ಶಿವಮೊಗ್ಗ(www.thenewzmirror.com): ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗುತ್ತಿರವ ಸಿಗಂದೂರು ಸೇತುವೆ( ಹಸಿರುಮಕ್ಕಿ ಸೇತುವೆ) ಜುಲೈ 14ರಂದು ಲೋಕಾರ್ಪಣೆ ಆಗಲಿದ್ದು,ಕೇಂದ್ರ ಹೆದ್ದಾರಿ ಹಾಗು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸೇತುವೆ ಉದ್ಘಾಟಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,ಸೇತುವೆ ಉದ್ಘಾಟನೆಗೆ ಆಗಮಿಸಲು ಗಡ್ಕರಿ ಸಮ್ಮತಿಸಿದ್ದು, ಸಮಯಾವಕಾಶ ನೀಡಿದ್ದಾರೆ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಸ್ಥಳ ಇನ್ನಷ್ಟೇ ನಿಗದಿ ಆಗಬೇಕಿದೆ ಎಂದರು.
ಇಂದಿನಿಂದ ಎರಡನೇ ಹಂತದ ಲೋಡ್ ಟೆಸ್ಟ್ ನಡೆಯಲಿದೆ. ಅಲ್ಲದೆ ಕೊನೆಯ ಹಂತದ ಕೆಲಸ ಕಾರ್ಯ ಬಾಕಿ ಇದ್ದು ಅದನ್ನೂ ಕಾಲಮಿತಿಯಲ್ಲಿ ಮುಗಿಸಲಾಗುತ್ತದೆ,ಇನ್ನು, ಸರ್ಕಾರದ ಆದೇಶದಲ್ಲಿ ಈ ಸೇತುವೆಗೆ ಹೊಳೆಬಾಗಿಲು ಕಳಸವಳ್ಳಿ ಸೇತುವೆ ಎಂದು ಉಲ್ಲೇಖಿಸಲಾಗಿದೆ. ಆದರೆ ಈ ಸೇತುವೆಗೆ ‘ಸಿಗಂಧೂರು ಚೌಡೇಶ್ವರಿ’ ಸೇತುವೆ ಎಂದು ನಾಮಕರಣ ಮಾಡಬೇಕು. ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಅಂಬಾರಗೋಡ್ಲು – ಕಳಸವಳ್ಳಿ ನಡುವೆ ಸಾಗುವ ಹಾದಿಗೆ ನಿರ್ಮಾಣ ಮಾಡಿರುವ ಸಿಗಂದೂರು ಸೇತುವೆ ಒಂದು ಹೊಸ ಮೈಲಿಗಲ್ಲು. ನವನವೀನ ತಂತ್ರಜ್ಞಾನ ಹಾಗೂ ಆಧುನಿಕ ತಾಂತ್ರಿಕ ವ್ಯವಸ್ಥೆಯಿಂದ ಅತ್ಯಂತ ಅಚ್ಚುಕಟ್ಟಾಗಿ ಸುಮಾರು 430.00 ಕೋಟಿ ಅನುದಾನದಲ್ಲಿ ರಾಜ್ಯದ ಅತಿ ಉದ್ದದ 2.44 ಕಿ.ಮೀ ಕೇಬಲ್ ಆಧಾರಿತ ಸೇತುವೆಯಾಗಿದೆ.
ಈ ಸೇತುವೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಅಂಬಾರಗೋಡ್ಲು ಮತ್ತು ತುಮರಿ ಗ್ರಾಮಗಳನ್ನು ಸಂಪರ್ಕಿಸುತ್ತದೆ. ಸಿಗಂದೂರು ಸೇತುವೆ ದೇಶದ ಎರಡನೇ ಅತೀ ಉದ್ದನೆಯ ಸೇತುವೆಯಾಗಲಿದೆ.ಶರಾವತಿ ನದಿಯ ಪ್ರವಾಹ ತಡೆಯುವ ಸಾಮರ್ಥ್ಯ ಹೊಂದಿದೆ. ಲಾಂಚ್ ಸಂಚಾರ ಸಮಯ ಮುಗಿದ ನಂತರ ಸಿಗಂದೂರು ಅಥವಾ ತುಮರಿಯಿಂದ ಸಾಗರ ಪಟ್ಟಣಕ್ಕೆ ಬರಲು ಸುಮಾರು 80 ಕಿ.ಮೀ ಪ್ರಯಾಣಿಸಬೇಕಿತ್ತು. ಈ ಸೇತುವೆ ಪ್ರಯಾಣದ ಅವಧಿಯನ್ನು ಅರ್ಧದಷ್ಟು ಕಡಿಮೆ ಮಾಡಲಿದೆ. ಇದರ ಜೊತೆಯಲ್ಲಿ ಶಿವಮೊಗ್ಗ ಹಾಗೂ ಉಡುಪಿ ನಡುವಿನ ಸಂಪರ್ಕ ಮತ್ತಷ್ಟು ಸನಿಹವಾಗಲಿದೆ. ಹಾಗೆಯೇ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಾಲಯ ಭೇಟಿ ಸುಲಭವಾಗಲಿದೆ. ಜೊತೆಗೆ ಶರಾವತಿ ಹಿನ್ನೀರು ಭಾಗದ ಸಂಪರ್ಕ, ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಲಿದೆ.

ಫೆಬ್ರವರಿ 19, 2018 ರಂದು ಈ ಸಿಗಂದೂರು ಸೇತುವೆಗೆ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಡಿಪಾಯ ಹಾಕಿದ್ದರು. ಹಾಗಾಗಿ ಉದ್ಘಾಟನೆಗೂ ನಿತಿನ್ ಗಡ್ಕರಿ ಅವರನ್ನೇ ಕರೆಸಲು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ನಿರ್ಧರಿಸಿದ್ದು ಅದರಂತೆ ದೆಹಲಿಗೆ ತೆರಳಿ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಿದ್ದಾರೆ, ಜುಲೈ 14 ರಂದು ಸೇತುವೆ ಉದ್ಘಾಟನೆಗೂ ಆಗಮಿಸಲು ಸಮ್ಮತಿಸಿದ್ದಾರೆ.