ಬೆಂಗಳೂರು(www.thenewzmirror.com): ಶಾಲಾ ಶಿಕ್ಷಣ ಇಲಾಖೆ ಸದಾ ಶಿಕ್ಷಕರ ಜೊತೆಗೆ ನಿಲ್ಲುತ್ತದೆ, ಶಿಕ್ಷಕರ ಬೇಡಿಕೆ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಚರ್ಚಿಸಿ ನಿರ್ಧರಿಸಲಿದ್ದು ಯಾವುದೇ ಕಾರಣಕ್ಕೂ ಶಿಕ್ಷಕರ ಸಂಘ ಮುಷ್ಕರಕ್ಕೆ ಹೋಗಬಾರದೆಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮನವಿ ಮಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದೊಂದಿಗೆ ಬೆಂಗಳೂರಿನ ಮಲ್ಲೇಶ್ವರದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಚೇರಿಯಲ್ಲಿ ಸಭೆ ನಡೆಸಿದರು. ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಲಿ ಅವರ ನೇತೃತ್ವದಲ್ಲಿ ಹಲವು ಪ್ರತಿನಿಧಿಗಳು ಸಚಿವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಮಂಡಿಸಿದರು.
ಶಿಕ್ಷಕರ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಶಾಲಾ ಶಿಕ್ಷಣ ಇಲಾಖೆ ಸದಾ ಶಿಕ್ಷಕರ ಜೊತೆಗೆ ನಿಲ್ಲುವುದು ಎಂದು ಭರವಸೆ ನೀಡಿದರು. ಅಲ್ಲದೇ, ಈ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತರುತ್ತೇವೆ ಎಂದು ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಸಕಾರಾತ್ಮಕ ನಿರ್ಧಾರದ ನಿರೀಕ್ಷೆಯಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಸಚಿವರು, ಶಿಕ್ಷಕರ ಸಂಘವನ್ನು ಮುಷ್ಕರಕ್ಕೆ ಹೋಗಬಾರದೆಂದು ತಿಳಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಾದ ಡಾ. ಕೆ. ವಿ. ತ್ರಿಲೋಕ್ ಚಂದ್ರ ಉಪಸ್ಥಿತರಿದ್ದರು.




