ಬೆಂಗಳೂರು(www.thenewzmirror.com): ಬಿ.ಕೆ.ಹರಿಪ್ರಸಾದ್ ಅವರ ಅರ್ಧನಾರೀಶ್ವರಿ ಎಂಬ ವ್ಯಂಗ್ಯ ಹೇಳಿಕೆಯಿಂದ ಮಂಗಳಮುಖಿ ಸಮುದಾಯಕ್ಕೆ ತುಂಬಾ ನೋವು ಆಗಿದ್ದು, ಈ ಕೂಡಲೇ ಅವರು ಕ್ಷಮೆ ಯಾಚಿಸಬೇಕು ಎಂದು ನಗರ ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯರು ಮತ್ತು ಕರ್ನಾಟಕ ಮಂಗಳಮುಖಿ ಫೌಂಡೇಷನ್‍ನ ಪ್ರಧಾನ ಕಾರ್ಯದರ್ಶಿ ಅರುಂಧತಿ ಜಿ. ಹೆಗಡೆ ಆಗ್ರಹಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಯನ್ನು ಮಂಗಳಮುಖಿ ಸಮುದಾಯ ಯಾವ ಕಾರಣಕ್ಕೂ ಕ್ಷಮಿಸುವುದಿಲ್ಲ. ಮಂಗಳಮುಖಿಯರು ಯಾವುದೇ ಕೆಲಸಗಳನ್ನು ಮಾಡುವುದಿಲ್ಲ ಎಂದು ಹರಿಪ್ರಸಾದ್ ಅವರು ಮೂವತ್ತು ನಲವತ್ತು ವರ್ಷಗಳ ಹಿಂದಿನ ಮಾತನಾಡುತ್ತಿದ್ದಾರೆ. ನಮಗೆ ಅವರ ಪಕ್ಷ ನಡೆಸಲು ಅಧಿಕಾರ ನೀಡಿದರೆ ಅವರ ನಾಯಕರಾದ ರಾಹುಲ್ ಗಾಂಧಿ ಅವರಿಗಿಂತ ದಕ್ಷತೆಯಿಂದ ಆಡಳಿತ ಮಾಡುತ್ತೇವೆ. ಇದನ್ನು ಹರಿಪ್ರಸಾದ್ ಅವರು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.
ಹರಿಪ್ರಸಾದ್ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ಮಂಗಳಮುಖಿಯರು ತುಂಬ ತುಚ್ಛವಾಗಿ ಜೀವನವನ್ನು ಮಾಡುತ್ತಿಲ್ಲ. ಸಮಾಜದಲ್ಲಿ ಕೆಲಸ ಕಾರ್ಯಗಳಿಗೆ ಅವಕಾಶ ಇಲ್ಲದಿರುವ ಕಾರಣ ಅವರು ಭಿಕ್ಷೆ ಮತ್ತು ಲೈಂಗಿಕ ವೃತ್ತಿಯನ್ನು ಮಾಡುತ್ತಿದ್ದಾರೆ. ಹರಿಪ್ರಸಾದ್ ಅವರು ಬೆಂಗಳೂರು ದಕ್ಷಿಣದಲ್ಲಿ ಚುನಾವಣೆಗೆ ನಿಂತು ಇಲ್ಲಿಯವರೆಗೆ ಗೆಲ್ಲುವುದಕ್ಕೆ ಆಗಿಲ್ಲ. ಆದರೆ ನಮ್ಮ ಸಮುದಾಯದವರು ಮತ್ತು ನೀವು ಚುನಾವಣೆ ಎದುರಿಸಿದರೆ ಬಹುಶಃ ನೀವು ತೆಗೆದುಕೊಳ್ಳುವ ಮತಕ್ಕಿಂತ ಒಂದೆರಡು ಹೆಚ್ಚು ಮತವನ್ನು ನಾವು ಪಡೆಯಬಹುದೆನೋ ಎಂದು ತಿಳಿಸಿದರು.
ಮಂಗಳಮುಖಿ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು?
ಕಾಂಗ್ರೆಸ್ಸಿನಲ್ಲಿ ನಿಮ್ಮ ಸ್ಥಾನಮಾನವನ್ನು ನೀವೇ ವಿಮರ್ಶಿಸಿಕೊಳ್ಳಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮ ಸಮುದಾಯದ ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿದೆ. ಇದು ಬಿಜೆಪಿಯಿಂದ ಸಾಧ್ಯವಾಗಿದೆ. ರಸ್ತೆಯಲ್ಲಿ ಕುಣಿಯುವವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗುತ್ತದೆ ಎಂದರೆ ಯಾವ ಕಾರಣಕ್ಕೆ ಸಿಗುತ್ತದೆ; ಯಾವ ರೀತಿಯಲ್ಲಿ ಸಿಗುತ್ತದೆ ಎಂದು ಹರಿಪ್ರಸಾದ್ ಅವರೇ ಯೋಚಿಸಬೇಕು ಎಂದು ಹೇಳಿದರು.
ಬಿಜೆಪಿ ಪಕ್ಷಕ್ಕೆ ವ್ಯಂಗ್ಯವಾಗಿ ಅರ್ಧನಾರೀಶ್ವರಿ ಎಂದು ಹೇಳುತ್ತೀರಾ? ಮಂಜಮ್ಮ ಜೋಗತಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಮತ್ತು ಜಾನಪದ ಅಕಾಡೆಮಿಯ ಅಧ್ಯಕ್ಷರನ್ನಾಗಿ ಮಾಡಿ ಆಡಳಿತವನ್ನು ನಡೆಸಲು ಅವರಿಗೆ ಬಿಜೆಪಿ ಅವಕಾಶ ನೀಡಿದೆ. ನಮ್ಮ ಮತ್ತು ಸಮುದಾಯದ ಘನತೆಯನ್ನು ಎತ್ತಿ ಹಿಡಿದಿದ್ದಾರೆ ಎಂದು ವಿವರಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ನಮ್ಮ ಸಮುದಾಯದ ಜನಾಂಗಕ್ಕೆ ಶೇ 1 ರಷ್ಟು ಮೀಸಲಾತಿ ನೀಡುವುದರ ಮೂಲಕ ಇಂದು ನಮ್ಮ ಜನಾಂಗದ ಎಷ್ಟೋ ಜನ ಮಂಗಳಮುಖಿಯರು ಸರ್ಕಾರಿ ಉದ್ಯೋಗಗಳಲ್ಲಿ ಗ್ರಾಮಲೆಕ್ಕಿಗರಾಗಿ ಮತ್ತು ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ನೆನಪಿಸಿದರು. ಮಂಗಳಮುಖಿ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದ ಕೊಡುಗೆ ಏನು ಎಂದು ಪ್ರಶ್ನಿಸಿದರು. ಹರಿಪ್ರಸಾದ್ ಅವರು ರಾಜ್ಯಸಭೆ ಸದಸ್ಯರಾಗಿ ದಮನಿತ, ಶೋಷಿತ ವರ್ಗಗಳ ಧ್ವನಿಯಾಗಿರಬೇಕಿತ್ತು. ಆದರೆ ಅವರ ಬಾಯಿಯಲ್ಲಿ ಇಂತಹ ಹೀನವಾದ ಮಾತುಗಳು ಬರುತ್ತದೆ ಎಂದು ನಮ್ಮ ಸಮಾಜವು ನೀರಿಕ್ಷಿಸಿರಲಿಲ್ಲ ಎಂದು ಆಕ್ಷೇಪಿಸಿದರು.
ಇಡೀ ಜಗತ್ತು ಮತ್ತು ಪ್ರಕೃತಿ ನಡೆಯುತ್ತಿರುವುದು ಅರ್ಧನಾರೀಶ್ವರ ತತ್ವದಿಂದ. ಅರ್ಧನಾರೀಶ್ವರ ತತ್ವ ಇಲ್ಲದಿರುವುದರಿಂದ ನಮ್ಮಲ್ಲಿ ವಿಚ್ಛೇದನಗಳು ಹೆಚ್ಚಾಗಿದೆ. ಪುರುಷ ತತ್ವ ಮತ್ತ ಸ್ತ್ರೀ ತತ್ವದ ಪರಸ್ಪರ ಹೊಂದಾಣಿಕೆ ಇಲ್ಲದಿರುವುದರಿಂದ ಇಂದು ವಿಚ್ಛೇದನಗಳು ಹೆಚ್ಚುತ್ತಿವೆ. ಅರ್ಧನಾರೀಶ್ವರರು ಎಂದರೆ ನೀವು ಏನು ಎಂದು ತಿಳಿದುಕೊಂಡಿದ್ದೀರ ಎಂದು ಪ್ರಶ್ನಿಸಿದರು.
ಮಹಿಳಾ ಮುಖ್ಯಮಂತ್ರಿ ಮಾಡಲು ಒತ್ತಾಯ
ಮಂಗಳಮುಖಿಯರು ಹುಟ್ಟಿದ ದಿನದಿಂದ ಅಪ್ಪ ಅಮ್ಮ ಅವರಿಂದ ದೂರವಾಗಿರುತ್ತಾರೆ, ನೆರೆಹೊರೆಯವರಿಂದ ದೂರವಾಗಿರುತ್ತಾರೆ, ಸಮಾಜದಿಂದ ದೂರವಾಗಿರುತ್ತಾರೆ ಮತ್ತು ಸ್ನೇಹಿತರಿಂದ ದೂರವಾಗಿರುತ್ತಾರೆ ಎಂದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಮಹಿಳಾ ಮಣಿಗಳಾದ ಲಕ್ಷ್ಮೀ ಹೆಬ್ಬಾಳ್ಕರ್, ಉಮಾಶ್ರೀ, ಜಯಮಾಲಾ ಅವರು ನಿಮ್ಮ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇಂದಿನವರೆಗೂ ಕರ್ನಾಟಕ ರಾಜ್ಯದಲ್ಲಿ ಮಹಿಳಾ ಮುಖ್ಯಮಂತ್ರಿಯನ್ನು ಮಾಡಿಲ್ಲ. ನೀವು ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಮಹಿಳಾ ಮುಖ್ಯಮಂತ್ರಿಯನ್ನು ಮಾಡಲು ನಿಮ್ಮ ಪಕ್ಷದವರಿಗೆ ಮತ್ತು ಹೈಕಮಾಂಡ್ ಗೆ ಸಲಹೆ ನೀಡಿ ಎಂದು ಒತ್ತಾಯಿಸಿದರು.
ಹರಿಪ್ರಸಾದ್ ಅವರ ರಾಜಕೀಯ ಕೆಸರೆರಚಾಟಕ್ಕೆ ಮಂಗಳಮುಖಿಯರನ್ನು ಬಳಸಿಕೊಳ್ಳುವುದು ಮತ್ತು ನಮ್ಮ ಸಮುದಾಯವನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ಷೇಪಿಸಿದರು. ನೈತಿಕವಾಗಿ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಬೇಕು. ನೀವು ನೀಡಿರುವ ಹೇಳಿಕೆಯು ಅಕ್ಷಮ್ಯ ಅಪರಾಧ ಎಂದು ಅವರು ಖಂಡಿಸಿದರು. ಹರಿಪ್ರಸಾದ್ ಅವರು ಮಂಗಳಮುಖಿ ಸಮುದಾಯದ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಬೇರೆ ರೀತಿಯ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ಮಂಗಳಮುಖಿ ಫೌಂಡೇಷನ್ ಅಧ್ಯಕ್ಷೆ ಸಂಗೀತಮ್ಮ, ಮಂಗಳಮುಖಿ ಸಮುದಾಯದ ಹಿರಿಯರಾದ ಸಂಧ್ಯಮ್ಮ ಮತ್ತು ಕರ್ನಾಟಕ ಮಂಗಳಮುಖಿ ಫೌಂಡೇಷನ್ ನ ನಿರ್ದೇಶಕರಾದ ಪ್ರತಿಭಾ ಅವರು ಉಪಸ್ಥಿತರಿದ್ದರು.







