ಬೆಂಗಳೂರುwww.thenewzmirror.com): ಎಸ್ಸಿ ಎಸ್ಟಿ ನೌಕರರಿಗೆ ಮುಂಬಡ್ತಿಯನ್ನು ನೀಡುವಲ್ಲಿ ರೋಸ್ಟರ್ ಬಿಂದುವನ್ನು ಸರ್ಕಾರದ ಆದೇಶದ ಪ್ರಕಾರ ನಿಗದಿಪಡಿಸಿದ್ದರೂ ಕೆಲವು ಇಲಾಖೆಗಳ ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯ ಸರ್ಕಾರದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು,ಕೂಡಲೇ ಈ ಬಗ್ಗೆ ಗಮನ ಹರಿಸಿ ಬಂದಿರುವ ತೊಡಕುಗಳನ್ನು ನಿವಾರಣೆ ಮಾಡುವುದರತ್ತ ಗಮನ ಹರಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸೂಚಿಸಿದ್ದಾರೆ.
ಈ ಸಂಬಂಧ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿರುವ ಖರ್ಗೆ,ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಪಿ./ಎಸ್.ಟಿ. ನೌಕರರ ಸಂಘದವರು ಎಸ್ಸಿ ಎಸ್ಟಿ ನೌಕರರಿಗೆ ಮುಂಬಡ್ತಿಯನ್ನು ನೀಡುವಲ್ಲಿ ರೋಸ್ಟರ್ ಬಿಂದುವನ್ನು ಸರ್ಕಾರದ ಆದೇಶದ ಪ್ರಕಾರ ನಿಗದಿಪಡಿಸಿದ್ದರೂ, ಅದನ್ನು ಕಟುನಿಟ್ಟಾಗಿ ಪಾಲನೆ ಮಾಡಬೆಂಕೆಂಬ ನಿರ್ದೇಶನವಿದ್ದರೂ ಕೆಲವು ಇಲಾಖೆಗಳ ಅಧಿಕಾರಿಗಳು ಪಾಲನೆ ಮಾಡದಿರುವ ಬಗ್ಗೆ ಪತ್ರಿಕೆಯಲ್ಲಿ ಬಂದಿರುವ ಕೆಲವು ಪ್ರಮುಖ ಅಂಶಗಳನ್ನು ಜೊತೆಗೆ ಈ ವಿಚಾರವಾಗಿ ನಿಮಗೂ ಕೂಡ ಬರೆದಿರುವ ಪತ್ರದ ಪ್ರತಿಯನ್ನು ಸಂಘದ ಅಧ್ಯಕ್ಷರು ನನ್ನ ಗಮನಕ್ಕೆ ತಂದಿದ್ದಾರೆ. ಇದರ ಜೊತೆ ಲಗತ್ತಿಸಿರುವ ಪತ್ರಿಕೆಯಲ್ಲಿ ಬಂದಿರುವ ವಿವರಗಳನ್ನು ಹಾಗೂ ಸಂಘದವರು ನಿಮಗೆ ಈಗಾಗಲೇ ನೀಡಿರುವ ಪತ್ರವನ್ನು ಸ್ವತಃ ಅವಲೋಕಿಸುವುದರ ಜೊತೆಗೆ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿ ಸರ್ಕಾರವೇ ಹೊರಡಿಸಿರುವ ಆದೇಶ ಹಾಗೂ ಸುತ್ತೋಲೆಗಳಲ್ಲಿ ತಿಳಿಸಿರುವ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸ್ಪಷ್ಟ ಆದೇಶವನ್ನು ನೀಡುವುದು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಕೂಡಲೇ ಇದನ್ನು ಸರಿಪಡಿಸಬೇಕು ಇಲ್ಲದಿದ್ದರೆ ಅಧಿಕಾರಿಗಳ ಮಟ್ಟದಲ್ಲಿ ಅಸಮಧಾನ ಉಂಟಾಗಿ ಸರ್ಕಾರದ ಕೆಲಸ ಕಾರ್ಯಗಳು ಸುಲಲಿತವಾಗಿ ನಡೆಯಲು, ಕಷ್ಟವಾಗುತ್ತದೆ.ಈ ವಿಚಾರದ ಬಗ್ಗೆ ಕೂಡಲೇ ಗಮನ ಹರಿಸಿ ಬಂದಿರುವ ತೊಡಕುಗಳನ್ನು ನಿವಾರಣೆ ಮಾಡುವುದರತ್ತ ಗಮನ ಹರಿಸಬೇಕೆಂದು ಸೂಚಿಸಬಯಸುತ್ತೇನೆ ಎಂದು ಪತ್ರಸಲ್ಲಿ ಉಲ್ಲೇಖಿಸಿದ್ದಾರೆ.







