ವಿದ್ಯಾರ್ಥಿಗಳ ಹಾಜರಾತಿಗೆ ತಂತ್ರಜ್ಞಾನದ ಪರಿಹಾರ: ಕೊಂಬೆಟ್ಟು ವಿದ್ಯಾರ್ಥಿಯಿಂದ ಮುಖಚರ್ಯೆ ಪತ್ತೆ ಮತ್ತು ಹಾಜರಿ ಉಪಕರಣ ತಯಾರಿ

RELATED POSTS

ಬೆಂಗಳೂರು(www.thenewzmirror.com):ಶೈಕ್ಷಣಿಕ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಯನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಪುತ್ತೂರಿನ ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅರುಣ್ ಕುಮಾರ್ ವಿ ಅವರು ಒಂದು ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ತಮ್ಮ ಶಾಲೆಯ ವಿದ್ಯಾರ್ಥಿಗಳ ಹಾಜರಾತಿ ಪ್ರಕ್ರಿಯೆಯ ಸುಲಭಗೊಳಿಸುವ ಮತ್ತು ಪೋಷಕರಿಗೆ ಸಕಾಲದಲ್ಲಿ ಮಾಹಿತಿ ನೀಡಬಹುದಾದ ‘ಮುಖಚರ್ಯೆ ಪತ್ತೆ ಮತ್ತು ಹಾಜರಿ ವ್ಯವಸ್ಥೆ’ ಎಂಬ ನೂತನ ಉಪಕರಣವನ್ನು ವಿದ್ಯಾರ್ಥಿ ಅರುಣ್ ಅಭಿವೃದ್ಧಿಪಡಿಸಿದ್ದಾರೆ.

9ನೇ ತರಗತಿಯಿಂದಲೇ ಅದೇ ಸಂಸ್ಥೆಯಲ್ಲಿ ಐ.ಟಿ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಅರುಣ್, ತಮ್ಮ ಅಟಲ್ ಟಿಂಕರಿಂಗ್ ಮತ್ತು ಐಟಿ ಕೌಶಲ್ಯಗಳನ್ನು ಬಳಸಿಕೊಂಡು ಈ ಉಪಕರಣ ಸಿದ್ಧಪಡಿಸಿದ್ದಾರೆ. ಮೂರು ತಿಂಗಳ ಅವಿರತ ಪರಿಶ್ರಮದ ಫಲವಾಗಿ ರೂಪುಗೊಂಡಿರುವ ಈ ಸಾಧನೆಯ ಹಿಂದೆ, ಕಾಲೇಜಿನ ಐಟಿ ವಿಭಾಗದ ಶಿಕ್ಷಕರಾದ ಆಶ್ಲೇಶ್ ಕುಮಾರ್ ಅವರ ಮಾರ್ಗದರ್ಶನವೂ ಇದೆ.

ಉಪಕರಣದ ವೈಶಿಷ್ಟ್ಯಗಳು:

ಈ ಉಪಕರಣದಲ್ಲಿ ಪ್ರತಿ ವಿದ್ಯಾರ್ಥಿಯ ಹೆಸರು, ಐದು ಭಾವಚಿತ್ರಗಳು, ಪೋಷಕರ ಮೊಬೈಲ್ ಸಂಖ್ಯೆ, ತರಗತಿ ಮತ್ತು ವಿಭಾಗದ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ವಿದ್ಯಾರ್ಥಿಯು ಉಪಕರಣದ ವೆಬ್ ಕ್ಯಾಮರಾ ಮುಂದೆ ಬಂದಾಗ, ಅದು ವಿದ್ಯಾರ್ಥಿಯನ್ನು ಗುರುತಿಸಿ ಹಾಜರಾತಿ ದಾಖಲಿಸುತ್ತದೆ. ಇದೇ ವೇಳೆ, ಪೋಷಕರ ಮೊಬೈಲ್‌ಗೆ ಟೆಲಿಗ್ರಾಮ್ ಆ್ಯಪ್ ಮೂಲಕ ಹಾಜರಾತಿಯ ಮಾಹಿತಿ ತಲುಪುತ್ತದೆ.

ದಾಖಲಾದ ಹಾಜರಿಯನ್ನು ಎಕ್ಸೆಲ್ ಶೀಟ್‌ನಲ್ಲಿ ಸಂಗ್ರಹಿಸಿ, ಪ್ರತಿದಿನ ಬೆಳಗ್ಗೆ 11 ಗಂಟೆಗೆ ಮುಖ್ಯ ಶಿಕ್ಷಕರ ಮೊಬೈಲ್ ಸಂಖ್ಯೆಗೆ ಟೆಲಿಗ್ರಾಂ ಆ್ಯಪ್ ಮೂಲಕ ಪಿಡಿಎಫ್ ರೂಪದಲ್ಲಿ ರವಾನಿಸಲಾಗುತ್ತದೆ. ಹಾಜರಾಗದ ವಿದ್ಯಾರ್ಥಿಗಳನ್ನು ಗೈರು ಎಂದು ನಮೂದಿಸಿ ಸಂದೇಶ ರವಾನಿಸುವ ಮೂಲಕ ಆ ದಿನದ ಹಾಜರಾತಿ ಕೊನೆಗೊಳ್ಳುತ್ತದೆ. 11 ಗಂಟೆಯ ನಂತರ ಹಾಜರಾತಿ ದಾಖಲಿಸುವ ಅವಕಾಶ ಇರುವುದಿಲ್ಲ, ಇದು ಪ್ರಕ್ರಿಯೆಯಲ್ಲಿ ಶಿಸ್ತು ಕಾಪಾಡಲು ಸಹಕಾರಿಯಾಗುತ್ತದೆ.

ರಾಸ್ಬೆರಿ ಮದರ್ ಬೋರ್ಡ್ (Raspberry Mother Board), ಎಲ್‌ಸಿಡಿ ನೇಮ್ ಡಿಸ್ಪ್ಲೇ (LCD Name Display), ವೆಬ್ ಕ್ಯಾಮರಾ (Web Camera), ಯುಎಸ್‌ಬಿ ಕನೆಕ್ಟರ್ಸ್ (USB Connectors), ಎಸ್‌ಡಿ ಕಾರ್ಡ್ (SD Card)  ಮುಂತಾದವುಗಳನ್ನು ಬಳಸಿ ಈ ಉಪಕರಣ ನಿರ್ಮಿಸಲಾಗಿದೆ.

ಸಂದೇಶ ರವಾನೆಗಾಗಿ ಉಪಕರಣಕ್ಕೆ ವೈ-ಫೈ‌ ಸಂಪರ್ಕ ಅಗತ್ಯವಿರುತ್ತದೆ. ಪ್ರಸ್ತುತ ತಯಾರಿಸಲಾಗಿರುವ ಮಾದರಿಯು 500 ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಕೇವಲ 1-2 ಸೆಕೆಂಡುಗಳಲ್ಲಿ ಪ್ರತಿ ವಿದ್ಯಾರ್ಥಿಯ ಹಾಜರಾತಿ ದಾಖಲಾಗುತ್ತದೆ.

ಪ್ರಾಯೋಗಿಕ ಹಂತದ ಈ ಉಪಕರಣವನ್ನು ಸುಮಾರು ₹13,000 ವೆಚ್ಚದಲ್ಲಿ ಅರುಣ್ ತಯಾರಿಸಿದ್ದು, ಪೂರ್ಣಪ್ರಮಾಣದ ಉಪಕರಣ ಸಿದ್ಧಪಡಿಸಲು ತಯಾರಿಕಾ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ.

ಅರುಣ್ ಕುಮಾರ್ ಅವರ ಈ ಆವಿಷ್ಕಾರ ಶೈಕ್ಷಣಿಕ ಕ್ಷೇತ್ರದಲ್ಲಿ ತಂತ್ರಜ್ಞಾನ ಬಳಕೆಯ ಮಹತ್ವವನ್ನು ತೋರಿಸುವ ಉತ್ತಮ ಉದಾಹರಣೆ. ಹಾಜರಾತಿ ದಾಖಲಾತಿ ವ್ಯವಸ್ಥೆಯಲ್ಲಿ ಸುಧಾರಣೆ ಮಾತ್ರವಲ್ಲ, ಪೋಷಕರಿಗೆ ಮಾಹಿತಿ ತಲುಪುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೂ ಇದು ನೆರವಾಗಲಿದೆ.ಅವರು ಮಾಡಿರುವ ಈ ಸಾಧನೆ, ಇತರ ವಿದ್ಯಾರ್ಥಿಗಳಿಗೆ ಪ್ರೇರಣೆ ಆಗಲಿ ಎಂಬುದು ಎಲ್ಲರ ಆಶಯ.

ADVERTISEMENT

Related Posts

Welcome Back!

Login to your account below

Retrieve your password

Please enter your username or email address to reset your password.

Add New Playlist