ಬೆಂಗಳೂರು(www.thenewzmirror.com):ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಕ್ಷದ ಶಾಸಕರ ವಿಶ್ವಾಸವನ್ನೂ ಕಳಕೊಂಡಿದ್ದಾರೆ. ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಹೆಚ್ಚಾಗಿದ್ದು,ಕುದುರೆ ವ್ಯಾಪಾರದ ಬಗ್ಗೆ ರಾಜ್ಯಪಾಲರು ಗಮನಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ವಿನಂತಿಸಿದರು
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರ್ಜೇವಾಲಾ ಅವರು ಕರ್ನಾಟಕದಲ್ಲಿ ಬೀಡುಬಿಟ್ಟಿದ್ದಾರೆ. ಸುರ್ಜೇವಾಲಾ ಅವರು ಶಾಸಕರ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಸಿದ್ದರಾಮಯ್ಯನವರ ರಾಜೀನಾಮೆ ತೆಗೆದುಕೊಳ್ಳಲು ಒಂದು ಭೂಮಿಕೆ ಸಿದ್ಧಪಡಿಸುವುದಕ್ಕೇ ಅವರು ಕರ್ನಾಟಕಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಹೆಚ್ಚಾಗಿದ್ದು, ಕುದುರೆ ವ್ಯಾಪಾರ ಜೋರಾಗಲಿದೆ ಎಂದು ವಿಶ್ಲೇಷಿಸಿದರು.
ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಅವರು ಡಿಕೆಶಿಯವರಿಗೆ 100 ಜನ ಶಾಸಕರ ಬೆಂಬಲ ಇದೆ; ಅವರು ಮುಖ್ಯಮಂತ್ರಿ ಆಗಬೇಕು ಎಂದಿದ್ದಾರೆ. ಕಾಂಗ್ರೆಸ್ಸಿನ ಹಿರಿಯ ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆಯವರು ಸೇರಿ ಬೇರೆ ಬೇರೆ ಶಾಸಕರು ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಮುಖ್ಯಮಂತ್ರಿಗಳು ಅವರ ಪಕ್ಷದ ಶಾಸಕರ ವಿಶ್ವಾಸವನ್ನೂ ಕಳಕೊಂಡಿದ್ದಾರೆ. ಕುದುರೆ ವ್ಯಾಪಾರದ ಬಗ್ಗೆ ರಾಜ್ಯಪಾಲರೂ ಗಮನಿಸಬೇಕು ಎಂದು ವಿನಂತಿಸಿದರು.
ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ದಿನೇದಿನೇ ಹೆಚ್ಚಳ:
ರಾಜ್ಯದಲ್ಲಿ ಪರಿಸ್ಥಿತಿ ದಿನೇದಿನೇ ಕೈಮೀರಿ ಹೋಗುತ್ತಿದೆ. ಆಡಳಿತ ಯಂತ್ರವು ಸಂಪೂರ್ಣವಾಗಿ ಕುಸಿದುಬಿದ್ದಿದೆ. ಆಡಳಿತ ಪಕ್ಷದಲ್ಲಿ ಶಾಸಕರ ನಡುವೆ ಪೈಪೋಟಿ ಆರಂಭವಾಗಿದೆ. ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ದಿನೇದಿನೇ ಹೆಚ್ಚಾಗಿದೆ ಎಂದು ವಿಶ್ಲೇಷಿಸಿದರು.
ಇದರ ಪರಿಣಾಮವಾಗಿ ಅಭಿವೃದ್ಧಿ ಕೆಲಸಕಾರ್ಯಗಳು ಏನೂ ನಡೆಯುತ್ತಿಲ್ಲ. ರಾಜ್ಯ ಸರಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್ ಸರಕಾರವು ದಿನಬಳಕೆ ವಸ್ತುಗಳ ಮೇಲೆ ಸತತ ಬೆಲೆ ಏರಿಸಿದ್ದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದ್ದು, ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿದರು.
ರೈತರ ಆತ್ಮಹತ್ಯೆಗಳು, ಅಧಿಕಾರಿಗಳ ಆತ್ಮಹತ್ಯೆಗಳು, ಜೊತೆಗೇ ಗುತ್ತಿಗೆದಾರರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ರಾಜ್ಯದಲ್ಲಿ ನಿರಂತರವಾಗಿ ನಡೆದಿದೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ. ಆಡಳಿತ ಪಕ್ಷದ ಶಾಸಕರೇ ಇದನ್ನು ಒಪ್ಪಿಕೊಂಡಿದ್ದಾರೆ ಎಂದರು.
ಹಾಸನ ಜಿಲ್ಲೆಗೆ ಮಾತ್ರ ಕೋವಿಡ್ ಲಸಿಕೆ ಕೊಡಲಾಗಿದೆಯೇ?
ಹೃದಯಾಘಾತದಿಂದ ಹಾಸನ ಜಿಲ್ಲೆಯಲ್ಲಿ 35- 40 ಜನರು ಸತ್ತಿದ್ದು, ಕೋವಿಡ್ ಲಸಿಕೆ ಕಾರಣ ಎಂಬ ಮುಖ್ಯಮಂತ್ರಿಗಳ ಆರೋಪಕ್ಕೆ ಉತ್ತರಿಸಿದ ಅವರು, ಹಾಸನ ಜಿಲ್ಲೆಗೆ ಮಾತ್ರ ಕೋವಿಡ್ ಲಸಿಕೆ ಕೊಡಲಾಗಿದೆಯೇ? ದೇಶದ ಕೋಟ್ಯಂತರ ಜನರಿಗೆ, ಜಗತ್ತಿನ ಬೇರೆ ಬೇರೆ ರಾಷ್ಟ್ರಗಳಿಗೂ ಕೋವಿಡ್ ಲಸಿಕೆ ರಫ್ತು ಮಾಡಿದ್ದಾರೆ. ಹಾಸನದ ಸಾವುಗಳ ಸಂಬಂಧ ರಾಜ್ಯ ಸರಕಾರ ಎಚ್ಚತ್ತುಕೊಂಡು ಸಮರ್ಪಕ ತನಿಖೆ ನಡೆಸಬೇಕಿದೆ ಎಂದು ವಿಜಯೇಂದ್ರ ಅವರು ಆಗ್ರಹಿಸಿದರು.
ಇದೊಂದು ಬೇಜವಾಬ್ದಾರಿ ಹೇಳಿಕೆ ಎಂದು ಖಂಡಿಸಿದರು. ಮುಖ್ಯಮಂತ್ರಿಗಳು ತುರ್ತಾಗಿ ಸಭೆ ಕರೆದು ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಸಮರ್ಪಕ ಔಷಧಿ ಸಿದ್ಧವಾಗಿ ಇಟ್ಟುಕೊಳ್ಳುವ ಕಡೆ ಗಮನಿಸಬೇಕೆಂದು ಒತ್ತಾಯಿಸಿದರು. ಅಪಪ್ರಚಾರ ಸಲ್ಲದು ಎಂದು ತಿಳಿಸಿದರು.
ಕೇಂದ್ರದಲ್ಲಿ ಅಧಿಕಾರ, ಆರೆಸ್ಸೆಸ್ ನಿಷೇಧ- ತಿರುಕನ ಕನಸು:
ಆರೆಸ್ಸೆಸ್ ನಿಷೇಧ ಕುರಿತ ಪ್ರಿಯಾಂಕ್ ಖರ್ಗೆಯವರ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು, ಇದು ತಿರುಕನ ಕನಸು ಎಂದು ವ್ಯಂಗ್ಯವಾಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದನ್ನು ಸ್ವತಃ ನಿಮ್ಮ ತಂದೆ- ಮಲ್ಲಿಕಾರ್ಜುನ ಖರ್ಗೆಯವರೇ ನಂಬಲು ಸಾಧ್ಯವಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿಯವರೇ ನಂಬಲಸಾಧ್ಯ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಕನಸು ಪ್ರಿಯಾಂಕ್ ಖರ್ಗೆಯವರಿಗೆ ಯಾಕೆ ಬಿತ್ತು ಎಂದು ಪ್ರಶ್ನಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಒಂದು ರಾಷ್ಟ್ರಭಕ್ತ ಸಂಘಟನೆ. ಭಾರತ- ಚೀನಾದ ಜೊತೆ ಯುದ್ಧದ ವೇಳೆ ಆರೆಸ್ಸೆಸ್ ಪಾತ್ರವನ್ನು ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸ್ವಾಗತಿಸಿದ್ದರು. ಅದರ ಬಳಿಕ ರಿಪಬ್ಲಿಕ್ ಪರೇಡ್‍ನಲ್ಲಿ ಅವಕಾಶ ಕೊಡಲಾಗಿತ್ತು ಎಂದು ವಿವರಿಸಿದರು.
ನೆಹರೂ, ಇಂದಿರಾ ಗಾಂಧಿಯವರು ಆರೆಸ್ಸೆಸ್ ನಿಷೇಧಿಸಿದ್ದರು. ಕಾಡಿ ಬೇಡಿದ್ದು ನಿಷೇಧ ರದ್ದಾಯಿತೆಂಬ ಅಪ್ರಬುದ್ಧ ಹೇಳಿಕೆ ನೀಡಿದ್ದು, ಮಾಹಿತಿ ಕೊರತೆಯಿಂದ ಕೂಡಿದೆ ಎಂದು ಆಕ್ಷೇಪಿಸಿದರು.
ಬಿಜೆಪಿ ಹೋರಾಟಕ್ಕೆ ಸಂದ ಜಯ:
ವಾಲ್ಮೀಕಿ ನಿಗಮದ ಹಗರಣದ ತನಿಖೆಯನ್ನು ರಾಜ್ಯ ಹೈಕೋರ್ಟ್ ಸಿಬಿಐಗೆ ವಹಿಸಿದ್ದು ಬಿಜೆಪಿ ಹೋರಾಟಕ್ಕೆ ಸಂದ ಜಯ ಎಂದ ಅವರು, ರಾಜ್ಯ ಹೈಕೋರ್ಟ್ ನಿನ್ನೆ ಮಹತ್ವದ ತೀರ್ಪು ನೀಡಿದೆ. ವಾಲ್ಮೀಕಿ ನಿಗಮದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದು ಬಿಜೆಪಿ ಹೋರಾಟಕ್ಕೆ ಸಂದ ಜಯ; ಇದರಲ್ಲಿ ಇನ್ನೂ ಕೂಡ ದೊಡ್ಡ ತಲೆಗಳು ಉರುಳಲಿವೆ. ನ್ಯಾಯಾಲಯದ ತೀರ್ಪನ್ನು ಬಿಜೆಪಿ ಸ್ವಾಗತಿಸುತ್ತದೆ ಎಂದು ತಿಳಿಸಿದರು.
ರಾಜ್ಯದ ಪರಿಶಿಷ್ಟ ಸಮುದಾಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ನ್ಯಾಯಕ್ಕೆ ಬಳಕೆಗೆ ಮೀಸಲಿಟ್ಟ 187 ಕೋಟಿ ಹಣವನ್ನು ಪಕ್ಕದ ತೆಲಂಗಾಣದಲ್ಲಿ ಬಳಸಿಕೊಂಡ ವಾಲ್ಮೀಕಿ ನಿಗಮದ ಹಗರಣ ನಡೆದಿತ್ತು. ಸಾವಿರಾರು ಬ್ಯಾಂಕ್ ಖಾತೆಗಳನ್ನು ತೆರೆದು ಬಾರ್, ಜ್ಯುವೆಲ್ಲರಿ ಶಾಪ್, ಲೋಕಸಭಾ ಚುನಾವಣೆಗೆ ಈ ಹಣ ದುರ್ಬಳಕೆ ಆಗಿತ್ತು. ಚಂದ್ರಶೇಖರ್ ಎಂಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟಿನಲ್ಲಿ ಎಲ್ಲವನ್ನೂ ಉಲ್ಲೇಖಿಸಿದ್ದರು ಎಂದು ಗಮನ ಸೆಳೆದರು.
ಬಿಜೆಪಿ ತೀವ್ರ ಹೋರಾಟದ ಪರಿಣಾಮವಾಗಿ ಮುಖ್ಯಮಂತ್ರಿಗಳು ಅನಿವಾರ್ಯವಾಗಿ ಸಚಿವ ನಾಗೇಂದ್ರರನ್ನು ಸಂಪುಟದಿಂದ ಕೈಬಿಡಬೇಕಾಗಿ ಬಂತು. ಈಗ ಹೇಗಾದರೂ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಲು ಮುಖ್ಯಮಂತ್ರಿಗಳು ಪರದಾಡುತ್ತಿದ್ದರು. ಈ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳು ಭಾಗಿಯಾದುದು ಮಾಧ್ಯಮದವರಿಗೂ ತಿಳಿದಿದೆ ಎಂದು ವಿವರಿಸಿದರು. ಹಣಕಾಸಿನ ಇಲಾಖೆ ಅನುಮತಿ ಇಲ್ಲದೆ ಹಣ ಹೊರರಾಜ್ಯಕ್ಕೆ ಹೋಗಲು ಸಾಧ್ಯವಿರಲಿಲ್ಲ ಎಂದು ನುಡಿದರು.
ಹಿಂದೂಗಳ ಮೇಲೆ ದೌರ್ಜನ್ಯ:
ಸಿಂಧನೂರಿನಲ್ಲಿ ಹಿಂದೂ ಕಾರ್ಯಕರ್ತರನ್ನು ಬೆದರಿಸಿದ್ದಾರೆ. ಸಂಕೇಶ್ವರದಲ್ಲೂ ಶ್ರೀರಾಮಸೇನೆ ಕಾರ್ಯಕರ್ತರನ್ನು ಥಳಿಸಿದ್ದಾರೆ. ಪದೇ ಪದೇ ರಾಜ್ಯದಲ್ಲಿ ಗೋವುಗಳ ಕೆಚ್ಚಲನ್ನು ಕತ್ತರಿಸಲಾಗುತ್ತಿದೆ. ಇದರ ಬಗ್ಗೆ ರಾಜ್ಯ ಸರಕಾರ ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದರು. ಸರಕಾರದ ಪಾಪದ ಕೊಡ ತುಂಬಿದೆ; ಜನರು ನಿಮಗೆ ಶಾಪ ಹಾಕುತ್ತಿದ್ದಾರೆ. ಹಸುವಿನ ಕೆಚ್ಚಲು ಕೊಯ್ಯುವ ಘಟನಾವಳಿ ಪದೇಪದೇ ನಡೆದಿದೆ. ಭಗವಂತನೂ ಸಿದ್ದರಾಮ್ಯನವರ ಸರಕಾರಕ್ಕೆ ಒಳ್ಳೆಯದು ಮಾಡಲು ಸಾಧ್ಯವಿಲ್ಲ ಎಂದು ನುಡಿದರು. ಗೃಹ ಸಚಿವರು ಕಠಿಣ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಇದರ ಕಡೆ ಗಮನಿಸಿ ಎಂದು ಒತ್ತಾಯಿಸಿದರು.