ನವದೆಹಲಿ(www.thenewzmirror.com): ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಯ್ಕೆ ಮಾಡಿರುವ ಮೂರು ಸ್ಥಳಗಳಲ್ಲಿ ಯಾವುದಾದರೂ ಒಂದು ಸ್ಥಳ ಆಖೈರುಗೊಳಿಸಿದಲ್ಲಿ ರಾಜ್ಯವು ಮುಂದಿನ ಕೆಲಸ ಕೈಗೊಳ್ಳಲು ಸಹಕಾರಿಯಾಗಿದ್ದು ಆದಷ್ಟು ಬೇಗ ಸ್ಥಳವನ್ನು ಅಂತಿಮಗೊಳಿಸಿ ರಾಜ್ಯಕ್ಕೆ ಮಾಹಿತಿ ನೀಡುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರಿಗೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಮನವಿ ಸಲ್ಲಿಸಿದ್ದಾರೆ.
ನವದೆಹಲಿಗೆ ತೆರಳಿರುವ ಎಂಬಿ ಪಾಟೀಲ ಹಿರಿಯ ಅಧಿಕಾರಿಗಳಾದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, ಕೆಎಸ್‌ಐಐಡಿಸಿ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್ ಅವರೊಂದಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿದರು. ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಾಜ್ಯದ ಯೋಜನೆಗಳ ಕುರಿತು ಮಹತ್ವದ ಚರ್ಚೆ ನಡೆಸಿದರು.
ಈ ಭೇಟಿಯಲ್ಲಿ ಬಹು ಮುಖ್ಯವಾಗಿ ʻಬೆಂಗಳೂರಿನ ಸಮೀಪ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸವ ವಿಚಾರದ ಕುರಿತು ಸಮಾಲೋಚನೆ ನಡೆಸಲಾಯಿತು. ಹೊಸ ವಿಮಾನ ನಿಲ್ದಾಣಕ್ಕಾಗಿ ಈಗಾಗಲೇ ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದ ಮೂರು ಸ್ಥಳಗಳನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತ ಮಟ್ಟದ ತಂಡ ಪರಿಶೀಲಿಸಿರುವ ಕುರಿತು ಚರ್ಚಿಸಿದರು. ಒಂದು ಸ್ಥಳವನ್ನು ಆದಷ್ಟು ಶೀಘ್ರವೇ ಆಖೈರು ಮಾಡಿದರೆ, ರಾಜ್ಯವು ಮುಂದಿನ ಕೆಲಸ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಹಾಗಾಗಿ ಕೂಡಲೇ ಈ ವಿಚಾರದಲ್ಲಿ ಕ್ರಮ ವಹಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಇನ್ನು ಎರಡನೆಯ ವಿಚಾರವಾಗಿ ವಿಜಯಪುರ ವಿಮಾನ ನಿಲ್ದಾಣದ ಕುರಿತು ಚರ್ಚೆ ನಡೆಯಿತು.ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿರುವ ವಿಮಾನ ನಿಲ್ದಾಣಕ್ಕೆ ಕೇಂದ್ರ ಪರಿಸರ ಇಲಾಖೆಯ ಅನುಮತಿ ಬಾಕಿರುವ ಬಗ್ಗೆ ಚರ್ಚಿಸಿದ್ದು ಆದಷ್ಟು ಬೇಗ ವಿಮಾನ ನಿಲ್ದಾಣ ಉದ್ಘಾಟನೆಗೆ ಸಹಕಾರ ನೀಡುವಂತೆ ಕೇಂದ್ರ ಸಚಿವರಿಗೆ ಎಂಬಿ ಪಾಟೀಲ್ ಮನವಿ ಮಾಡಿದರು.
ಇನ್ನು ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಬೇಕೆಂದು ಪಾಟೀಲರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದರು,ಎರಡೂ ವಿಮಾನ ನಿಲ್ದಾಣಗಳಲ್ಲಿ ಗಂಟೆಗೆ 2,400 ಪ್ರಯಾಣಿಕರನ್ನು ನಿರ್ವಹಿಸಬಲ್ಲ ಹೊಸ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಎ321 ದರ್ಜೆಯ ವಿಮಾನಗಳ ಕಾರ್ಯಾಚರಣೆ ಸಾಧ್ಯವಾಗುವಂತೆ 12 ಪಾರ್ಕಿಂಗ್ ಬೇ ಅಭಿವೃದ್ಧಿಪಡಿಸಲಾಗುತ್ತಿದ್ದು, ರಾತ್ರಿ ವೇಳೆಯಲ್ಲೂ ಲ್ಯಾಂಡಿಂಗ್ ಆಗುವಂತೆ ಕ್ರಮ ವಹಿಸಲಾಗಿದೆ. ಜತೆಗೆ ಬೆಳಗಾವಿಯಿಂದ ಫೌಂಡ್ರಿ, ಏರೋಸ್ಪೇಸ್ ಸಾಧನಗಳು, ಅಲ್ಯುಮಿನಿಯಂ ಸಾಧನಗಳು, ಹಣ್ಣು ಮತ್ತು ತರಕಾರಿಗಳನ್ನು ಸಾಗಿಸಲು ಪ್ರತ್ಯೇಕ ಟರ್ಮಿನಲ್ ಇದೆ. ಇದಲ್ಲದೆ ಬೆಳಗಾವಿಯಲ್ಲಿ 3 ವಿ.ವಿ,ಗಳು, 3 ಮೆಡಿಕಲ್ ಕಾಲೇಜುಗಳು, ಕೆಎಲ್‌ಇ ವಿವಿ ಎಲ್ಲವೂ ಇದ್ದು ವಿಶೇಷವಾಗಿ ಮಲೇಷ್ಯಾದಿಂದ ಹೆಚ್ಚಿನ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ಇನ್ನೊಂದೆಡೆ, ರಕ್ಷಣಾ ವಲಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರದ ಏರ್‌ಮೆನ್ ತರಬೇತಿ ಶಾಲೆ, ಕಮ್ಯಾಂಡೋ ತರಬೇತಿ ಕೇಂದ್ರ, ಜೂನಿಯರ್ ಲೀಡರ್ಸ್ ವಿಂಗ್, ಇನ್ಫೆಂಟ್ರಿ ಸ್ಕೂಲ್, ಮರಾಠಾ ಲಘು ಪದಾತಿ ದಳದ ಕೇಂದ್ರ ಮತ್ತು ಐಟಿಬಿಪಿ ತರಬೇತಿ ಕೇಂದ್ರಗಳಿವೆ. ಇವೆಲ್ಲವನ್ನೂ ಮೇಲ್ದರ್ಜೆಗೇರಿಸಲು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಕೇಂದ್ರ ವಿಮಾನಯಾನ ಸಚಿವರಿಗೆ ಮನದಟ್ಟು ಮಾಡಿಕೊಟ್ಟರು.
ಹುಬ್ಬಳ್ಳಿಯಲ್ಲಿ ಕೂಡ 16,900 ಚ.ಮೀ. ವಿಸ್ತೀರ್ಣದ ಹೊಸ ಟರ್ಮಿನಲ್ ನಿರ್ಮಿಸಲಾಗುತ್ತಿದ್ದು, ಎಬಿ320 ದರ್ಜೆಯ ವಿಮಾನಗಳ ನಿರ್ವಹಣೆ ಸಾಧ್ಯವಾಗುವಂತೆ ಮಾಡಲಾಗುತ್ತಿದೆ. ಇಲ್ಲಿರುವ ಕಾರ್ಗೋ ಟರ್ಮಿನಲ್‌ನಲ್ಲಿ ಈಗ ವಾರ್ಷಿಕ 15 ಟನ್ ಸರಕು ಸಾಗಣೆ ಆಗುತ್ತಿದೆ. ಜತೆಗೆ ವರ್ಷಕ್ಕೆ 3 ಲಕ್ಷ ಪ್ರಯಾಣಿಕರ ನಿರ್ವಹಣೆ ನಡೆಯುತ್ತಿದೆ. ಮೊದಲಿನಿಂದಲೂ ವಾಣಿಜ್ಯ ವಲಯವಾಗಿರುವ ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ಐಐಟಿ, ಐಐಐಟಿ ಸಂಸ್ಥೆಗಳು ಬಂದಿದ್ದು, ಕಿಮ್ಸ್ ಆಸ್ಪತ್ರೆ ಕೂಡ ಗಮನ ಸೆಳೆಯುತ್ತಿದೆ ಎಂದು ಸಚಿವ ಪಾಟೀಲ ವಿವರಿಸಿದ್ದಾರೆ.
755 ಎಕರೆ ಇರುವ ಬೆಳಗಾವಿ ಏರ್ಪೋರ್ಟ್ 1990ರಿಂದ ಮತ್ತು 957 ಎಕರೆ ಇರುವ ಹುಬ್ಬಳ್ಳಿ ಏರ್ಪೋರ್ಟ್ 1980ರಿಂದ ಸಕ್ರಿಯವಾಗಿವೆ. ಇವುಗಳನ್ನು ಅಂತಾರಾಷ್ಟ್ರೀಯ ಮೇಲ್ದರ್ಜೆಗೆ ಏರಿಸಿದರೆ ಮಧ್ಯಪ್ರಾಚ್ಯ ದೇಶಗಳು, ಸಿಂಗಪುರ ಸೇರಿದಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳೊಂದಿಗೆ ಸುಗಮ ವಿಮಾನ ಸಂಚಾರ ಸಾಧ್ಯವಾಗಲಿದೆ. ಜತೆಗೆ ಇ-ಕಾಮರ್ಸ್ ಅಭಿವೃದ್ಧಿಯಾಗಲಿದ್ದು, ಉತ್ತರ ಕರ್ನಾಟಕದ ಈ ಎರಡೂ ನಗರಗಳು ಲಾಜಿಸ್ಟಿಕ್ಸ್ ಹಬ್ ಆಗಿ ಬೆಳವಣಿಗೆಯಾಗಲಿವೆ ಎಂದು ಅವರು ಕೇಂದ್ರ ಸಚಿವರಿಗೆ ತಿಳಿಸಿದರು.







