ಬೆಂಗಳೂರು(www.thenewzmirror.com):ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ ಎಂಬ ಸ್ಪಷ್ಟನೆಗೆ ತಿದ್ದುಪಡಿಯೊಂದಿಗೆ 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ವಿಧಾನಸಭೆಯಲ್ಲಿ 2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಮಂಡಿಸಿದರು.ಮಸೂದೆ ಅಂಗೀಕಾರಗೊಂಡಿದ್ದರೂ ಕೆಲವರು ನ್ಯಾಯಾಲಯದಲ್ಲಿ ಅರ್ಜಿ ಹಾಕಿದ್ದರು. ಹೀಗಾಗಿ ಈ ಮಸೂದೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಂವಿಧಾನದ 74ನೇ ತಿದ್ದುಪಡಿ ಅಡಿಯಲ್ಲಿ ಬರುವ ಪಾಲಿಕೆಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.
ಈಗ ಜಾರಿಯಲ್ಲಿರುವ ಕಾಯ್ದೆ ಅನುಸಾರ ಜಿಬಿಎ ಅಡಿಯಲ್ಲಿ ರಚಿಸಲಾಗಿರುವ ಪಾಲಿಕೆಗಳ ವಿಚಾರದಲ್ಲಿ ಪ್ರಾಧಿಕಾರವು ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದು ಯಾರೋ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಪಾಲಿಕೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಈ ಅಂಶವನ್ನು ಪ್ರಸ್ತುತ ತಿದ್ದುಪಡಿ ವಿಧೇಯಕದಲ್ಲಿ ತೆಗೆದು ಹಾಕಲಾಗಿದೆ. ಪಾಲಿಕೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಿಲ್ಲ. ಪಾಲಿಕೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿವೆ. ಪಾಲಿಕೆಗಳ ಕಾರ್ಯಚಟುವಟಿಕೆಯಲ್ಲಿ ಜಿಬಿಎ ಹಸ್ತಕ್ಷೇಪ ಇಲ್ಲ ಎಂಬ ಸ್ಪಷ್ಟನೆ ನೀಡಲು ಈ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.
ವಿಪಕ್ಷ ಸದಸ್ಯರ ಆಕ್ಷೇಪಕ್ಕೆ ಅಸಮಧಾನ ವ್ಯಕ್ತಪಡಿಸಿದ ಡಿಸಿಎಂ, ನಿಮಗೆ ಇದರಲ್ಲಿ ಆಸಕ್ತಿ ಇಲ್ಲ ಎಂದಾದರೆ ನಾನು ಈ ತಿದ್ದುಪಡಿ ವಾಪಸ್ ಪಡೆಯಲು ಸಿದ್ಧ. ನಾವು ಅಧಿಕಾರದಲ್ಲಿ ಇಲ್ಲದ ಸಂದರ್ಭದಲ್ಲಿ ಬೇರೊಬ್ಬರು ಇದನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂಬ ಉದ್ದೇಶದಿಂದ ಈ ತಿದ್ದುಪಡಿ ತಂದಿದ್ದೇವೆ. ಮುಂದೆ ಸರ್ಕಾರ ಹಾಗೂ ಪಾಲಿಕೆಗೆ ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದಾಗ ಸರಕಾರ ಪಾಲಿಕೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬಾರದು ಎಂಬುದು ನಮ್ಮ ಉದ್ದೇಶ ಎಂದರು.
ಬೆಂಗಳೂರಿನ ಭವಿಷ್ಯದ ವಿಚಾರದಲ್ಲಿ ರಾಜಕಾರಣ ಮಾಡಲು ಇಷ್ಟವಿಲ್ಲ, ನಾನು ಅದನ್ನು ಮಾಡುವುದೂ ಇಲ್ಲ. ನಾವು ಪಾಲಿಕೆಗಳಿಗೆ ತೆರಿಗೆ ಸಂಗ್ರಹಕ್ಕೆ ಅಧಿಕಾರ, ಆರ್ಥಿಕ ಸ್ವಾಯತ್ತತೆ, ಚುನಾವಣೆ, ಮೀಸಲಾತಿ ಸೇರಿದಂತೆ ಯಾವುದೇ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಸಂವಿಧಾನದ 74ನೇ ತಿದ್ದುಪಡಿಯನ್ನು ಸಂಪೂರ್ಣವಾಗಿ ರಕ್ಷಣೆ ಮಾಡಲಾಗಿದೆ. ಈ ತಿದ್ದುಪಡಿ ಸ್ಪಷ್ಟನೆಗಾಗಿ ತಂದಿದ್ದು, ಇದನ್ನು ಅಂಗೀಕರಿಸಬೇಕು” ಎಂದು ಮನವಿ ಮಾಡಿದರು.
ಈ ವೇಳೆ ಅಡ್ಡಿಪಡಿಸಲು ಮುಂದಾದ ಮುನಿರತ್ನ ಅವರಿಗೆ ತಿರುಗೇಟು ನೀಡಿದ ಶಿವಕುಮಾರ್ ಅವರು, “ಮುನಿರತ್ನ ಅವರೇ ನಿಮಗೂ ಚರ್ಚೆ ಮಾಡಲು ಅವಕಾಶ ನೀಡುತ್ತೇವೆ. ನಿಮ್ಮನ್ನು ತಯಾರು ಮಾಡಿದ್ದು ನಾವೇ. ನಿಮ್ಮ ಮಾತನ್ನೂ ಆಲಿಸುತ್ತೇವೆ. ನೀನು ತನಿಖೆ ಮಾಡಲು ಎಲ್ಲೇಲ್ಲೋ ಸುತ್ತುತ್ತಿದ್ದೀಯಾ, ಹೀಗಾಗಿ ನಿನ್ನ ಹೆಸರು ಮರೆತಿದ್ದೇವೆ. ನಿನ್ನ ಬಗ್ಗೆಯೂ ನಾವು ತನಿಖೆ ಮಾಡಬೇಕಿದೆ ಎಂದು ಕುಟುಕಿದರು.ನಂತರ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ ನೀಡಿತು.







