂತ ಅಚ್ಚುಕಟ್ಟಾಗಿ ಸುಮಾರು 430.00 ಕೋಟಿ ಅನುದಾನದಲ್ಲಿ ರಾಜ್ಯದ ಅತಿ ಉದ್ದದ 2.25 ಕಿ.ಮೀ ಕೇಬಲ್ ಆಧಾರಿತ ಸೇತುವೆ ಕಾಮಗಾರಿ ಸಾರ್ವಜನಿಕ ಸೇವೆಗೆ ಅಡಿ ಇಡಲು ಸಜ್ಜಾಗಿದೆ.
ಈ ಕುರಿತು ಮಾತನಾಡಿದ ಸಂಸದ ಬಿವೈ ರಾಘವೇಂದ್ರ, ಐತಿಹಾಸಿಕ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಶ್ರಮಿಸಿದವರಲ್ಲಿ ಮೊದಲಿಗರಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದ ತಿಳಿಸುತ್ತಾ, ಇದೇ ಸಂದರ್ಭದಲ್ಲಿ ಈ ಯೋಜನೆಗೆ ಸೂಕ್ತ ಅನುದಾನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಈ ಸಂದರ್ಭದಲ್ಲಿ ಅನಂತ ಅನಂತ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಈ ಒಂದು ಇತಿಹಾಸ ಪುಟಗಳಲ್ಲಿ ದಾಖಲಾಗುವಂತ ಐತಿಹಾಸಿಕ ಸೇತುವೆ ನಿರ್ಮಾಣದಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಮೆರುಗು ದೊರೆಯುತ್ತದೆ. ಜೊತೆಗೆ ವ್ಯಾವಹಾರಿಕವಾಗಿ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸದೃಢವಾಗುತ್ತದೆ. ಈ ಮೂಲಕ ಹೊಸ ರೀತಿಯ ಸಾಮಾಜಿಕ ಬದಲಾವಣೆಗೆ ಮುನ್ನುಡಿ ಬರೆಯುತ್ತದೆ ಎಂಬ ವಿಶ್ವಾಸ ಬಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ, ಜಿಲ್ಲಾಧ್ಯಕ್ಷ ಜಗದೀಶ್, ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ, ಮುಖಂಡರಾದ ಮೇಘರಾಜ್ ಅವರು ಸೇರಿದಂತೆ ಅನೇಕ ಪಕ್ಷದ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದರು.