ಬೆಂಗಳೂರು(www.thenewzmirror.com):ಎಐಸಿಸಿ ನಾಯಕ ರಾಹುಲ್ ಗಾಂಧಿ ಪ್ರತಿಪಾದಿಸುತ್ತಿರುವ ಜಾತಿಗಣತಿ ಕೇವಲ ಜಾತಿಗಳ ಗಣತಿಯಾಗಿರದೇ, ಅದು ಸಾಮಾಜಿಕ , ಆರ್ಥಿಕ, ಶೈಕ್ಷಣಿಕವಾಗಿ ನಡೆಸುವ ಸಮೀಕ್ಷೆಯಾಗಿದೆ. ಹಿಂದುಳಿದ ಸಮುದಾಯಗಳಿಗೆ ಸಮಾನ ಅವಕಾಶ ಒದಗಿಸುವ ದಿಟ್ಟ ನಿರ್ಧಾರವನ್ನು ಅವರು ಕೈಗೊಂಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1931 ರ ನಂತರ ಜಾತಿ ಜನಗಣತಿಯನ್ನು ಕೈಗೊಂಡ ಮೊದಲ ರಾಜ್ಯ ಕರ್ನಾಟಕ. ಆದ್ದರಿಂದಲೇ ಅದನ್ನು ‘ಕರ್ನಾಟಕ ಮಾದರಿ’ ಎಂದು ಕರೆಯಲಾಗುತ್ತದೆ, 2015 ನೇ ಇಸವಿಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮೀಕ್ಷೆ ಕೈಗೊಳ್ಳಲು ಹಿಂದುಳಿದ ವರ್ಗದ ಆಯೋಗಕ್ಕೆ ಆದೇಶ ನೀಡಲಾಗಿತ್ತು. ಅದರಂತೆ ಆಯೋಗವು ಸಮೀಕ್ಷೆಯನ್ನು ನಡೆಸಿತು. ಆದರೆ ನಮ್ಮ ಅವದಿ ಮುಗಿದು 2018 ರಲ್ಲಿ ಸಮ್ಮಿಶ್ರ ಸರ್ಕಾರದ ಅಧಿಕಾರಕ್ಕೆ ಬಂದಾಗ, ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜು ವರದಿಯನ್ನು ನೀಡಲು ಕಾಲಾವಕಾಶ ನೀಡುವಂತೆ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಕೋರಿದರು. ಮುಖ್ಯಮಂತ್ರಿಯಾಗಿದ್ದು ಹೆಚ್.ಡಿ.ಕುಮಾರಸ್ವಾಮಿಯವರು ಮನ್ನಿಸಲಿಲ್ಲ. ಅಂದು ಸಚಿವರಾಗಿದ್ದ ಪುಟ್ಟರಂಗ ಶೆಟ್ಟಿಯವರು ಆಯೋಗಕ್ಕೆ ಕಾಲಾವಕಾಶವನ್ನು ನೀಡಿದ್ದರಾದರೂ ವರದಿಯನ್ನು ಸ್ವೀಕರಿಸದಂತೆ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಸೂಚನೆ ನೀಡಿದ್ದರು, ನಂತರದ 3.10 ವರ್ಷ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ, ಆಯೋಗದ ವರದಿಯನ್ನು ಸ್ವೀಕರಿಸುವುದಾಗಲಿ, ಜಾರಿ ಮಾಡುವ ಬಗ್ಗೆಯಾಗಲಿ ಕೈಹಾಕಲಿಲ್ಲ ಎಂದರು.
ನಂತರದ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ ಹೆಗ್ಗಡೆಯವರು ಶಿಫಾರಸ್ಸುಗಳನ್ನು ಮಾಡಿ ವರದಿಯನ್ನು ಸಿದ್ದಪಡಿಸಿ ನಮ್ಮ ಸರ್ಕಾರಕ್ಕೆ ಸಲ್ಲಿಸಿದರು. ಈ ವರದಿಯನ್ನು ನಮ್ಮ ಸಚಿವ ಸಂಪುಟದಲ್ಲಿ ಮಂಡಸಿ ಚರ್ಚಿಸಿದಾಗ, ಸದರಿ ವರದಿಯು ಹತ್ತು ವರ್ಷದ ಹಿಂದಿನ ಸಮೀಕ್ಷೆಯನ್ನು ಆಧರಿಸಿರುವುದರಿಂದ ಪುನ: ಸಮೀಕ್ಷೆ ಮಾಡುವ ನಿರ್ಣಯವನ್ನು ಸಚಿವ ಸಂಪುಟ ಕೈಗೊಂಡಿದೆ. ಸಚಿವ ಸಂಪುಟದ ನಿರ್ಣಯದಂತೆ ಹಿಂದುಳಿದ ವರ್ಗದ ಆಯೋಗಕ್ಕೆ ಮೂರು ತಿಂಗಳ ಕಾಲಾವಕಾಶದಲ್ಲಿ ಮರುಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಆಯೋಗವು ನೀಡಿದ ವರದಿಯನ್ನು ಜಾರಿ ಮಾಡಲಾಗುವುದು ಎಂದು ಭರವಸೆ ನೀಡಿದರು.







