ಬೆಂಗಳೂರು(www.thenewzmirror.com):ದೇಶ ಹಾಗೂ ರಾಜ್ಯದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಗೆ ಬುನಾದಿ ಹಾಕಿದ್ದು ಕಾಂಗ್ರೆಸ್ ಪಕ್ಷ. ಪಂಚ ಗ್ಯಾರಂಟಿಗಳ ಜೊತೆಗೆ ಈಗ ”ದೃಷ್ಟಿ ಗ್ಯಾರಂಟಿ” ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದ್ದು, “ಜನರ ಕಣ್ಣು, ದೃಷ್ಟಿಗೆ ತೊಂದರೆ ಬಂದರೆ ಚಿಕಿತ್ಸೆ ನೀಡುವ ʼದೃಷ್ಟಿ ಗ್ಯಾರಂಟಿʼಯನ್ನು ಆಶಾಕಿರಣ ಯೋಜನೆ ಮೂಲಕ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಗೋವಿಂದರಾಜನಗರದ ಎಂ.ಸಿ ಲೇಔಟ್ ನಲ್ಲಿ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ʼಆಶಾಕಿರಣ ದೃಷ್ಟಿ ಕೇಂದ್ರʼವನ್ನು ಉದ್ಘಾಟಿಸಿ ಯೋಜನೆಯ ಲಾಭ ಪಡೆದವರಿಗೆ ಉಚಿತ ಕನ್ನಡಕಗಳನ್ನು ವಿತರಣೆ ಮಾಡಿದರು.
ನಂತರ ಮಾತನಾಡಿದ ಡಿಸಿಎಂ,“ರಾಜ್ಯದಾದ್ಯಂತ 393 ಕಡೆ ಆಶಾಕಿರಣ ದೃಷ್ಟಿ ಕೇಂದ್ರಗಳ ಉದ್ಘಾಟನೆಯಾಗುತ್ತಿದೆ. ಉಚಿತವಾಗಿ ಕನ್ನಡಕ ನೀಡಲಾಗುತ್ತಿದೆ. ಜನರಿಗೆ ಇದರಿಂದ ಕನ್ನಡಕ ಸೇರಿದಂತೆ ಚಿಕಿತ್ಸೆಯ ಸಾವಿರಾರು ಮೊತ್ತ ಹಣ ಉಳಿಯುತ್ತದೆ. ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಇವರು ಆರೋಗ್ಯ ಇಲಾಖೆಯ ಜವಾಬ್ದಾರಿ ತೆಗೆದುಕೊಂಡ ಮೇಲೆ ಕ್ರಾಂತಿಕಾರಕ ಹಾಗೂ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ” ಎಂದು ಹೇಳಿದರು.
“ಹಿಂದಿನಿಂದಲು ದೇಶ ಹಾಗೂ ರಾಜ್ಯದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆಗೆ ಬುನಾದಿ ಹಾಕಿದ್ದು ಕಾಂಗ್ರೆಸ್ ಸರ್ಕಾರ. ಕರ್ನಾಟಕದಲ್ಲಿ 70 ವೈದ್ಯಕೀಯ ಕಾಲೇಜುಗಳಿವೆ. ಅತ್ಯಂತ ಹೆಚ್ಚು ವೈದ್ಯರನ್ನು ತಯಾರು ಮಾಡುತ್ತಿರುವ ಪಟ್ಟಿಯಲ್ಲಿ ಕರ್ನಾಟಕವಿದ್ದು. ಇಲ್ಲಿ ಕಲಿತವರು ಹೊರ ದೇಶಗಳಿಗೆ ತೆರಳಿ ದೇಶಕ್ಕೆ ಉತ್ತಮ ಹೆಸರು ತರುತ್ತಿದ್ದಾರೆ” ಎಂದು ಹೇಳಿದರು.
“ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ʼಯಶಸ್ವಿನಿʼ ಯೋಜನೆ ಮೂಲಕ ರೈತರ, ಬಡವರ ಆರೋಗ್ಯ ಕಾಳಜಿಗೆ ಮುನ್ನುಡಿ ಬರೆದಿದ್ದು ನಮ್ಮ ಸರ್ಕಾರ. ಇದನ್ನು ನೋಡಿದ ಕೇಂದ್ರ ಸರ್ಕಾರ ಆರೋಗ್ಯ ಯೋಜನೆಗಳನ್ನು ಪ್ರಾರಂಭ ಮಾಡಿತು. ನಮ್ಮದು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿರುವ ಗ್ಯಾರಂಟಿ ಸರ್ಕಾರ. ಐದು ಗ್ಯಾರಂಟಿಗಳ ಜೊತೆಗೆ ಭೂಮಿ ಗ್ಯಾರಂಟಿಯನ್ನು ಸರ್ಕಾರಕ್ಕೆ ಎರಡು ವರ್ಷ ತುಂಬಿದ ಘಳಿಗೆಯಲ್ಲಿ ನಮ್ಮ ಜನತೆಗೆ ನೀಡಿದ್ದೇವೆ” ಎಂದರು.
ಶೇ.25ರಷ್ಟು ಶುಲ್ಕ ಪಡೆದು ಎಂಆರ್ ಐ, ಸಿಟಿ ಸ್ಕ್ಯಾನ್ ಸೇವೆ:
“ಗೋವಿಂದರಾಜನಗರ ಕ್ಷೇತ್ರದಲ್ಲಿರುವ ಬಿಬಿಎಂಪಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹೊಸ ರೂಪ ನೀಡಬೇಕು ಎಂದು ಕ್ಷೇತ್ರದ ಶಾಸಕರಾ ಪ್ರಿಯಕೃಷ್ಣ ಸರ್ಕಾರದ ಮೇಲೆ ಒತ್ತಡ ತಂದು ಕೆಲಸ ಮಾಡುತ್ತಿದ್ದಾರೆ. ವಿವಿಧ ವಿಭಾಗಗಳನ್ನು ಈ ಆಸ್ಪತ್ರೆಯಲ್ಲಿ ತೆರೆದು ಜನಸೇವೆ ಮಾಡಲಾಗುತ್ತಿದೆ. ಮಾರುಕಟ್ಟೆ ದರದ ಶೇ.25 ರಷ್ಟು ಮಾತ್ರ ಹಣ ತೆಗೆದುಕೊಂಡು. ಎಂಆರ್ ಐ, ಸಿಟಿ ಸ್ಕ್ಯಾನ್ ಸೇವೆ ನೀಡುವ ಆಲೋಚನೆಯೂ ಇದೆ” ಎಂದು ಹೇಳಿದರು.
“ರಾಜ್ಯದ ಜನಸಂಖ್ಯೆ 7 ಕೋಟಿಯಿದೆ. 2421 ಪ್ರಾಥಮಿಕ ಆರೋಗ್ಯ ಕೇಂದ್ರಗಳು ರಾಜ್ಯದಾದ್ಯಂತ ಕಾರ್ಯನಿರ್ವಹಣೆ ಮಾಡುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಉತ್ತಮ ಆರೋಗ್ಯ ಸೇವೆಗಳು ದೊರೆಯುವಂತೆ ಮಾಡಲಾಗುತ್ತಿದೆ. ರಾಜ್ಯ ರಾಜಧಾನಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮೂಲಕವು ಇದಕ್ಕೆ ಆದ್ಯತೆ ನೀಡಲಾಗುವುದು. ಬೆಂಗಳೂರು ಆರ್ಯುವೇದ ಆಸ್ಪತ್ರೆಗೆ ಹೊಸರೂಪ ನೀಡಲು ಸಚಿವರ ಜೊತೆ ಚರ್ಚೆ ನಡೆಸಲಾಗುವುದು” ಎಂದು ತಿಳಿಸಿದರು.
“ಕೊರೋನಾ ಆದ ನಂತರ ಆರೋಗ್ಯದ ಬಗ್ಗೆ ಜನರಿಗೆ ಕಾಳಜಿ ಬಂದಿದೆ. ಇದಕ್ಕೆ ಪೂರಕವಾಗಿ ಆರೋಗ್ಯ ಇಲಾಖೆ ಕೆಲಸ ಮಾಡುತ್ತಿದೆ. ವೈದ್ಯರು ಸರ್ಕಾರದ ಉತ್ತಮ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಬೇಕು. ನಮ್ಮ ಆಚಾರ, ವಿಚಾರಗಳು ಪ್ರಚಾರವಾಗಬೇಕು. ಸಮಿತಿ ಸದಸ್ಯರು, ಎಲ್ಲಾ ಪಕ್ಷ ನಾಯಕರಿಗೆ ಆಹ್ವಾನ ನೀಡಬೇಕು” ಎಂದರು.
“ಎಲ್ಲಾ ಕ್ಷೇತ್ರಗಳಲ್ಲಿ ರಸ್ತೆ ಸರಿಯಿಲ್ಲ ಸೇರಿದಂತೆ ಅನೇಕ ದೂರುಗಳನ್ನು ನೀಡುತ್ತಾ ಇದ್ದಾರೆ. ಆದರೆ ವಿಜಯನಗರ ಹಾಗೂ ಗೋವಿಂದರಾಜನಗರ ಕ್ಷೇತ್ರದಿಂದ ಯಾವುದೇ ದೂರು ಬರುತ್ತಿಲ್ಲ. ಇಲ್ಲಿನ ಇಬ್ಬರು ಶಾಸಕರಿಗೆ ಸರ್ಕಾರದ ಪರವಾಗಿ ಅಭಿನಂದನೆಗಳು. ಗುಣಮಟ್ಟದ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಸಮಾನತೆಯಿಂದ ಎಲ್ಲರನ್ನು ಕಂಡು ಕೆಲಸ ಮಾಡುತ್ತಾರೆ. ಇಲ್ಲಿನ ಜನರೇ ಹೇಳುವಂತೆ ಲಂಚಮುಕ್ತ, ವಿಳಂಬಮುಕ್ತವಾಗಿ ಕೆಲಸಗಳು ನಡೆಯುತ್ತಿವೆ” ಎಂದರು.
ನನಗೂ ಉಚಿತ ಕನ್ನಡಕ:
“ನನ್ನ ಬಳಿ ಒಂದು ಕನ್ನಡಕವಿದೆ. ಆದರೂ ದಿನೇಶ್ ಗುಂಡುರಾವ್ ಅವರು ನನಗೂ ಉಚಿತ ಕನ್ನಡಕ ನೀಡುತ್ತೇನೆ ಎಂದು ಒಪ್ಪಿಕೊಂಡಿದ್ದಾರೆ” ಎಂದು ಚಟಾಕಿ ಹಾರಿಸಿದರು.