ಬೆಂಗಳೂರು(www.thenewzmirror.com): ರಾಜ್ಯ ಹೆದ್ದಾರಿಯಾದ ದಾಬಸ್ ಪೇಟೆ, ರಾಜಾನುಕುಂಟೆ, ಏರ್ ಪೋರ್ಟ್ ರಸ್ತೆಯಲ್ಲಿ ಕಾಮಗಾರಿಗಳನ್ನು ಪೂರ್ಣ ಗೊಳಿಸಲು ಕ್ರಮವಹಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ವಿಧಾನಸಭಾ ಅಧಿವೇಶದಲ್ಲಿಂದು ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಪ್ರಶ್ನೋತ್ತರ ವೇಳೆಯಲ್ಲಿ ಪ್ರಸ್ತಾಪಿಸಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಒಟ್ಟಾರೆ 21.38 ಕಿ.ಮೀ ರಸ್ತೆ ಅಭಿವೃದ್ಧಿ ಪೈಕಿ ಇಲ್ಲಿಯವರೆಗೆ 8.04 ಕಿ.ಮೀ ಕಾಮಗಾರಿ ಪೂರ್ಣಗೊಂಡಿದ್ದು, ಬಾಕಿ 13.34 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸ್ಥಳೀಯರು ಅಡ್ಡಪಡಿಸಿದ ಕಾರಣ ಭೂಸ್ವಾಧೀನ ಕಾರ್ಯ ವಿಳಂಬವಾಗಿರುತ್ತದೆ. ಸ್ಥಳೀಯ ರೈತರನ್ನು ಮನವೊಲಿಸಿ, ಬಾಕಿ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೂ.419.46 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ ಪಡೆದು ಕಾಮಗಾರಿಯನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗುವುದು ಎಂದರು.
ಮಧುರೆಯಿಂದ ರಾಜಾನುಕುಂಟೆ ಮಾರ್ಗ ಎಂ.ವಿ.ಸೋಲಾರ್ (ದೇವನಹಳ್ಳಿ ರಸ್ತೆ) ವರೆಗಿನ ರಸ್ತೆ ಭಾಗದಲ್ಲಿ ಬರುವ ರಾಜಾನುಕುಂಟೆ ಹಾಗೂ ನಾರಾಯಣಪುರ ರೈಲು ಮೇಲ್ಸೇತುವೆಗಳ ಎರಡು ಕಾಮಗಾರಿಗಳನ್ನು ಪ್ಯಾಕೇಜ್ 2ಡಿ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ನಾರಾಯಣಪುರ ರೈಲು ಮೇಲ್ಸೇತುವೆಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ರಾಜಾನುಕುಂಟೆ ರೈಲು ಮೇಲ್ಸೇತುವೆ ಕಾಮಗಾರಿಗೆ ರೈಲ್ವೆ ಇಲಾಖೆಯ ಪರಿಷ್ಕೃತ ಸಾಮಾನ್ಯ ಪಂಕ್ತೀಕರಣ ನಕ್ಷೆ ಮತ್ತು ಮೊದಲಿನ 40 ಮೀಟರ್ ಸ್ಪ್ಯಾನ್‌ನಿಂದ 54 ಮೀಟರ್ ಸೇತುವೆ ಹಾಗೂ ಇತರೆ ಅಂಶಗಳ ಪರಿಷ್ಕೃತ ವಿನ್ಯಾಸದನ್ವಯ ಅಗತ್ಯವಿರುವ ಹೆಚ್ಚುವರಿ ಜಮೀನುಗಳ ಭೂಸ್ವಾಧೀನ ಪಡಿಸಿಕೊಳ್ಳಲು ಆಗಿರುವ ವಿಳಂಬದಿಂದ ಹಾಗೂ ಕಾಮಗಾರಿಯ ರೂ. 304.32 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ ಆಗಬೇಕಾಗಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿರುತ್ತದೆ ಸದರಿ ಕಾಮಗಾರಿಗೆ ಅಗತ್ಯವಿರುವ ಹೆಚ್ಚುವರಿ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲುಜೆ.ಎಂ.ಸಿ ಪ್ರಗತಿಯಲ್ಲಿದೆ. ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.







